ಸಿದ್ದು ಸಮಾವೇಶದ ಯಶಸ್ಸಿಂದ ಬಿಜೆಪಿಯಲ್ಲಿ ಸಂಚಲನ

By Kannadaprabha NewsFirst Published Aug 5, 2022, 10:44 AM IST
Highlights

ದಾವಣಗೆರೆಯಲ್ಲಿ ನಡೆದ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭದ ಭರ್ಜರಿ ಯಶಸ್ಸು ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ಸಂಚಲನ ಉಂಟು ಮಾಡಿದೆ.

ದಾವಣಗೆರೆಯಲ್ಲಿ ನಡೆದ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭದ ಭರ್ಜರಿ ಯಶಸ್ಸು ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ಸಂಚಲನ ಉಂಟು ಮಾಡಿದೆ. ಅಮೃತ ಮಹೋತ್ಸವಕ್ಕೆ ಈ ಮಟ್ಟಿಗೆ ಜನರು ಆಗಮಿಸುತ್ತಾರೆ ಎಂಬ ಕಲ್ಪನೆಯೂ ಬಿಜೆಪಿ ನಾಯಕರಿಗೆ ಇರಲಿಲ್ಲ. ಅಪಾರ ಜನ ಸಾಗರವನ್ನು ನೋಡಿದ ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಹಂತದಲ್ಲಿ ಬಿರುಸಿನ ಚರ್ಚೆ ಶುರುವಾಗಿದ್ದು, ಈ ಸಮಾವೇಶವನ್ನು ಕಡೆಗಣಿಸದೆ ಹಿಂದುಳಿದ ವರ್ಗಗಳನ್ನು ಸೆಳೆಯಲು ತಂತ್ರ ರೂಪಿಸಬೇಕು ಎಂಬ ಒಲವು ಕೂಡ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮೃತ ಮಹೋತ್ಸವದ ಮರುದಿನವಾದ ಗುರುವಾರವೇ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಹಾಗೂ ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಅಮಿತ್‌ ಶಾ ಅವರು ರಾಜ್ಯ ನಾಯಕರೊಂದಿಗೆ ಮಾತನಾಡುವ ವೇಳೆ ಸಿದ್ದರಾಮಯ್ಯ ಅವರ ಕಾರ್ಯಕ್ರಮದ ಬಗ್ಗೆಯೂ ಪ್ರಸ್ತಾಪವಾಗಿದೆ. ರಾಜ್ಯ ನಾಯಕರೊಂದಿಗಿನ ಮಾತುಕತೆಗೂ ಮೊದಲೇ ತಮ್ಮ ವ್ಯಾಪ್ತಿಯಲ್ಲಿರುವ ಗುಪ್ತಚರ ಇಲಾಖೆಯಿಂದ ಅಮೃತ ಮಹೋತ್ಸವದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ ಅಮಿತ್‌ ಶಾ ಅವರು, ಹಿಂದುಳಿದ ವರ್ಗಗಳ ಸಮುದಾಯದ ಮತಗಳನ್ನು ಪಕ್ಷದೆಡೆಗೆ ಆಕರ್ಷಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಿ ಎಂದಿದ್ದಾರೆ ಎನ್ನಲಾಗಿದೆ.

ಸರ್ಕಾರದ ವರ್ಚಸ್ಸು ವೃದ್ಧಿಸಿ ಪಕ್ಷ ಸಂಘಟಿಸಿ: ಅಮಿತ್‌ ಶಾ

ಕರ್ನಾಟಕದಲ್ಲಿ ಎರಡು ಬಾರಿ ಪಕ್ಷ ಅಧಿಕಾರಕ್ಕೆ ಬಂದರೂ ಪೂರ್ಣ ಬಹುಮತ ಗಳಿಸಲು ಸಾಧ್ಯವಾಗಿಲ್ಲ. ಈ ಬಾರಿಯಾದರೂ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರಬೇಕು ಎಂಬ ಪಕ್ಷದ ಕನಸು ನನಸಾಗಬೇಕು ಎಂದರೆ ಹಿಂದುಳಿದ ವರ್ಗಗಳ ವಿಶ್ವಾಸ ಗಳಿಸಬೇಕು. ನಮ್ಮ ಪಕ್ಷದಲ್ಲಿ ಹಲವು ಉನ್ನತ ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ನೀಡಿದರೂ ಅದರ ಪ್ರಭಾವ ಕಂಡು ಬರುತ್ತಿಲ್ಲ. ಹೀಗಾಗಿ, ಅನ್ಯ ಪಕ್ಷಗಳಲ್ಲಿರುವ ಹಿಂದುಳಿದ ವರ್ಗಗಳ ಮುಖಂಡರನ್ನು ಗುರುತಿಸಿ ಪಕ್ಷಕ್ಕೆ ಕರೆತರುವ ಬಗ್ಗೆ ಈಗಿನಿಂದಲೇ ಕ್ರಮ ಕೈಗೊಳ್ಳಿ. ಇದು ನಿರ್ಲಕ್ಷಿಸುವ ಬೆಳವಣಿಗೆಯಲ್ಲ ಎಂಬ ಕಿವಿಮಾತನ್ನು ಅಮಿತ್‌ ಶಾ ಅವರು ರಾಜ್ಯ ನಾಯಕರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದು ಅಮೃತೋತ್ಸವದಿಂದ ಬಿಜೆಪಿಗರಿಗೆ ನಡುಕ: ಪರಂ

ಈ ನಡುವೆ ಪಕ್ಷದಲ್ಲಿರುವ ಹಿಂದುಳಿದ ವರ್ಗಗಳ ನಾಯಕರು ಕ್ರಿಯಾಶೀಲವಾಗಿ ಸಂಘಟನೆಯಲ್ಲಿ ಮುಂದಾಗದೆ ಇರುವ ಬಗ್ಗೆಯೂ ಬಿಜೆಪಿ ಪಾಳೆಯದಲ್ಲಿ ಚರ್ಚೆ ನಡೆದಿದೆ. ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರ ಮತ್ತು ಸಚಿವರ ವಿರುದ್ಧ ಹೇಳಿಕೆಗಳನ್ನು ನೀಡಿದಾಗ ಅದಕ್ಕೆ ಸಮರ್ಥವಾಗಿ ಉತ್ತರ ನೀಡುವ ಪ್ರಯತ್ನವನ್ನು ಪಕ್ಷದ ಹಿಂದುಳಿದ ವರ್ಗಗಳ ಸಚಿವರು ಅಥವಾ ಮುಖಂಡರು ಮಾಡುವುದಿಲ್ಲ ಎಂಬ ಬೇಸರವೂ ಕಂಡು ಬಂದಿದೆ.

click me!