'ಮುಕ್ತ ಚರ್ಚೆಗೆ ಬನ್ನಿ, ನೀವು ಖರೀದಿಸಿಟ್ಟಿರುವ 'ಟ್ರೋಲ್ ಗ್ಯಾಂಗ್' ಮೂಲಕ ಉತ್ತರ ಕೊಡಿಸಲು ಹೋಗ್ಬೇಡಿ'

Published : May 29, 2022, 08:38 PM IST
'ಮುಕ್ತ ಚರ್ಚೆಗೆ ಬನ್ನಿ, ನೀವು ಖರೀದಿಸಿಟ್ಟಿರುವ  'ಟ್ರೋಲ್ ಗ್ಯಾಂಗ್' ಮೂಲಕ ಉತ್ತರ ಕೊಡಿಸಲು ಹೋಗ್ಬೇಡಿ'

ಸಾರಾಂಶ

* ಸಿಎಂ ಬಸವರಾಜ ಬೊಮ್ಮಾಯಿಗೆ ಓಪನ್ ಚಾಲೆಂಜ್ ಹಾಕಿದ ಸಿದ್ದರಾಮಯ್ಯ * ಇಬ್ಬರು ನಾಯಕರ ಸಾಧನೆ ಬಗ್ಗೆ ಮುಕ್ತ ಚರ್ಚೆಗೆ ಬನ್ನಿ ಎಂದ ಸಿದ್ದು * ನೆಹರೂ ಅವರೊಂದಿಗೆ ಮೋದಿ ಹೋಲಿಕೆ ಸಾಧ್ಯವಿಲ್ಲ ಎಂದಿದ್ದ ಬೊಮ್ಮಾಯಿ

ಬೆಂಗಳೂರು, (ಮೇ.29): ಸಿದ್ದರಾಮಯ್ಯನವರು ದ್ರಾವಿಡರಾ ? ಆರ್ಯರಾ? ಹಾಗೂ ನೆಹರೂ ಅವರನ್ನು ಮೋದಿಗೆ ಹೋಲಿಸಲು ಸಾಧ್ಯವೇ ಇಲ್ಲ ಎನ್ನುವ ಸಿಎಂ ಬೊಮ್ಮಾಯಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಅಲ್ಲದೇ ಬಹಿರಂಗ ಸವಾಲು ಸಹ ಹಾಕಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯನವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು , ಅದು ಈ ಕೆಳಗಿನಂತಿದೆ ನೋಡಿ.

ಬಸವರಾಜ ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ. ಈ ಸ್ಪಷ್ಟತೆ ನನಗಿದೆ. ನಾನು ದ್ರಾವಿಡ ಮೂಲವನ್ನು ಉಳಿಸಿಕೊಂಡಿದ್ದೇನೆ, ನೀವು ಮಾತ್ರ ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದು ಪಕ್ಷಾಂತರ ಮಾಡಿದ್ದೀರಿ.
ಬೇಗ “ಘರ್ ವಾಪಸಿ”’ ಆಗಿಬಿಡಿ.

ನೆಹರೂ ಅವರನ್ನು ಮೋದಿಗೆ ಹೋಲಿಸಲು ಸಾಧ್ಯವೇ ಇಲ್ಲ ಎಂದು ಮತ್ತೆ ಮತ್ತೆ ಹೇಳುತ್ತೇನೆ. ಇಬ್ಬರು ನಾಯಕರ ಸಾಧನೆ ಬಗ್ಗೆ ಮುಕ್ತ ಚರ್ಚೆಗೆ ನೀವು ಸಿದ್ಧ ಇದ್ದರೆ ನಾನೂ ಸಿದ್ಧನಿದ್ದೇನೆ. ನನ್ನ ಮಾತಿಗೆ ನೀವು ಖರೀದಿಸಿಟ್ಟಿರುವ ‘’ಟ್ರೋಲ್ ಗ್ಯಾಂಗ್’’ ಮೂಲಕ ಉತ್ತರ ಕೊಡಿಸಲು ಹೋಗಬೇಡಿ. ‘’ಭಾರತ ಮಾತೆ ತನ್ನ ಭಕ್ತನನ್ನು ಕಳೆದುಕೊಂಡಿದ್ದಾಳೆ, ಶಾಂತಿ ತನ್ನ ರಕ್ಷಕನನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ, ನಿರಾಶ್ರಿತರು ತನ್ನ ಆಶ್ರಯದಾತನನ್ನು, ಸಾಮಾನ್ಯ ಜನ ತಮ್ಮ ಕಣ್ಮಣಿಯನ್ನು ಕಳೆದುಕೊಂಡಿದ್ದಾರೆ.. ಪರದಿ ಬಿದ್ದಿದೆ’’ -ಹೀಗೆಂದು ನೆಹರೂ ಸಾವಿಗೆ ಎ.ಬಿ.ವಾಜಪೇಯಿ ಕಂಬನಿ ಮಿಡಿದಿದ್ದನ್ನು ಹಿರಿಯ ಬಿಜೆಪಿ ನಾಯಕರಿಂದ ಕೇಳಿ ತಿಳಿದುಕೊಳ್ಳಿ ಎಂದಿದ್ದಾರೆ.

