
ಕಾರವಾರ (ಜು.30): ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ರಾಜ್ಯದಲ್ಲಿನ ಡೀಸೆಲ್, ಪೆಟ್ರೋಲ್ ಮೇಲೆ ವಿಧಿಸುತ್ತಿರುವ ಸುಂಕದಲ್ಲಿನ ಸ್ವಲ್ಪ ಮೊತ್ತವನ್ನು ಅಸಂಘಟಿತ ಕಾರ್ಮಿಕರ ಮಂಡಳಿಗೆ ನೀಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು. ಅವರು ಕಾರವಾರದ ಅಜ್ಜಿ ಓಷಿಯನ್ ಹೋಟೆಲ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ವಲಯಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸಂಘಟಿತ ವಲಯದ ಕಾರ್ಮಿಕರು ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲರಾಗಿದ್ದು, ಇವರಿಗೆ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಈ ಮಂಡಳಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ರಾಜ್ಯದಲ್ಲಿನ ಡೀಸೆಲ್, ಪೆಟ್ರೋಲ್ ಮೇಲೆ ವಿಧಿಸುತ್ತಿರುವ ಸುಂಕದಲ್ಲಿನ ನಿರ್ದಿಷ್ಟ ಮೊತ್ತವನ್ನು ವರ್ಗಾಯಿಸುವ ಕುರಿತು ಮುಖ್ಯಮಂತ್ರಿಯಲ್ಲಿ ವಿನಂತಿ ಮಾಡಿಕೊಂಡು, ಈ ವರ್ಗದ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಗರಿಷ್ಠ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ದೇಶದಲ್ಲೇ ಪ್ರಥಮ ಬಾರಿಗೆ ಇ- ಕಾಮರ್ಸ್ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗಾಗಿ ಗಿಗ್ ಕಾರ್ಮಿಕರ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಸಿನಿಮಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರ ಸುಂಕ ಅಧಿನಿಯಮ, ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಅಧಿನಿಯಮ ಮತ್ತು ಕರ್ನಾಟಕ ಗೃಹ ಕಾರ್ಮಿಕರ ಅಧಿನಿಯಮ ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ರಾಜ್ಯದಲ್ಲಿ ಕಾರ್ಮಿಕರ ಮಕ್ಕಳಿಗಾಗಿ 6 ರಿಂದ 12 ತರಗತಿಯವರಿಗೆ ಉಚಿತ ಶಿಕ್ಷಣ ನಿಡುವ ಶಾಲೆಗಳನ್ನು ತೆರೆಯಲಾಗುತ್ತಿದೆ. ಪ್ರತೀ ಜಿಲ್ಲೆಗೊಂದು ಈ ಶಾಲೆಗಳನ್ನು ತೆರೆಯುವ ಬಗ್ಗೆ ಮುಖ್ಯಮಂತ್ರಿ ಬಳಿ ಚರ್ಚಿಸುವುದಾಗಿ ಸಚಿವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ಕಾರ್ಮಿಕ ಇಲಾಖೆ ಈ ಮೊದಲು ಕಟ್ಟಡ ಕಾರ್ಮಿಕರಿಗೆ ಮಾತ್ರ ಎಂಬಂತೆ ಇತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಣ್ಣ ಸಣ್ಣ ವೃತ್ತಿಗಳನ್ನು ಮಾಡುತ್ತಿದ್ದ 90ಕ್ಕೂ ಅಧಿಕ ವರ್ಗದ ಕಾರ್ಮಿಕರಿಗೆ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು. ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಮಾತನಾಡಿ, ಜಿಲ್ಲೆಗೆ ಪ್ರತ್ಯೇಕ ಇಎಸ್ಐ ಆಸ್ಪತ್ರೆ ಮಂಜೂರು ಮಾಡುವಂತೆ, ಕಾರ್ಮಿಕರ ಮಕ್ಕಳಿಗಾಗಿ 6 ರಿಂದ 12 ನೇ ತರಗತಿ ವರೆಗಿನ ಉಚಿತ ಶಿಕ್ಷಣಕ್ಕಾಗಿ ಶಾಲೆಯನ್ನು ತೆರೆಯುವಂತೆ ಮನವಿ ಮಾಡಿ, ಪ್ರಸ್ತುತ ಮುಖ್ಯಮಂತ್ರಿ ರಾಜ್ಯದ ಎಲ್ಲ ಶಾಸಕರಿಗೆ ಕ್ಷೇತ್ರದ ಅಭಿವೃಧ್ದಿಗೆ ನೀಡುವ ₹50 ಕೋಟಿ ಸಂಪೂರ್ಣ ಅನುದಾನವನ್ನು ತಾವು ಆಸ್ಪತ್ರೆ ನಿರ್ಮಾಣಕ್ಕೆ ನೀಡಲಿದ್ದೇವೆ. ಜಿಲ್ಲೆಯ ಇತರ ಶಾಸಕರು ತಮ್ಮ ಅನುದಾನದಲ್ಲಿ ಶೇ.50ರಷ್ಟು ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇರಳದ ಮಂಜೇಶ್ವರ ಶಾಸಕ ಅಶ್ರಫ್, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ರಾಣೆ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ.ದಿಲೀಷ್ ಶಶಿ, ಎಸ್ಪಿ ದೀಪನ್, ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಸಚಿನ್ ವೈ ಹಳೇಮನಿ, ಅಸಂಘಟಿತ ಕಾರ್ಮಿಕ ಮಂಡಳಿಯ ಸಹಾಯಕ ಕಾರ್ಮಿಕ ಆಯುಕ್ತೆ ಮೀನಾ ಪಾಟೀಲ್, ಬೆಳಗಾವಿ ವಿಭಾಗದ ಉಪ ಕಾರ್ಮಿಕ ಆಯುಕ್ತ ನಾಗೇಶ್, ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.