
ಹುಬ್ಬಳ್ಳಿ (ಡಿ.01): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಮೇಲ್ನೋಟಕ್ಕೆ ಮಾತ್ರ ಕದನ ವಿರಾಮವಾಗಿದೆ. ಆದರೆ, ಇಬ್ಬರ ಮಧ್ಯದ ಮುಸುಕಿನ ಗುದ್ದಾಟ ಈಗಲೂ ಮುಂದುವರೆದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ಅಸ್ಥಿರತೆಗೆ ಬ್ರೇಕ್ ಬೀಳುತ್ತದೆ ಎಂಬ ಅಂದಾಜು ಹುಸಿಯಾಗಿದೆ. ಈಗಲೂ ಅಸ್ಥಿರತೆ ಮುಂದುವರೆದಿದ್ದು, ಎರಡು ಬಣದವರು ಶಾಸಕರ ಖರೀದಿಗೆ ಮುಗಿಬಿದ್ದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಶಾಸಕರ ಬೆಂಬಲ ಕ್ರೂಢೀಕರಿಸಲು ಮುಂದಾಗಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆ ಡೋಲಾಯಮಾನವಾಗಿದೆ. ದೇಶದಲ್ಲಿ ಎಲ್ಲೂ ಇರಲಾರದ ರಾಜಕೀಯ ಅಸ್ಥಿರತೆ ಕರ್ನಾಟಕ ರಾಜ್ಯದಲ್ಲಿದೆ ಎಂದು ಟೀಕಿಸಿದರು.
ಷಡ್ಯಂತ್ರ: ಎರಡೂವರೆ ವರ್ಷ ಅಧಿಕಾರ ಅನುಭವಿಸಿದ್ದೇನೆ. ಈಗ ಸಿಎಂ ಸ್ಥಾನವನ್ನು ಬಿಟ್ಟು ಕೊಡುತ್ತೇನೆ ಎಂದು ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಡಿಕೆಶಿಗೆ ಹೇಳಬಹುದಿತ್ತು. ಇಲ್ಲವೇ ಸಿದ್ದರಾಮಯ್ಯ ಹಿರಿಯರಿದ್ದಾರೆ, ಅವರೇ ಉಳಿದ ಅವಧಿಯಲ್ಲಿ ಸಿಎಂ ಆಗಿ ಮುಂದುವರೆಯಲಿ ಎಂದು ಡಿಕೆಶಿ ಉದಾರತೆ ತೋರಬಹುದಿತ್ತು. ಆದರೆ, ಇದ್ಯಾವುದೂ ಆಗಿಲ್ಲ. ಹೈಕಮಾಂಡ್ ತೀರ್ಮಾಣಕ್ಕೆ ಬದ್ಧ, ಅವರು ಹೇಳಿದಂತೆ ಕೇಳುತ್ತೇವೆ ಎಂಬ ಹೇಳಿಕೆ ನೀಡಲು ಅರ್ಧ ಇಡ್ಲಿ ತಿನ್ನುವ ಅವಶ್ಯಕತೆ ಇತ್ತಾ? ಈ ಇಬ್ಬರದೂ ಮೇಲ್ನೋಟಕ್ಕೆ ಕದನ ವಿರಾಮವಾದಂತಿದೆ. ಆದರೆ, ಇಬ್ಬರೂ ಒಬ್ಬರನ್ನೊಬ್ಬರು ಹೇಗೆ ಬಾವಿಗೆ ದೂಡಬೇಕು ಎಂಬ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಜೋಶಿ ವ್ಯಂಗವಾಡಿದರು.
ಭಯಂಕರ ಭ್ರಷ್ಟಾಚಾರದಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಅಧಿಕಾರಿಗಳಿಂದ ಬೇಕಾಬಿಟ್ಟಿ ಆಡಳಿತ ನಡೆದಿದ್ದು, ಹಣಕಾಸು ದಯನೀಯ ಸ್ಥಿತಿಗೆ ತಲುಪಿದೆ. ಸಿಎಂ ಕುರ್ಚಿ ಗುದ್ದಾಟದಲ್ಲಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಬೇಕಿದ್ದ ಕಾಂಗ್ರೆಸ್ ಹೈಕಮಾಂಡ್ ಅಸಹಾಯಕತೆ ತೋರಿದೆ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.