
ಶಿವಮೊಗ್ಗ (ಸೆ.28): ಮೋದಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿನಿ ಅಂದಿದ್ದರು. ಆದರೆ, ಇನ್ನೂ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ವ್ಯಾಪಿ ನಿರುದ್ಯೋಗ ಹೆಚ್ಚಾಗುತ್ತಿದ್ದು, ಈ ಬಗ್ಗೆ ರಾಜ್ಯದ ಸಂಸದರು ಗಮನ ಕೊಡುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರವು ಗಮನ ಕೊಡಬೇಕು. ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಬಿಜೆಪಿ ಬರೀ ಧರ್ಮ, ಪಾಕಿಸ್ತಾನ ಬಗ್ಗೆ ಗಮನ ಹರಿಸದೆ ಉದ್ಯೋಗ ಸೃಷ್ಟಿಸುವತ್ತ ಗಮನ ಹರಿಸಬೇಕು.
ಕೇಂದ್ರ ಸರ್ಕಾರಕ್ಕೂ ಮನವಿ ಮಾಡಬೇಕು. ಜಾತಿ ಗಣತಿ ಮುಕ್ತವಾಗಿ ನಡೆಯುತ್ತಿದೆ. ಇದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಶಿಕ್ಷಕರ ಈಗಾಗಲೇ ಸಮೀಕ್ಷೆಯಲ್ಲಿ ತೊಡಗಿಕೊಂಡಿದ್ದು, ಅವರಿಗೆ ಸಹಕಾರ ನೀಡಬೇಕು ಎಂದರು. ಬಿಜೆಪಿ ಸಣ್ಣ ಸಣ್ಣ ವಿಷಯಕ್ಕೆ ಧರ್ಮ ತಳಕು ಹಾಕಿ ರಾಜಕಾರಣ ಮಾಡಬಾರದು. ಮುಸ್ಲಿಂರಲ್ಲಿ ಮಾತ್ರವಲ್ಲ ಹಿಂದೂಗಳಲ್ಲಿ ಕಿಡಿಗೇಡಿಗಳಿದ್ದಾರೆ. ಅವರನ್ನೆಲ್ಲಾ ಧರ್ಮ ಆಧಾರಿತವಾಗಿ ಅಳಿಯುವ ಪ್ರಶ್ನೆ ಇಲ್ಲ. ತಪ್ಪು ಮಾಡಿದವರು ಯಾರೇ ಆಗಲಿ ಶಿಕ್ಷೆ ಆಗಬೇಕು. ಈಶ್ವರಪ್ಪ, ಅನಂತ ಕುಮಾರ್ ಹೆಗಡೆ, ಯತ್ನಾಳ್, ಪ್ರತಾಪ್ ಸಿಂಹ ಇವರೆಲ್ಲರ ಹಿಂದುತ್ವ ಪರವಾಗಿ ಇದ್ದವರು ಅವರನ್ನೇ ಬಿಜೆಪಿ ಹೊರಹಾಕಿದೆ ಎಂದು ಟೀಕಿಸಿದರು.
ನಮ್ಮ ಪಕ್ಷಕ್ಕೆ, ಸಿಎಂಗೆ ಬಯ್ಯುವ ಅಧಿಕಾರ ಈಶ್ವರಪ್ಪರಿಗೆ ಇಲ್ಲ ಎಂದ ಅವರು, ಸಚಿವ ಸಂಪುಟ ಬದಲಾವಣೆ ಕೇಂದ್ರ ನಾಯಕರು ತೀರ್ಮಾನ ಮಾಡುತ್ತಾರೆ. ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ನಮ್ಮ ಪಕ್ಷದ ವರಿಷ್ಠ ನಾಯಕರು ತಿರ್ಮಾನ ಮಾಡುತ್ತಾರೆ. ನನಗೆ ಕೊಟ್ಟರೆ ಖುಷಿಯಿಂದ ಕೆಲಸ ಮಾಡುತ್ತೇನೆ ಎಂದರು. ಸಾಗರ ಜಿಲ್ಲೆ ಎಂಬುದು ನಾಗರಿಕರ ಒತ್ತಾಯ. ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆ ಅದೇ ತೀರ್ಮಾನ. ಈ ಬಗ್ಗೆ ಕುಳಿತು ಚರ್ಚಿಸೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಂತರಾಗಿ ಇರಬೇಕಾದರೆ ಪ್ರತಿಯೊಂದು ಗ್ರಾಮದಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು. ಅವರು ಇಲ್ಲಿಗೆ ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಸವನಕೊಪ್ಪ ಬಳಿ ನಿರ್ಮಾಣಗೊಂಡ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯವಂತರಾಗಿ ಇರಬೇಕಾದರೆ ಗ್ರಾಮದ ಸ್ವಚ್ಛತೆ ಮುಖ್ಯ. ಗ್ರಾಮಗಳು ಸ್ವಚ್ಛತೆಯೊಂದಿಗೆ ಅಭಿವೃದ್ಧಿ ಕಾಣಬೇಕಾಗಿದೆ. ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯು ಗ್ರಾಮಗಳ ಸ್ವಚ್ಛತೆಗೆ ಮುಂದಾಗಬೇಕು. ಮನೆಗಳ, ಕೈಗಾರಿಕೆ ಇತ್ಯಾದಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸಿ ವಿಲೇವಾರಿ ಮಾಡುವ ಒಂದು ವ್ಯವಸ್ಥೆ ಇದಾಗಿದೆ. ತ್ಯಾಜ್ಯ ವಸ್ತುಗಳನ್ನು ಸಂಸ್ಕರಣೆ ಮಾಡುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಲು, ರೋಗಗಳನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.