ಸಿದ್ದರಾಮಯ್ಯ ಲಿಂಗಾಯತರಿಗೆ ಅವಮಾನ ಮಾಡಿಲ್ಲ: ರಣದೀಪ್‌ಸಿಂಗ್‌ ಸುರ್ಜೇವಾಲಾ

By Kannadaprabha News  |  First Published Apr 24, 2023, 11:06 AM IST

ಬಸವರಾಜ ಬೊಮ್ಮಾಯಿ ಅವರು 40 ಪರ್ಸೆಂಟ್‌ ಕಮಿಷನ್‌ ಮೂಲಕ ರಾಜ್ಯಕ್ಕೆ ಕಳಂಕ ತಂದಿದ್ದಾರೆ ಎಂಬ ನೆಹರೂ ಓಲೇಕಾರ್‌ ಹೇಳಿಕೆಯನ್ನು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆಯೇ ಹೊರತು ಅವರು ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿಲ್ಲ. 


ಬೆಂಗಳೂರು (ಏ.24): ‘ಬಸವರಾಜ ಬೊಮ್ಮಾಯಿ ಅವರು 40 ಪರ್ಸೆಂಟ್‌ ಕಮಿಷನ್‌ ಮೂಲಕ ರಾಜ್ಯಕ್ಕೆ ಕಳಂಕ ತಂದಿದ್ದಾರೆ ಎಂಬ ನೆಹರೂ ಓಲೇಕಾರ್‌ ಹೇಳಿಕೆಯನ್ನು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆಯೇ ಹೊರತು ಅವರು ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿಲ್ಲ. ಬೊಮ್ಮಾಯಿ ಅವರು ತಾವೊಬ್ಬರೇ ಇಡೀ ಲಿಂಗಾಯತ ಸಮಾಜದ ಪ್ರತೀಕ ಎಂಬ ಭ್ರಮೆಯಿಂದ ಹೊರಬರಬೇಕು’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಜೆ.ಎಚ್‌.ಪಟೇಲ್‌ ಅಂತಹ ನಾಯಕರು ಲಿಂಗಾಯತ ಸಮುದಾಯ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದರು. ಆದರೆ ಬೊಮ್ಮಾಯಿ ಅವರು ರಾಜ್ಯಕ್ಕೆ ಕಳಂಕ ತಂದಿದ್ದಾರೆ. ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರೇ ಹೇಳಿರುವಂತೆ ಬಸವರಾಜ ಬೊಮ್ಮಾಯಿ ಅವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಅದನ್ನು ವಿನಾಕಾರಣ ವಿವಾದ ಮಾಡಿ ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳಿಂದ ತಪ್ಪಿಸಿಕೊಳ್ಳಲು ಬೊಮ್ಮಾಯಿ ಪ್ರಯತ್ನಿಸುತ್ತಿದ್ದಾರೆ. ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆಂಬುದನ್ನು ಅವರು ಮರೆಯಬಾರದು ಎಂದು ಹೇಳಿದರು.

Tap to resize

Latest Videos

ಕಂಪನಿ ಕೆಲಸ ಬಿಟ್ಟು, ರಾಜಕೀಯಕ್ಕೆ ಬಂದ ಎಂಬಿಎ ಪದವೀಧರೆ: ಎಎಪಿಯಿಂದ ಸುಮನಾ ಸ್ಪರ್ಧೆ

ಬಿಜೆಪಿ ಲಿಂಗಾಯತ ಸಮಾಜದ ಯಡಿಯೂರಪ್ಪ ಅವರನ್ನು ಬಳಸಿ ಮೂಲೆಗೆ ಬಿಸಾಡಿದೆ. ಯಡಿಯೂರಪ್ಪ ಅವರ ಜತೆ ನಮಗೆ ಸಾಕಷ್ಟುವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ನಾವು ಯಡಿಯೂರಪ್ಪ ಅವರನ್ನು ಶೋಭಾ ಕರಂದ್ಲಾಜೆ ಅವರ ಕೆಳಗೆ ನೇಮಕ ಮಾಡುತ್ತಿರಲಿಲ್ಲ. ಶೆಟ್ಟರ್‌ಗೆ ಅಪಮಾನ ಮಾಡಿದ್ದು, ಉಪಮುಖ್ಯಮಂತ್ರಿಯಾಗಿದ್ದ ಸವದಿ ಅವರನ್ನು ಮೂಲೆ ಗುಂಪು ಮಾಡಿದ್ದು ಬಿಜೆಪಿ. ಇದೇ ರೀತಿ ಹಲವು ಲಿಂಗಾಯತ ನಾಯಕರನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ದೂರಿದರು.

ಈಶ್ವರಪ್ಪಗೆ ಮೋದಿ ಕರೆ ನಾಚಿಕೆಗೇಡು: ಭ್ರಷ್ಟಾಚಾರ ಆರೋಪದ ಮೇಲೆ ಸಚಿವ ಸ್ಥಾನ ಕಳೆದುಕೊಂಡಿರುವ, ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್‌ ಪಾಟೀಲ್‌ ಸಾವಿಗೆ ಕಾರಣರಾದ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಪ್ರಶಂಸಿಸುವ ಮೂಲಕ 40 ಪರ್ಸೆಂಟ್‌ ಕಮಿಷನ್‌ಗೆ ಅಂಕಿತ ಹಾಕಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಟೀಕಿಸಿದ್ದಾರೆ. ಸಂತೋಷ್‌ ಪಾಟೀಲ್‌ ತನ್ನ ಸಾವಿಗೆ ಕೆ.ಎಸ್‌. ಈಶ್ವರಪ್ಪ ಅವರೇ ಕಾರಣ ಎಂದು ವಾಟ್ಸಾಪ್‌ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಯುವಕನಿಗೆ ಶಾಸಕನ ಕಪಾಳಮೋಕ್ಷ: ಚರ್ಚೆಗೆ ಗ್ರಾಸವಾದ ಘಟನೆ ಬಗ್ಗೆ ಎಂ.ಬಿ.ಪಾಟೀಲ್ ಹೇಳಿದ್ದೇನು?

ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ಒಂದು ಸಾವಿನ ಪ್ರಕರಣದ ಆರೋಪಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ಮಾಡಿ ಪ್ರಶಂಸಿಸುತ್ತಾರೆ ಎಂದರೆ ಏನರ್ಥ ಎಂದು ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಮಂತ್ರಿ ಕಚೇರಿಯಿಂದ ದೇಶಕ್ಕೆ ಅವಮಾನ ಆಗಿದೆ. ರಾಜಕೀಯ ಲಾಭಕ್ಕೆ ಮೋದಿ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎಂಬುದು ಸಾಬೀತಾಗಿದೆ. ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಜೀವಕ್ಕೆ ಬೆಲೆ ಇಲ್ಲ ಎಂದು ಮೋದಿ ಹೇಳಿದಂತಾಗಿದೆ’ ಎಂದು ಟೀಕಿಸಿದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

click me!