
ನವದೆಹಲಿ (ಆ.17): ಭಾರತೀಯ ಜನತಾ ಪಾರ್ಟಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಾಧಿಕಾರಿಯಾಗಿ ರಾಷ್ಟ್ರದಲ್ಲಿ ಬಿಜೆಪಿಯ ಚುಕ್ಕಾಣಿಯನ್ನು ಜಯ್ ಪ್ರಕಾಶ್ ನಡ್ಡಾ ಹಿಡಿದು ಹಲವು ವರ್ಷಗಳೇ ಆಗಿವೆ. ಅದರೆ, ಅವರ ನೇತೃತ್ವದಲ್ಲಿ ಪಕ್ಷದ ಸಂಸದೀಯ ಸಮಿತಿಯ ನೇಮಕ ಈಗ ಆಗಿದೆ. ಹೊಸ ಸಂಸದೀಯ ಸಮಿತಿಯೊಂದಿಗೆ ಕೇಂದ್ರ ಚುನಾವಣಾ ಸಮಿತಿಯನ್ನು ಬಿಜೆಪಿ ಘೋಷಣೆ ಮಾಡಿದೆ. ಈ ಎರಡೂ ಸಮಿತಿಯ ವಿಶೇಷವೇನೆಂದರೆ, ದೇಶದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸದೀಯ ಸಮಿತಿಯಿಂದ ಹೊರಹಾಕಲಾಗಿದ್ದರೆ, ಶಹನವಾಜ್ ಹುಸೇನ್ ಅವರನ್ನೂ ಎರಡೂ ಸಮಿತಿಯಿಂದ ಕೈಬಿಡಲಾಗಿದೆ. ಅಂದಾಜು ಎಂಟು ವರ್ಷ್ಳ ಬಳಿಕ ಬಿಜೆಪಿಯಲ್ಲಿ ಸಂಸದೀಯ ಸಮಿತಿ ಪುನರ್ ರಚನೆ ಆಗಿದೆ. ಪಕ್ಷದ ಅಧ್ಯಕ್ಷರ ಹೊರತಾಗಿ 10 ಮಂದಿ ಸದಸ್ಯರು ಈ ಸಮಿತಿಯಲ್ಲಿ ಇರುತ್ತಾರೆ. ಹೊಸ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ಬಿಎಸ್ ಯಡಿಯೂರಪ್ಪ, ಸರ್ಬಾನಂದ ಸೋನೋವಾಲ್, ಕೆ.ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್ಪುರಾ, ಸುಧಾ ಯಾದವ್, ಸತ್ಯನಾರಾಯಣ್ ಜತಿಯಾ ಮತ್ತು ಬಿಎಲ್ ಸಂತೋಷ್ (ಕಾರ್ಯದರ್ಶಿ) ಇದರಲ್ಲಿದ್ದಾರೆ.
2014ರಲ್ಲಿ ಅಮಿತ್ ಶಾ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದರು. ಈ ವೇಳೆ ಅವರು ಸಂಸದೀಯ ಸಮಿತಿಯನ್ನು ರಚನೆ ಮಾಡಿದ್ದರು. ಇದರಲ್ಲಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಥಾವರ್ ಚಂದ್ ಗೆಹ್ಲೊಟ್, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಬಿಎಲ್ ಸಂತೋಷ್ ಇದ್ದರು. ಇವುರುಗಳ ಹೊರತಾಗಿ ಅರುಣ್ ಜೇಟ್ಲಿ, ಅನಂತ್ ಕುಮಾರ್, ಸುಷ್ಮಾ ಸ್ವರಾಜ್ ಕೂಡ ಇದರ ಭಾಗವಾಗಿದ್ದರು. ಆದರೆ, ಇವರುಗಳ ನಿಧನದಿಂದ ಈ ಸ್ಥಳ ಖಾಲಿಯಾಗಿದ್ದರೆ, ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ಹಾಗೂ ಥಾವರ್ ಚಂದ್ ಗೆಹ್ಲೊಟ್ ರಾಜ್ಯಪಾಲರಾಗುವ ಮೂಲಕ ಈ ಸ್ಥಾನವನ್ನು ತೊರೆದಿದ್ದರು.
ಈಗ ಹೊಸ ಸಮಿತಿ ರಚನೆ ಆಗಿದ್ದು, ನಿತಿನ್ ಗಡ್ಕರಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್‌ಗೆ ಸ್ಥಾನ ದೊರಕಿಲ್ಲ. ಖಾಲಿ ಇರುವ ಸ್ಥಾನಗಳಲ್ಲಿ ಬಿಎಸ್ ಯಡಿಯೂರಪ್ಪ, ಸರ್ಬಾನಂದ ಸೋನೋವಾಲ್, ಕೆ.ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್ಪುರಾ, ಸುಧಾ ಯಾದವ್, ಸತ್ಯನಾರಾಯಣ್ ಜತಿಯಾ ಅರನ್ನು ಆಯ್ಕೆ ಮಾಡಲಾಗಿದೆ.
