ನಮ್ಮ 5 ಗ್ಯಾರಂಟಿಗಳಿಂದ ಪ್ರಧಾನಿ ಮೋದಿಯವರಿಗೇ ಶಾಕ್: ಸಚಿವ ಚಲುವರಾಯಸ್ವಾಮಿ

By Govindaraj SFirst Published Mar 10, 2024, 1:11 PM IST
Highlights

ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಾಕ್ ಆಗಿದೆ. ಈಗ ನಮ್ಮ ಸರ್ಕಾರದ ಗ್ಯಾರಂಟಿಯನ್ನು ಅವರೂ ಸಹ ಗ್ಯಾರಂಟಿ ಎಂದು ಘೋಷಣೆ ಮಾಡುತ್ತಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ನಾಗಮಂಗಲ (ಮಾ.10): ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಾಕ್ ಆಗಿದೆ. ಈಗ ನಮ್ಮ ಸರ್ಕಾರದ ಗ್ಯಾರಂಟಿಯನ್ನು ಅವರೂ ಸಹ ಗ್ಯಾರಂಟಿ ಎಂದು ಘೋಷಣೆ ಮಾಡುತ್ತಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು. ಪಟ್ಟಣದ ಟಿ.ಬಿ.ಬಡಾವಣೆಯ ಎಂಆರ್‌ಪಿ ಶ್ರೀ ನಂಜುಂಡೇಶ್ವರ ಪ್ಯಾಲೆಸ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ತಾಲೂಕಿನ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಸವಲತ್ತು ವಿತರಣಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಈಗ ಹೊಸದಾಗಿ ಗ್ಯಾರಂಟಿ ಎನ್ನುತ್ತಿದ್ದಾರೆ. ಜಾಹೀರಾತು ಕೊಡಲು ಹಣವಿದೆ. ಅವರ ಪರ ಕೆಲ ಸುದ್ದಿವಾಹಿನಿಗಳ ಮಾಲೀಕರಿದ್ದಾರೆ. ಹಾಗಾಗಿ ಅವರು ಈ ರೀತಿ ಘೋಷಣೆ ಮಾಡಲು ನಿಂತಿದ್ದಾರೆ ಎಂದು ಜರಿದರು. ಯಾವುದೇ ಜಾತಿ, ಧರ್ಮ, ಮೇಲು ಕೀಳೆಂಬ ತಾರತಮ್ಯವಿಲ್ಲದೆ ಜನಸಾಮಾನ್ಯರಿಗೆ 5 ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ನೀಡುವ ಮೂಲಕ, ಎಲ್ಲ ವರ್ಗಗಳ ಜನರ ಸಬಲೀಕರಣಗೊಳಿಸುತ್ತಿರುವುದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಹೇಳಿದರು. ಜಯಚಾಮರಾಜೇಂದ್ರ ಒಡೆಯರ್ ಅವರು ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. 

ಕೃಷಿ ಬಜೆಟ್‌ ಕೊಟ್ಟ ಯಡಿಯೂರಪ್ಪ ಮಹಾನ್‌ ನಾಯಕ: ಪ್ರಲ್ಹಾದ್‌ ಜೋಶಿ

ಅವರನ್ನು ಬಿಟ್ಟರೆ 70 ವರ್ಷಗಳ ನಂತರ ಸಿಎಂ ಸಿದ್ದರಾಮಯ್ಯ ಜಿಲ್ಲೆಯ ಪ್ರಗತಿಗೆ ಪೂರಕವಾಗಿ ಹೆಚ್ಚು ಒತ್ತು ಕೊಡುತ್ತಿದ್ದಾರೆ ಎಂದು ಹೇಳಿದರು. ಅಧಿಕಾರಕ್ಕೆ ಬಂದ ಹತ್ತು ತಿಂಗಳಲ್ಲಿಯೇ ಮೆಡಿಕಲ್ ಕಾಲೇಜು, ಕೆಎಸ್‌ಆರ್‌ಟಿಸಿ ಡಿವಿಜನ್ ಕಚೇರಿ, ಆರ್‌ಟಿಒ ಕಚೇರಿ, ಪೊಲೀಸ್ ಠಾಣೆಗಳು, ಮಿನಿವಿಧಾನಸೌಧ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಜಿಲ್ಲೆಯಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಘೋಷಿಸಲಾಗಿದೆ ಎಂದರು. ಜಿಲ್ಲೆಯ ಶಾಸಕರು, ಮತ್ತು ಮುಖಂಡರು ಅಭಿವೃದ್ಧಿ ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕೈಜೋಡಿಸಬೇಕು. ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳ ಕುಂದು ಕೊರತೆಗಳಿಗೆ ಸ್ಪಂದಿಸಿ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಜೆಡಿಎಸ್ ಈಗ ಕೋಮುವಾದಿ ಜನತಾದಳವಾಗಿದೆ: ಸಚಿವ ಡಿ.ಸುಧಾಕರ್ ಲೇವಡಿ

ಸಮಾರಂಭದಲ್ಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ. ನಾಗೇಶ್, ಜಿಲ್ಲಾಧ್ಯಕ್ಷ ಜೆ.ವೈ.ಮಂಜುನಾಥ್, ಪಾಂಡವಪುರ ಉಪ ವಿಭಾಗಾಧಿಕಾರಿ ಜೆ.ವಿ.ಮಾರುತಿ, ಜಂಟಿ ಕೃಷಿ ನಿರ್ದೇಶಕ ಅಶೋಕ್‌ಕುಮಾರ್, ತಹಸೀಲ್ದಾರ್ ನಯೀಂಉನ್ನೀಸಾ, ತಾಪಂ ಇಒ ಚಂದ್ರಮೌಳಿ, ಬಿಇಒ ಕೆ.ಯೋಗೇಶ್, ಬಿ.ಆರ್.ಸಿ. ಸಮನ್ವಯಾಧಿಕಾರಿ ಕೆ.ರವೀಶ್, ಶಿಕ್ಷಕರ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ ಸೇರಿ ಜಿಲ್ಲಾ ಸಂಘದ ಪದಾಧಿಕಾರಿಗಳು, ತಾಲೂಕು ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಸಹಸ್ರಾರು ಮಂದಿ ಮಹಿಳೆಯರು ಹಾಗೂ ರೈತರು ಪಾಲ್ಗೊಂಡಿದ್ದರು.

click me!