RSS ದಾಖಲೆ ಕೇಳಿದ್ವಿ, ಸುನೀಲ್ ಅಣ್ಣ, ಅಶೋಕಣ್ಣ ಬಾಯಿಗೆ ಬಂದಾಗೆ ಮಾತಾಡ್ತಾರೆ: ಶಾಸಕ ಪ್ರದೀಪ್ ಈಶ್ವರ್

Published : Jun 16, 2026, 06:17 PM IST
Pradeep Eshwar

ಸಾರಾಂಶ

ಶಾಸಕ ಪ್ರದೀಪ್ ಈಶ್ವರ್ ಅವರು ಆರ್‌ಎಸ್‌ಎಸ್ ನೋಂದಣಿ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದಾರೆ. ನೋಂದಣಿಯಾಗದ ಸಂಘಟನೆಗೆ ಝೆಡ್ ಪ್ಲಸ್ ಭದ್ರತೆ ನೀಡಿರುವುದನ್ನು ಪ್ರಶ್ನಿಸಿರುವ ಅವರು, ಜೆಡಿಎಸ್ ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು: ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಬರೆದಿರುವ ಪತ್ರದ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಪರ-ವಿರೋಧ ಚರ್ಚೆಗಳು ತೀವ್ರಗೊಂಡಿದ್ದು, ಈ ಮಧ್ಯೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾವು ಯಾವುದೇ ದುರುದ್ದೇಶದಿಂದ ಮಾತನಾಡುತ್ತಿಲ್ಲ, ಕೇವಲ ಆರ್‌ಎಸ್‌ಎಸ್ ಸಂಘಟನೆಯ ಅಧಿಕೃತ ದಾಖಲೆಗಳನ್ನು ಮಾತ್ರ ಕೇಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿರುವ ಅವರು, ಖರ್ಗೆ ಅವರ ನಿಲುವಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ಬಿಜೆಪಿ ನಾಯಕರಾದ ಸುನೀಲ್ ಅಣ್ಣ ,ಅಶೋಕಣ್ಣ ಅವರುಗಳು ಬಾಯಿಗೆ ಬಂದಾಗೆ ಮಾತಾಡ್ತಾರೆ, ಟ್ವೀಟ್ ಮಾಡ್ತಾರೆ. ವಿರೋಧ ಪಕ್ಷದ ನಾಯಕರಿಗೆ ತಾಕತ್ತಿದ್ದರೆ ಆರ್‌ಎಸ್‌ಎಸ್ ಸಂಘಟನೆಯ ಅಧಿಕೃತ ನೋಂದಣಿ ಪ್ರತಿಯನ್ನು (Registration Copy) ಸಾರ್ವಜನಿಕವಾಗಿ ಪ್ರದರ್ಶಿಸಲಿ ಎಂದು ನೇರ ಸವಾಲು ಹಾಕಿದ್ದಾರೆ.