ಪ್ರಶ್ನೆ ಮಾಡಿದ್ದು RSS ಎಂಬ ಸಂಸ್ಥೆಯನ್ನ, ಬಿಜೆಪಿ ನಾಯಕರು ಏಕೆ ಎದೆ ಬಡಿದುಕೊಳ್ಳುತ್ತಿದ್ದಾರೆ?

‘ದೇಶ ವಿಭಜನೆಯ ಗಾಯಕ್ಕೆ ಸೌಹಾರ್ದತೆಯ ಮುಲಾಮು ಹಚ್ಚಿದವರು ಜವಾಹರಲಾಲ್ ನೆಹರೂ. ಒಣಗಿದ ಗಾಯಗಳನ್ನು ಕೋಮುದ್ವೇಷದ ಮೂಲಕ ಕೆದಕುತ್ತಾ ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತಿರುವವರು ನಿಮ್ಮ ನರೇಂದ್ರ ಮೋದಿ ಅವರು. ಭಾಕ್ರಾ ನಂಗಲ್, ಹಿರಾಕುಡ್, ದಾಮೋದರ ಕಣಿವೆ ಯೋಜನೆಗಳ ಮೂಲಕ ಭಾರತವೆಂಬ ಆಧುನಿಕ ದೇವಾಲಯವನ್ನು ನಿರ್ಮಾಣ ಮಾಡಿದ್ದ ಜವಾಹರಲಾಲ ನೆಹರೂ ಅಭಿವೃದ್ದಿಯ ಮುನ್ನೋಟದಿಂದ ದೇಶ ಕಟ್ಟಿದ್ದರು. ಅವರಿಗೆ ಕಟ್ಟುವುದಷ್ಟೇ ಗೊತ್ತಿತ್ತು, ನಿಮ್ಮ ನರೇಂದ್ರ ಮೋದಿ ಅವರು ಕೆಡವುದನ್ನಷ್ಟೇ ಕಲಿತಿದ್ದಾರೆ ಎಂದು ಟಾಂಗ್ ಕೊಟ್ಟರು.

ಎಸ್.ಬಿ.ಐ, ಎಲ್.ಐ.ಸಿ ಯಿಂದ ಹಿಡಿದು  ಭಾರತೀಯ ತೈಲ ನಿಗಮ, ಏರ್ ಇಂಡಿಯಾದ ವರೆಗೆ ನೂರಾರು ಸರ್ಕಾರಿ ಸಂಸ್ಥೆಗಳನ್ನು ಕಟ್ಟಿದವರು ಪಂಡಿತ ಜವಾಹರಲಾಲ ನೆಹರೂ. ಅದನ್ನು ಮಾರಾಟಕ್ಕಿಟ್ಟವರು ಯಾರೆಂದು ಬಿಡಿಸಿ ಹೇಳಬೇಕೇ?  ಉಕ್ಕಿನ ಕಾರ್ಖಾನೆ, ರೈಲ್ವೆ ಎಂಜಿನ್-ಕೋಚ್ ನಿರ್ಮಾಣ ಘಟಕಗಳು, ಯುದ್ಧ ವಿಮಾನ-ಟ್ಯಾಂಕ್ ಗಳು, ಉಷ್ಣವಿದ್ಯುತ್ ಉತ್ಪಾದನಾ ಸಲಕರಣೆಗಳು ಹೀಗೆ ಸರ್ಕಾರಿ ಸ್ವಾಮ್ಯದಲ್ಲಿ ಸಾಲು ಸಾಲು ಉದ್ಯಮಗಳನ್ನು ಕಟ್ಟಿ ಬೆಳೆಸಿದ್ದವರು ಜವಾಹರಲಾಲ್ ನೆಹರೂ. ಮೋದಿಯವರು ಕಟ್ಟಿದೆಷ್ಟು, ಕೆಡವಿದೆಷ್ಟು? ಎಂದು ಪ್ರಶ್ನಿಸಿದ್ದಾರೆ.

