ಹಜ್‌ ಭವನಕ್ಕೆ ಸಿದ್ದರಾಮಯ್ಯ 5000 ಕೋಟಿ ನೀಡಿಲ್ಲ: ಜಮೀರ್‌ ಅಹಮದ್‌ ಖಾನ್‌

By Kannadaprabha News  |  First Published Jun 9, 2023, 8:44 AM IST

ಹಜ್‌ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 5000 ಕೋಟಿ ರು. ಕೊಟ್ಟಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಸುಳ್ಳು ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ.
 


ಬೆಂಗಳೂರು (ಜೂ.09): ಹಜ್‌ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 5000 ಕೋಟಿ ರು. ಕೊಟ್ಟಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಸುಳ್ಳು ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ. ಈ ರೀತಿ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಶುಕ್ರವಾರ ಪೊಲೀಸರಿಗೆ ದೂರು ನೀಡಲಾಗುವುದು. ಇನ್ನು ಮುಂದೆ ಯಾರೇ ಇಂತಹ ಅಪಪ್ರಚಾರಕ್ಕೆ ಮುಂದಾದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಕರ್ನಾಟಕ ಹಜ್‌ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಹಜ್‌ ಯಾತ್ರಿಕರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನಾನು ಹಜ್‌ ಭವನ ನಿರ್ಮಾಣಕ್ಕೆ 5000 ಕೋಟಿ ರು. ನೀಡುವಂತೆ ಬೇಡಿಕೆ ಇಟ್ಟಿದ್ದೇನೆ ಎಂದು ಕೆಲವರು ಟ್ರೋಲ್‌ ಮಾಡುತ್ತಿದ್ದಾರೆ. ಅದು ಶುದ್ಧ ಸುಳ್ಳು ಸುದ್ದಿ. ಹಜ್‌ ಭವನದ ನವೀಕರಣಕ್ಕೆ ಐದು ಕೋಟಿ ರು. ಕೊಟ್ಟಿದ್ದಾರೆ. ಅದಕ್ಕೆ ಕೃತಜ್ಞತೆ ಸಲ್ಲಿಸಿದ್ದೇನೆ ಎಂದು ಹೇಳಿದರು.

Tap to resize

Latest Videos

ಶಿವರಾಮ ಕಾರಂತ ಲೇಔಟ್‌ಗೆ ಜಾಗ ಕೊಟ್ಟವರು, ಬಿಡಿಎಗೂ ಲಾಭ ಆಗುವಂತೆ ಕ್ರಮ: ಡಿಕೆಶಿ

ವಸತಿ ಯೋಜನೆಗಳ ಜಾರಿಗೆ ಜಮೀರ್‌ ಗಡುವು: ಬಡವರಿಗಾಗಿ ರೂಪಿಸಿರುವ ಒಂದೊಂದು ವಸತಿ ಯೋಜನೆಗೆ ನಿಗದಿತ ಕಾಲಮಿತಿ ಹಾಕಿಕೊಂಡು ಅದನ್ನು ಪೂರ್ಣಗೊಳಿಸಿದ ಬಳಿಕವೇ ಮತ್ತೊಂದು ಯೋಜನೆ ಕೈಗೆತ್ತಿಕೊಳ್ಳಬೇಕೆಂದು ವಸತಿ ಸಚಿವ ಜಮೀರ್‌ ಅಹಮದ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಸತಿ ಇಲಾಖೆ ವ್ಯಾಪ್ತಿಗೆ ಬರುವ ರಾಜೀವ್‌ ಗಾಂಧಿ ವಸತಿ ನಿಗಮದ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಿಗದಿತ ಅವಧಿಯೊಳಗೆ ಯೋಜನೆ ಪೂರ್ಣಗೊಳ್ಳದಿದ್ದರೆ ಬಡವರಿಗೆ ಸೂರು ಕಲ್ಪಿಸುವ ಉದ್ದೇಶ ಈಡೇರುವುದಿಲ್ಲ. ಯಾವುದೇ ಕಾರಣಕ್ಕೂ ವಿಳಂಬ ಸಹಿಸುವುದಿಲ್ಲ. 

ಪ್ರತಿ ಯೋಜನೆಗೆ ಬೇಕಾದ ಹಣಕಾಸು ಹೊಂದಿಸಿಕೊಂಡು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಆದ ನಂತರವಷ್ಟೇ ಮತ್ತೊಂದು ಯೋಜನೆ ಪ್ರಾರಂಭಿಸಬೇಕು. ಆಗ ಮಾತ್ರ ಜನರ ನಂಬಿಕೆ ಗಳಿಸಲು ಸಾಧ್ಯ. ಇದು ಕಡ್ಡಾಯವಾಗಿ ಪಾಲನೆ ಆಗಲೇಬೇಕು ಎಂದು ಸೂಚಿಸಿದರು. ಪ್ರಧಾನ ಮಂತ್ರಿ ಅವಾಸ್‌ ಯೋಜನೆಯ ಅವಧಿ ಜೂನ್‌ಗೆ ಮುಗಿಯಲಿದ್ದು, 1.41 ಲಕ್ಷ ಮನೆಗಳ ಗುರಿಯ ಪೈಕಿ 37 ಸಾವಿರ ಮನೆಗಳಿಗೆ ಮಾತ್ರ ಅನುಮತಿ ದೊರೆತಿದೆ. ಚುನಾವಣೆ ಮತ್ತಿತರರ ಕಾರಣಕ್ಕೆ ತಡವಾಗಿದ್ದರೆ ತಕ್ಷಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಮಯ ವಿಸ್ತರಣೆಗೆ ಅನುಮತಿ ಪಡೆದುಕೊಳ್ಳಿ. ಅಗತ್ಯವಾದರೆ ದೆಹಲಿಗೆ ತೆರಳಿ ಕೇಂದ್ರ ಸಚಿವರ ಜತೆಯೂ ಚರ್ಚೆ ಮಾಡುತ್ತೇನೆ ಎಂದರು.

ಮಗಳನ್ನು ಗಂಡನಿಗೆ ಒಪ್ಪಿಸದೆ ಕೋರ್ಟ್‌ನಲ್ಲಿ ಪತ್ನಿಯ ಹೈಡ್ರಾಮಾ: ಯಾಕೆ ಗೊತ್ತಾ?

ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಕಲ್ಪಿಸುವ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, 2017ರಲ್ಲಿ ಆರಂಭವಾದ ಯೋಜನೆ ಇನ್ನೂ ಮುಗಿದಿಲ್ಲ. 1040 ಎಕರೆ ಪೈಕಿ 553 ಎಕರೆ ಮಾತ್ರ ಸ್ವಾಧೀನಕ್ಕೆ ಪಡೆದಿದ್ದು, 50,797 ಅರ್ಜಿದಾರರಲ್ಲಿ 12,158 ಮಂದಿ ಆರಂಭಿಕ ಹಣ ಪಾವತಿಸಿದ್ದಾರೆ. ಐದು ಸಾವಿರ ಮನೆ ಪೂರ್ಣಗೊಳಿಸಲಾಗಿದೆ. ಇನ್ನೂ ಫಲಾನುಭವಿಗಳಿಗೆ ಕೊಟ್ಟಿಲ್ಲ, ಹೀಗಾದರೆ ನಂಬಿಕೆ ಬರುವುದಾದರೂ ಹೇಗೆ ಎಂದು ಕಿಡಿಕಾರಿದರು. ಸಭೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್‌, ವಸತಿ ಇಲಾಖೆ ಕಾರ್ಯದರ್ಶಿ ರವಿಕುಮಾರ್‌ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

click me!