
ಕೊಪ್ಪಳ (ಜು.30): ತುಮಕೂರಿನಲ್ಲಿ ಪ್ರತಿಭಟಿಸಿದರೆ ಯೂರಿಯಾ ಗೊಬ್ಬರ ಸಿಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮನೆ ಎದುರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೋಗಿ ಪ್ರತಿಭಟಿಸಿ ಯೂರಿಯಾ ತರಬೇಕೆಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ರೈತರಿಗೆ ಯೂರಿಯಾ ಗೊಬ್ಬರ ಪೂರೈಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಆರಂಭಿಸಿರುವ ಪ್ರತಿಭಟನೆಗೆ ನಗರದಲ್ಲಿ ತಿರುಗೇಟು ನೀಡಿದ ಅವರು, ಬಿಜೆಪಿಗೆ ಪ್ರತಿಭಟಿಸುವ ನೈತಿಕತೆ ಇಲ್ಲ. ತುಮಕೂರಿನಲ್ಲಿ ಪ್ರತಿಭಟನೆ ಮಾಡುವುದನ್ನು ಬಿಟ್ಟು ಪ್ರಧಾನಿ ಬಳಿ ಕುಳಿತುಕೊಂಡು ಗೊಬ್ಬರ ಕೇಳಲಿ ಎಂದರು.
ವ್ಯವಸ್ಥೆಯ ಅರಿವಿಲ್ಲ: ಬಿಜೆಪಿ ನಾಯಕರಿಗೆ ವ್ಯವಸ್ಥೆ ಬಗ್ಗೆ ಅರಿವಿದೆಯೇ? ಯೂರಿಯಾ ಪೂರೈಕೆ ಮಾಡುವುದು ಯಾರು? ರಾಜ್ಯ ಸರ್ಕಾರನಾ? ಕೇಂದ್ರ ಸರ್ಕಾರನಾ? ಕರ್ನಾಟಕದಲ್ಲಿ ಯೂರಿಯಾ ಉತ್ಪಾದನೆ ಇದೆಯೇ? ಎಂದು ಪ್ರಶ್ನಿಸಿದ ಅವರು, ಯಾವ ಮುಖ ಇಟ್ಟುಕೊಂಡು ನಮ್ಮ ವಿರುದ್ಧ ಮಾತನಾಡುತ್ತಾರೆಂದು ಕಿಡಿಕಾರಿದರು. ರಾಜ್ಯದಲ್ಲಿ ಈ ಬಾರಿ ಒಂದೂವರೆ ತಿಂಗಳು ಮೊದಲೇ ಬಿತ್ತನೆ ಆಗಿದೆ. ಹೀಗಾಗಿ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಿದೆ. ಅತ್ತ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಗಸ್ಟ್‌ನಲ್ಲಿ ಕಳಿಸಬೇಕಾದ ಕೋಟಾ ಇನ್ನೂ ಕೊಟ್ಟಿಲ್ಲ. ಇದನ್ನು ಅರಿತುಕೊಂಡು ಬಿಜೆಪಿ ನಾಯಕರು ಮಾತನಾಡಬೇಕು. ಅದನ್ನು ಬಿಟ್ಟು ಜನರ ದಿಕ್ಕು ತಪ್ಪಿಸಲು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಹೀಗೇ ಸುಳ್ಳು ಹೇಳಿಕೊಂಡೆ ಅವರು ಅಧಿಕಾರಕ್ಕೆ ಬಂದಿದ್ದಾರೆಂದು ಆರೋಪಿಸಿದರು.