ಆಧುನಿಕ ಸಂಶೋಧನಾ ಸಂಸ್ಥೆಗಳ ಸ್ಥಾಪನೆ ಮೂಲಕ ಸಂವಿಧಾನದ ಆಶಯವಾದ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಶ್ರಮಿಸಿದವರು ಪಂಡಿತ ನೆಹರೂ. ಪ್ಲಾಸ್ಟಿಕ್ ಸರ್ಜರಿ, ಚರಂಡಿ ನೀರಿನಿಂದ ಗ್ಯಾಸ್, ಪೆನ್ ಡ್ರೈವ್ ಗಳ ಹೇಳಿಕೆಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೀಡಾದವರು ಯಾರೆಂದು ನಿಮಗೆ ಗೊತ್ತಿಲ್ಲವೇ?  ಬೊಮ್ಮಾಯಿವರೇ, ಭಾರತ-ಚೀನಾ ಗಡಿಪ್ರದೇಶದ ಬೆಳವಣಿಗೆ ಬಗ್ಗೆ ಸರಿಯಾದ ಮಾಹಿತಿ ತರಿಸಿಕೊಳ್ಳಿ. ಇತಿಹಾಸದ ವ್ಯಸನದಲ್ಲಿ ಮೈಮರೆಯಬೇಡಿ. ವರ್ಷದ ಹಿಂದೆ ಚೀನಾ ದೇಶದ ಎದುರು ಭಾರತ ಮಂಡಿ ಊರುವಂತೆ ಮಾಡಿ ಭಾರತೀಯರು ತಲೆ ತಗ್ಗಿಸುವಂತೆ ಮಾಡಿದ್ದು ಯಾರೆಂದು ನಿಮಗೆ ಗೊತ್ತಿಲ್ಲವೇ?

ಭಾರತ ಚೀನಾ ಗಡಿಯನ್ನು ಆ ದೇಶದ ಬೇಡಿಕೆಯಂತೆ 1959ರ ಗಡಿರೇಖೆಗೆ ಒಪ್ಪಿಕೊಂಡು ರಾಜಿ ಮಾಡಿಕೊಂಡಿದ್ದು ಇತ್ತೀಚಿನ ಇತಿಹಾಸ. ಗಾಲ್ವಾನ್ ಕಣಿವೆಯಲ್ಲಿ ನಮ್ಮ ಸೈನಿಕರನ್ನು ಲಾಠಿ, ದೊಣ್ಣೆಗಳಿಂದ ಕಾದಾಡುವಂತೆ ಮಾಡಿದ್ದನ್ನು ಕೂಡಾ ದೇಶದ ಜನ ಮರೆತಿಲ್ಲ.
ಪಾಕಿಸ್ಥಾನ ಎಂಬ ದುರ್ಬಲ ದೇಶದ ಎದುರು ವೀರಾವೇಶ ಮೆರೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಪಾಕಿಸ್ಥಾನಕ್ಕಿಂತ ದೊಡ್ಡ ಶತ್ರುವಾದ ಚೀನಾದ ಹೆಸರನ್ನು ಉಚ್ಚರಿಸಲು ಕೂಡಾ ಅಂಜುವುದು ಯಾಕೆ ಎಂದು ಹೇಳಬಲ್ಲಿರಾ ಬೊಮ್ಮಾಯಿ ಅವರೇ? ಎಂದು ಬರೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