ನಿಮಗೆ ತಾಕತ್ ಇದ್ರೆ ದಾಖಲೆ ಕೊಡಿ

ಒಂದು ಕಡೆ ದೇಶದಲ್ಲಿ ದೊಡ್ಡದಾಗಿ ಸಂಘಟನೆ ಇದೆ ಎಂದು ಹೇಳಿಕೊಳ್ಳುವ ಇವರು, ಮತ್ತೊಂದು ಕಡೆ ಸರ್ಕಾರಕ್ಕೆ ಯಾವುದೇ ರೀತಿಯ ತೆರಿಗೆಯನ್ನು ಕಟ್ಟುವುದಿಲ್ಲ ಎಂದರೆ ಅದು ಯಾವ ನ್ಯಾಯ. ನಿಯಮಾವಳಿಗಳ ಪ್ರಕಾರ ನೋಂದಣಿಯಾಗದೆ, ತೆರಿಗೆ ವ್ಯಾಪ್ತಿಗೆ ಬರದೇ ಇರುವ ಇಂತಹ ಸಂಘಟನೆಯ ಮುಖ್ಯಸ್ಥರಿಗೆ ಕೇಂದ್ರ ಸರ್ಕಾರವು ಯಾವ ಆಧಾರದ ಮೇಲೆ ಅತ್ಯುನ್ನತ ಝೆಡ್ ಪ್ಲಸ್ (Z+) ಸುರಕ್ಷತೆಯನ್ನು ಒದಗಿಸಿದೆ ಎಂದು ಅವರು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಕೇವಲ ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಮಾತನಾಡುವ ಬಿಜೆಪಿ ನಾಯಕರು, ತಾವು ನಿಜವಾಗಿಯೂ ಕಾನೂನಿಗೆ ಬದ್ಧರಾಗಿದ್ದರೆ ನಿಮಗೆ ತಾಕತ್ ಇದ್ರೆ ಮೊದಲು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಕಾನೂನಾತ್ಮಕ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಇಡಲಿ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಆಡಳಿತ ಪಕ್ಷದ ಶಾಸಕರಲ್ಲಿ ಯಾವುದೇ ರೀತಿಯ ಭಯದ ವಾತಾವರಣವಿಲ್ಲ. ಕಾಂಗ್ರೆಸ್ ಶಾಸಕರೆಲ್ಲರೂ ಅತ್ಯಂತ ಆರಾಮವಾಗಿ ಮತ್ತು ಒಗ್ಗಟ್ಟಿನಿಂದ ಸಚಿವರ ಜೊತೆ ಕಾಲ ಕಳೆದು, ಯಾವುದೇ ಗೊಂದಲವಿಲ್ಲದೆ ಮುಂಬರುವ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದೇವೆ. ಆಡಳಿತ ಪಕ್ಷದ ಶಾಸಕರ ಮೇಲೆ ಸರ್ಕಾರಕ್ಕೆ ನಂಬಿಕೆ ಇಲ್ಲ ಅಥವಾ ಶಾಸಕರು ಕೈಕೊಡುತ್ತಾರೆ ಎನ್ನುವ ವಿರೋಧ ಪಕ್ಷಗಳ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.

ಭಯ ನಮಗಲ್ಲ ಹೆಚ್‌ಡಿಕೆ ಅವರಿಗೆ!

ರಾಜಕೀಯವಾಗಿ ನಮಗೆ ಯಾರ ಮೇಲೆಯೂ ಭಯವಿಲ್ಲ, ಬದಲಾಗಿ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೇ ಪ್ರಸ್ತುತ ಪರಿಸ್ಥಿತಿಯಲ್ಲಿ ತೀವ್ರ ಭಯ ಪಡಬೇಕಾಗಿದೆ ಎಂದು ಪ್ರದೀಪ್ ಈಶ್ವರ್ ಲೇವಡಿ ಮಾಡಿದರು. ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಕುಮಾರಸ್ವಾಮಿ ಅವರ ಪಾಳಯದಲ್ಲಿರುವ ಪ್ರಮುಖ ನಾಯಕರು ಮತ್ತು ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಅವರೆಲ್ಲರೂ ಕಾಂಗ್ರೆಸ್ ಪಕ್ಷದ ಕಡೆಗೆ ಬರಲಿದ್ದಾರೆ ಎಂದು ಬಾಂಬ್ ಸಿಡಿಸಿದರು. ಹೀಗಾಗಿ ಸ್ವಪಕ್ಷದ ಶಾಸಕರನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಅವರು ತಂತ್ರ ಹುಡುಕಬೇಕೇ ಹೊರತು, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

TMC Crisis: ಶಾಸಕರು, ಸಂಸದರು ಬರೀ ಟ್ರೈಲರ್, ಮಮತಾ ಕೋಟೆಯಲ್ಲಿ ಅಸಲಿ ಆಟ ಈಗ ಶುರು!
ಬೆಂಗಳೂರು ಆಡಳಿತಕ್ಕೆ ನೂತನ ಸಾರಥಿ: ಕೊನೆಗೂ ಮುನಿಸು ಬಿಟ್ಟು ಜಿಬಿಎ ಅಂಗಳಕ್ಕೆ ಬಂದ ಸಚಿವ ಕೃಷ್ಣಬೈರೆಗೌಡ!