ಕೇಂದ್ರ ಪೂರೈಸಿಲ್ಲ: ಈ ಬಾರಿ ಉತ್ತಮ ಮಳೆಯಾಗಿದ್ದು ಬೇಗೆ ಬಿತ್ತನೆ ಮಾಡಲಾಗಿದೆ. ಆದರಿಂದ ನಮಗೆ ಯೂರಿಯಾ ಗೊಬ್ಬರ ನೀಡುವಂತೆ ವರದಿ ಕೊಟ್ಟರೂ ಪೂರೈಸಿಲ್ಲ. ರೈತರ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಸಮರ್ಪಕವಾಗಿ ಗೊಬ್ಬರ ಪೂರೈಸಬೇಕು. ರೈತರು ಯಾವುದೇ ಕಾರಣಕ್ಕೂ ಯೂರಿಯಾ ಗೊಬ್ಬರ ದೊರೆತಿಲ್ಲವೆಂದು ಆತಂಕ ಪಡಬಾರದು. ಒಂದು ದಿನ ತಡವಾದರೂ ಸಹ ನಿಮಗೆ ಗೊಬ್ಬರ ಕೊಟ್ಟೇ ಕೊಡತ್ತೀವಿ. ಯೂರಿಯಾ ಬೇಡಿಕೆ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯಲಾಗುವುದು. ಹೀಗಾಗಿ ಯಾರೂ ಸಹ ಆತಂಕಕ್ಕೆ ಒಳಗಾಗಬಾರದೆಂದು ಸಚಿವರು ಮನವಿ ಮಾಡಿದರು.
ಯೂರಿಯಾ ಕೊರತೆ ಖಂಡಿಸಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಆ.1ರಂದು ಹಮ್ಮಿಕೊಂಡಿರುವ ಬಂದ್ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಾಜಿ ಶಾಸಕ ಬಸವರಾಜ ದಢೇಸೂಗುರಗೆ ಏನು ಗೊತ್ತಿಲ್ಲ. ತನ್ನ ಕಾರಿಗೆ ತಾನೇ ಕಲ್ಲು ಹೊಡೆದುಕೊಂಡು, ಯಾರೋ ಹೊಡಿದ್ದಿದ್ದಾರೆ ಎಂದು ಹೇಳುತ್ತಾರೆ. ಬೆದರಿಕೆ ಇದೆ ಗನ್‌ಮ್ಯಾನ್ ಕೊಡಿ ಎಂದು ಕೇಳುತ್ತಾರೆ. ಅದಕ್ಕೆ ಕೆಲವೊಂದು ನಿಯಮಾವಳಿ ಇವೆ. ಅಂತಹ ಅಂಶಗಳ ಬಗ್ಗೆ ಅವರು ಮೊದಲು ತಿಳಿದುಕೊಳ್ಳಲಿ ಎಂದರು.
ಜಿಲ್ಲೆಯಲ್ಲಿ 3.65 ಲಕ್ಷ ಹೆಕ್ಟೇರ್ ಬಿತ್ತನೆ: ಜಿಲ್ಲೆಯಲ್ಲಿ ವಾಡಿಕೆಯಂತೆ 2.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ 3.65 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಜುಲೈನಲ್ಲಿ 9600 ಟನ್ ಗೊಬ್ಬರ ಬೇಕಿತ್ತು, 11253 ಟನ್ ಬಂದಿದೆ. ಆದರೆ, ಬಿತ್ತನೆ ಪ್ರಮಾಣ ಹೆಚ್ಚಾದ ಕಾರಣ ಕೊರೆತೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಸಾಕಷ್ಟು ಯೂರಿಯಾ ಗೊಬ್ಬರ ಸಿಗಲಿದೆ. ಆ 3ರೊಳಗಾಗಿ 3431 ಟನ್ ಕೊಪ್ಪಳಕ್ಕೆ ಬರಲಿದ್ದು, ಆ ತಿಂಗಳಲ್ಲಿ 10 ಸಾವಿರ ಟನ್ ಬೇಡಿಕೆ ಇದ್ದು ಇನ್ನೂ 7 ಸಾವಿರ ಟನ್ ಮುಂಗಡವಾಗಿ ನೀಡಲು ಮನವಿ ಮಾಡಿಕೊಂಡಿದ್ದೇವೆಂದು ಸಚಿವರು ಹೇಳಿದರು. ಜಿಲ್ಲೆಯ 73 ಸೊಸೈಟಿಗಳಿದ್ದು ಅವುಗಳಿಗೆ 3500 ಟನ್ ಯೂರಿಯಾ ಗೊಬ್ಬರ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.