ಗೋ ಹತ್ಯೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಕರ್ನಾಟಕ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್‌ಗೆ ಕಾಂಗ್ರೆಸ್ ಹೈಕಮಾಂಡ್ ಗುರುವಾರ ಛೀಮಾರಿ ಹಾಕಿದ್ದು, ಮಿತಿಯಲ್ಲಿರುವಂತೆ ಎಚ್ಚರಿಕೆ ನೀಡಿದೆ.
ನವದೆಹಲಿ (ಜೂ.09): ಗೋ ಹತ್ಯೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಕರ್ನಾಟಕ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್‌ಗೆ ಕಾಂಗ್ರೆಸ್ ಹೈಕಮಾಂಡ್ ಗುರುವಾರ ಛೀಮಾರಿ ಹಾಕಿದ್ದು, ಮಿತಿಯಲ್ಲಿರುವಂತೆ ಎಚ್ಚರಿಕೆ ನೀಡಿದೆ. ‘ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಪುನರ್ ಪರಿಶೀಲನೆ ನಡೆಸಲಿದೆ. ಎಮ್ಮೆ, ಕೋಣಗಳನ್ನೇ ಹತ್ಯೆ ಮಾಡುತ್ತೇವೆ. ಹಾಗಿದ್ದಾಗ ಹಸುಗಳನ್ನು ಏಕೆ ಕಡಿಯಬಾರದು?’ ಎಂದು ಸಚಿವ ವೆಂಕಟೇಶ್ ಕಳೆದ ಶನಿವಾರ ಪ್ರಶ್ನೆ ಮಾಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಬಿಜೆಪಿ ಇದನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪ ಮಾಡಿ ಕಾಂಗ್ರೆಸ್ ಅನ್ನು ಪ್ರಶ್ನಿಸಿತ್ತು. ಗುರುವಾರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ‘ನಿಮ್ಮದೇ ಸಚಿವಾಲಯದ ಅಡಿಯಲ್ಲಿ ಬರುವ ಅಂಶಗಳ ಬಗ್ಗೆ ಗಮನ ಕೊಡಿ. ಕಾಯ್ದೆ ರೂಪಿಸುವುದು ಹಾಗೂ ರದ್ದು ಮಾಡುವುದು ನಿಮ್ಮ ವ್ಯಾಪ್ತಿಗೆ ಬರಲ್ಲ. ಹೀಗಾಗಿ ನಿಮ್ಮ ವ್ಯಾಪ್ತಿಗೆ ಬರದ ನೀತಿಗಳ ಬಗ್ಗೆ ನಿರ್ಧಾರ ಪ್ರಕಟಿಸಬೇಡಿ ಎಂದು ಹಾಗೂ ಮಿತಿಯಲ್ಲಿರಿ. ನಾವು (ಸರ್ಕಾರದ ಪ್ರಮುಖರು) ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಸಚಿವರಿಗೆ ಸೂಚಿಸಲಾಗಿದೆ’ ಎಂದು ಸುರ್ಜೇವಾಲಾ ಹೇಳಿದ್ದಾರೆ.
ರಾಜ್ಯದ ಡ್ಯಾಂಗಳು ಖಾಲಿ: 10 ಜಲಾಶಯಗಳಲ್ಲಿ ನೀರು ಬರಿದು!
ಅಲ್ಲದೆ, ‘ಡೈರಿ ರೈತರ ಹಿತರಕ್ಷಣೆ ಮತ್ತು ರೈತರು ನೀಡುವ ಹಾಲಿಗೆ ಉತ್ತಮ ಬೆಲೆ ನೀಡುವ ಬಗ್ಗೆ ಸಚಿವರು ಗಮನ ಹರಿಸಬೇಕು ಎಂದೂ ಸೂಚಿಸಲಾಗಿದೆ’ ಎಂದಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಕುರಿತಾಗಿ ಮಾತನಾಡಿದ್ದ ವೆಂಕಟೇಶ್, ‘ನಾವು ಇನ್ನೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಿತ್ತು. ಕೋಣಗಳು ಮತ್ತು ಎಮ್ಮೆಗಳನ್ನು ವಧೆ ಮಾಡಲು ಅನುಮತಿ ನೀಡಿರುವಾಗ, ಗೋ ಹತ್ಯೆಗೆ ಮಾತ್ರ ಮಾಡಬಾರದು ಎಂದೇಕೆ ಜನ ಹೇಳುತ್ತಿದ್ದಾರೆ. ನಾವು ಈ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಹೇಳಿದ್ದರು.
ಹಸು ಕಡಿಯುವ ಸಚಿವರ ಹೇಳಿಕೆಗೆ ಮಾಜಿ ಸಿಎಂ ಬೊಮ್ಮಾಯಿ ಕಿಡಿ
ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರು ಕಾಂಗ್ರೆಸ್ ಇದಕ್ಕೆ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದರು. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ ಸಚಿವ ಪರಷೋತ್ತಮ್ ರೂಪಾಲಾ ಪ್ರತಿಕ್ರಿಯಿಸಿ, ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕಿ ಸೋನಿಯಾ ಗಾಂಧಿ ಈ ಬಗ್ಗೆ ಮಾತನಾಡಬೇಕು. ಕಾಂಗ್ರೆಸ್ ಸರ್ಕಾರ ಗೋ ಹತ್ಯೆ ಮಾಡುವ ಮೂಲಕ ಕರ್ನಾಟಕದಲ್ಲಿ ಆಡಳಿತ ಶುರು ಮಾಡಲು ಇಚ್ಛಿಸಿದೆಯೆ?’ ಎಂದು ಹೇಳಿದ್ದರು.
ಕಾಯ್ದೆ ರೂಪಿಸುವುದು ಹಾಗೂ ರದ್ದು ಮಾಡುವುದು ನಿಮ್ಮ (ವೆಂಕಟೇಶ್) ವ್ಯಾಪ್ತಿಗೆ ಬರಲ್ಲ. ಹೀಗಾಗಿ ಅಂತಹ ನೀತಿಗಳ ಬಗ್ಗೆ ನಿರ್ಧಾರ ಪ್ರಕಟಿಸಬೇಡಿ. ಮಿತಿಯಲ್ಲಿರಿ. ಸರ್ಕಾರದ ಪ್ರಮುಖರು ಈ ಬಗ್ಗೆ ನಿರ್ಧರಿಸುತ್ತಾರೆ.
- ರಣದೀಪ್ ಸುರ್ಜೇವಾಲಾ