ರಾಜ್ಯದ ಜನರಿಗೆ ಕಾಂಗ್ರೆಸ್ ಮೇಲೆ ನಂಬಿಕೆ ಇಲ್ಲ. ಹಾಗಾಗಿ, ಕಾಂಗ್ರೆಸ್‌ನವರು ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಅಲ್ಲದೇ, ಮತದಾರರಿಂದ ಆಧಾರ ಕಾರ್ಡ್‌ಗಳನ್ನು ಪಡೆಯುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ.
ಬೆಳಗಾವಿ (ಏ.01): ರಾಜ್ಯದ ಜನರಿಗೆ ಕಾಂಗ್ರೆಸ್ ಮೇಲೆ ನಂಬಿಕೆ ಇಲ್ಲ. ಹಾಗಾಗಿ, ಕಾಂಗ್ರೆಸ್‌ನವರು ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಅಲ್ಲದೇ, ಮತದಾರರಿಂದ ಆಧಾರ ಕಾರ್ಡ್‌ಗಳನ್ನು ಪಡೆಯುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮನೆಗೆ ಹೋಗುವುದು ಗ್ಯಾರಂಟಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು. ನಗರದ ಧರ್ಮನಾಥ ಭವನದಲ್ಲಿ ಶುಕ್ರವಾರ ಬಿಜೆಪಿ ಚುನಾವಣಾ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ರಾಜಸ್ಥಾನ, ಛತ್ತೀಸಘಡದಲ್ಲಿ ಎರಡೂವರೆ ಸಾವಿರ ರು. ಕೊಡುತ್ತೇವೆ ಎಂದಿದ್ದರು. ಆದರೆ ಅಲ್ಲಿ ಈವರೆಗೂ ಭರವಸೆ ಈಡೇರಿಸಿಲ್ಲ.
ಕಾಂಗ್ರೆಸ್, ಜೆಡಿಎಸ್ ಕುಟುಂಬಕ್ಕೆ ಆದ್ಯತೆ ನೀಡುವ ಪಕ್ಷಗಳು. ಬಿಜೆಪಿ ಬಸವೇಶ್ವರರ ಚಿಂತನೆಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿದೆ ಎಂದರು. ಬಿಜೆಪಿ ಕಾರ್ಯಕರ್ತರ ಜೊತೆಗೆ ನಿರಂತರ ಸಂಪರ್ಕದಲ್ಲಿದೆ. ನಮ್ಮ ನಾಯಕರು ಪ್ರತಿದಿನವೂ ಕಾರ್ಯಕರ್ತರ ಜೊತೆಗೆ ಸಂಪರ್ಕದಲ್ಲಿರುತ್ತಾರೆ. ಕಾರ್ಯಕರ್ತರ ಅಭಿಪ್ರಾಯ ಕೇಳುತ್ತೇವೆ. ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 10 ವರ್ಷಕ್ಕೆ ಈಗ ಕಾಲಿಡುತ್ತಿದೆ. ಕಾಂಗ್ರೆಸ್ 65 ವರ್ಷ ಮಾಡಿದಷ್ಟುಕೆಲಸಗಳನ್ನು ನಾವು 10 ವರ್ಷಗಳಲ್ಲಿ ಮಾಡಿದ್ದೇವೆ. ದೇಶದ 12 ಕೋಟಿ ಮನೆಗಳಿಗೆ ನಿರಂತರ ಕುಡಿಯುವ ನೀರು ಕೊಟ್ಟಿದ್ದೇವೆ. ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನಿರೀಕ್ಷೆಗೂ ಮೀರಿ ಆದ್ಯತೆ ನೀಡಿದ್ದೇವೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ, ಟಿಕೆಟ್ ಹಂಚಿಕೆ: ಶೋಭಾ ಕರಂದ್ಲಾಜೆ
ಕಾಂಗ್ರೆಸ್ ಅವಧಿಯಲ್ಲಿ 90 ಸಾವಿರ ಕಿಮೀ ರಾಷ್ಟ್ರೀಯ ಹೆದ್ದಾರಿ ಇತ್ತು. ನಾವು ಬಂದ ಮೇಲೆ 1.45 ಲಕ್ಷ ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ್ದೇವೆ. ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸಿದೆ. ಉದ್ಯೋಗ ಸೃಷ್ಟಿ, ಬಡವರ ಕಲ್ಯಾಣ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ. ಭಾರತ ಇಂದು ಜಗತ್ತಿನ ಐದನೇ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಪ್ರಿಯಾಂಕ ಅವರು ಗಾಂಧಿ ಕುಟುಂಬದವರಲ್ಲ. ನೆಹರು ಕುಟುಂಬದವರು. ನೆಹರು ಹೆಸರಿಗೆ ಮತ ಬರಲ್ಲ ಎಂದು ನೆಹರು ಬದಲು ಗಾಂಧಿ ಎಂದು ಅಡ್ಡಹೆಸರು ಇಟ್ಟುಕೊಂಡಿದ್ದಾರೆ. ಮುತ್ತಾತನಿಂದ ಮೊಮ್ಮಗನವರೆಗೆ ಯುಪಿಯಲ್ಲಿ ಗಾಂಧಿ ಕುಟುಂಬ ಚುನಾವಣೆಗೆ ಸ್ಪರ್ಧಿಸುತ್ತಿದೆ. ಹೀಗಿದ್ದರೂ ಅಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ ಎಂದು ಟೀಕಿಸಿದರು.