ಅಧಿಕಾರಕ್ಕಾಗಿ ರಾಜಕೀಯ, ಈ ಮಾತಿಗೆ ಸಂಸದೀಯ ಸಮಿತಿಯಿಂದ ಹೊರಬಿದ್ರಾ ನಿತಿನ್ ಗಡ್ಕರಿ?
ಸಂಸದೀಯ ಸಮಿತಿಯ ಕೆಲಸವೇನು: ಬಿಜೆಪಿ ಸಂಸದೀಯ ಸಮಿತಿ ಬಹಳ ಪವರ್‌ಫುಲ್. ಪಕ್ಷದ ಸಂಸದೀಯ ಕೆಲಸಗಳು ಹಾಗೂ ಸಂಯೋಜನೆಯ ಕೆಲಸಗಳಿಗಾಗಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಂಸದೀಯ ಸಮಿತಿಯನ್ನು ರಚನೆ ಮಾಡುತ್ತದೆ. ಈ ಸಂಸದೀಯ ಮಂಡಳಿಯ ಪಕ್ಷದಲ್ಲಿ ಎಲ್ಲ ನಿಯಮಗಳನ್ನು ಮಾಡುತ್ತದೆ. ಪಕ್ಷದ ಅಧ್ಯಕ್ಷರೊಂದಿಗೆ 10 ಇತರ ಸದಸ್ಯರು ಇದರಲ್ಲಿ ಇರುತ್ತಾರೆ. ಇದರಲ್ಲಿ ಇರುವ ಒಬ್ಬ ಸದಸ್ಯ ಸಂಸತ್ತಿನಲ್ಲಿ ಪಕ್ಷದ ನಾಯಕರಾಗಿ ಇರುತ್ತಾರೆ. ಇನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸಂಸದೀಯ ಸಮಿತಿಗೂ ಅಧ್ಯಕ್ಷರಾಗಿರುತ್ತಾರೆ.
ಪಕ್ಷದ ಮಹಾಮಂತ್ರಿಗಳಲ್ಲಿರುವ ಒಬ್ಬರನ್ನು ಸಚಿವರನ್ನಾಗಿ ಅಧ್ಯಕ್ಷರೇ ಆಯ್ಕೆ ಮಾಡುತ್ತಾರೆ. ಯಾವುದೇ ರಾಜ್ಯಗಳಲ್ಲಿ ಮಂತ್ರಿಮಂಡಲ ರಚನೆಯ ಕುರಿತಾಗಿ ಮಾರ್ಗದರ್ಶನ ನೀಡುವುದು ಈ ಸಮಿತಿಯ ದೊಡ್ಡ ಜವಾಬ್ದಾರಿ. ಅದರೊಂದಿಗೆ ವಿಧಾನಮಂಡಲ ಹಾಗೂ ಸಂಸದೀಯ ದಳದ ಕಾರ್ಯಕಲಾಪಗಳ ಮೇಲೆ ಕಣ್ಣಿಡುವುದು. ಪಕ್ಷದ ಶಿಸ್ತು ಉಲ್ಲಂಘಿಸಿದವರ ಮೇಲೆ ಕ್ರಮ ಸೇರಿದಂತೆ ಇತರ ಕೆಲಸಗಳು ಇವರ ಅಡಿಯಲ್ಲಿ ಬರುತ್ತದೆ. ಬಿಜೆಪಿಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ರಚನೆಯಲ್ಲಿ ಈ ಸಂಸದೀಯ ಮಂಡಳಿಯ ಪಾತ್ರ ಎಷ್ಟು ಪ್ರಮುಖವಾಗಿರುತ್ತದೆ ಎನ್ನುವುದನ್ನು ಈ ಮೂಲಕ ಅಂದಾಜಿಸಬಹುದು.
ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ
ಚುನಾವಣಾ ಸಮಿತಿಯ ಕೆಲಸವೇನು: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮ ಮಾಡುವ ಕೆಲಸವನ್ನು ಈ ಸಮಿತಿಯು ಮಾಡುತ್ತದೆ. ಅದರೊಂದಿಗೆ ಚುನಾವಣಾ ಪ್ರಚಾರ ಕಾರ್ಯಗಳು ಹೇಗಿರಬೇಕು ಎನ್ನುವುದನ್ನೂ ಇದು ನಿರ್ಧಾರ ಮಾಡುತ್ತದೆ. ಲೋಕಸಭಾ ಚುನಾವಣೆ, ವಿಧಾನಸಭೆಯ ಚುನಾವಣೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಚರ್ಚೆ, ಟಿಕೆಟ್ ಹಂಚಿಕೆಯಂಥ ಎಲ್ಲಾ ಕೆಲಸಗಳಲ್ಲಿ ಈ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.