ನಮ್ಮದು ಡಬಲ್ ಎಂಜಿನ್ ಸರ್ಕಾರ ಇದೆ. ಉತ್ತಮ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಾಯಕತ್ವ ನೋಡಿ ಮತ ಕೊಡಿ ಎಂದು ನಾವು ಮತದಾರರಲ್ಲಿ ಕೇಳುತ್ತಿದ್ದೇವೆ. 12 ಕೋಟಿ ನಮ್ಮ ಪಕ್ಷದ ಸದಸ್ಯರಿದ್ದಾರೆ. ಅವರ ಅಭಿಪ್ರಾಯ ಪರಿಗಣಿಸಿ ಟಿಕೆಟ್ ನೀಡುತ್ತೇವೆ. ಕೋರ್ ಕಮಿಟಿ, ರಾಜ್ಯ ಚುನಾವಣೆ ಸಮಿತಿ ಜೊತೆಗೆ ಟಿಕೆಟ್ ಹಂಚಿಕೆ ವೇಳೆ ಪದಾಧಿಕಾರಿಗಳ ಅಭಿಪ್ರಾಯ ಪರಿಗಣಿಸುತ್ತೇವೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯ ಸಂಗ್ರಹ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಬೆಳಗಾವಿಯ ಮಹಾನಗರ, ಬೆಳಗಾವಿ ಗ್ರಾಮಾಂತರ ಜಿಲ್ಲೆಯ 10 ಕ್ಷೇತ್ರದ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಸಂಸದೆ ಮಂಗಲ ಅಂಗಡಿ, ಮಹಾನಗರದ ಅಧ್ಯಕ್ಷ , ಶಾಸಕ ಅನಿಲ ಬೆನಕೆ, ಗ್ರಾಮೀಣ ಅಧ್ಯಕ್ಷ ಸಂಜಯ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಬೆಳಗಾವಿ ಲೋಕಸಭೆ ವ್ಯಾಪ್ತಿಯ 10 ಮತಕ್ಷೇತ್ರದ ಪದಾಧಿಕಾರಿಗಳು ಭಾಗಿಯಾಗಿದ್ದರು. ಅಭ್ಯರ್ಥಿಗಳ ಆಯ್ಕೆಗೆ ವಿನೂತನ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದ್ದು, ಪಕ್ಷದ ಪದಾಧಿಕಾರಿಗಳಿಂದ ಮತದಾನ ಮೂಲಕ ಅಭಿಪ್ರಾಯ ಸಂಗ್ರಹಿಸಲಾಯಿತು. ಬೆಳಗಾವಿ ಮಹಾನಗರ, ಗ್ರಾಮಾಂತರ ಜಿಲ್ಲೆ ಮತಕ್ಷೇತ್ರದ ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಯಿತು. ಗೌಪ್ಯ ಮತದಾನದ ಮೂಲಕ ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಮತ ಚೀಟಿಯಲ್ಲಿ ಜಿಲ್ಲೆ, ಮತಕ್ಷೇತ್ರ ಹಾಗೂ ಅಭ್ಯರ್ಥಿಗಳ ಹೆಸರು ಸೂಚಿಸಲು ಅವಕಾಶ ನೀಡಲಾಗಿತ್ತು. ಬೆಳಗಾವಿ ಉತ್ತರ ಮತಕ್ಷೇತ್ರ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದ ಆಕಾಂಕ್ಷಿಗಳ ಕುರಿತು ಅಭಿಪ್ರಾಯ ಸಂಗ್ರಹಿಸಲಾಯಿತು.
ಕೊಡಗಿನ ಅಭ್ಯರ್ಥಿಗಳ ಆಯ್ಕೆಗೆ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹಿಸಿದ ಬಿಜೆಪಿ!
ಮೈಸೂರಿನಲ್ಲಿ ಜೆಡಿಎಸ್ ನಡೆಸಿದ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರೂ ಭಾಗಿಯಾಗಿದ್ದರು. ದೇವೇಗೌಡರ ಆರೋಗ್ಯ ಸರಿಯಿಲ್ಲ, ಅವರ ಬಗ್ಗೆ ನಮಗೆ ಅಪಾರ ಗೌರವ ಇದೆ. ಆದರೆ, ಮೊನ್ನೆಯ ಕಾರ್ಯಕ್ರಮದಲ್ಲಿ ಅವರನ್ನು ವೇದಿಕೆ ಕರೆತಂದಿದ್ದು ಯಾರು? ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳು. ಅಲ್ಲಿ ಬೇರೆಯವರಿಗೆ ಅವಕಾಶ ಇಲ್ಲ. ಅದೇ ರೀತಿ ಕಾಂಗ್ರೆಸ್ ಪರಿಸ್ಥಿತಿ ಭಿನ್ನವಾಗಿಲ್ಲ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅವರನ್ನು ಸುಮ್ಮನೆ ಕೂರಿಸಿದ್ದಾರೆ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವರು.