ವಮೊಗ್ಗ ಬಿಜೆಪಿ ಅಭ್ಯರ್ಥಿಯಾಗಿ ಮಹಾನಗರ ಪಾಲಿಕೆ ಸದಸ್ಯ ಚೆನ್ನಬಸಪ್ಪ ಹೆಸರು ಘೋಷಣೆ. ಬಿಜೆಪಿ ಹೈಕಮಾಂಡ್ ನಿಂದ ಕೆಲವೇ ಕ್ಷಣಗಳಲ್ಲಿ ಪಟ್ಟಿ ಬಿಡುಗಡೆ ಸಾಧ್ಯತೆಯಿದೆ.
ಶಿವಮೊಗ್ಗ (ಏ.19): ಶಿವಮೊಗ್ಗ ಬಿಜೆಪಿ ಅಭ್ಯರ್ಥಿಯಾಗಿ ಮಹಾನಗರ ಪಾಲಿಕೆ ಸದಸ್ಯ ಚೆನ್ನಬಸಪ್ಪ ಹೆಸರು ಘೋಷಣೆ ಮಾಡಿದೆ. ನಾಳೆ ಬೆಳಗ್ಗೆ 10:30ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇಗುಲದಿಂದ ಹೊರಟು ಚುನಾವಣಾಧಿಕಾರಿಗೆ ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ರಾಜ್ಯದಲ್ಲಿ ಈವರೆಗೆ ಬಿಜೆಪಿಯಿಂದ ಒಟ್ಟು 222 ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಇನ್ನು ನಿನ್ನೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಸೊಸೆಗೆ ಟಿಕೆಟ್ ಕೊಡುವುದಾಗಿ ಬಿಜೆಪಿ ಹೈಕಮಾಂಡ್ ಹೇಳಿತ್ತು. ಆದರೆ, ನನ್ನ ಮಗನಿಗೇ ಟಿಕೆಟ್ ನೀಡಬೇಕು ಎಂದು ಕೆ.ಎಸ್. ಈಶ್ವರಪ್ಪ ಪಟ್ಟು ಹಿಡಿದಿದ್ದರು. ಜೊತೆಗೆ, ಈಗಾಗಲೇ ರಾಜ್ಯದಲ್ಲಿ ಸುಬ್ರಹ್ಮಣ್ಯ ಅವರ ಪುತ್ರ ಕಟ್ಟಾ ಜಗದೀಶ್, ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ, ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ ಸಿಂಗ್ ಸೇರಿ ಹಲವು ನಾಯಕರ ಪುತ್ರನಿಗೆ ಟಿಕೆಟ್ ಕೊಟ್ಟಿದ್ದೀರಿ. ನನ್ನ ಪುತ್ರನಿಗೂ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿದಿದ್ದರು. ಆದರೆ, ಈಶ್ವರಪ್ಪ ಕುಟುಂಬದ ಯಾರೊಬ್ಬರಿಗೂ ಟಿಕೆಟ್ ಕೊಡದೇ ಈಗ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಚನ್ನಬಸಪ್ಪಗೆ ಟಿಕೆಟ್ ನೀಡಿದೆ.
ನಾವು ಲಿಂಗಾಯತ ಸಿಎಂ ಮಾಡ್ತೀವಿ: ನಿಮಗೆ ಲಿಂಗಾಯತರನ್ನು ಸಿಎಂ ಮಾಡೋ ತಾಕತ್ತಿದೆಯಾ?
ಚನ್ನಬಸಪ್ಪ ಕೂಡ ಈಶ್ವರಪ್ಪನ ಆಪ್ತ: ಇನ್ನು ಈಗ ಟಿಕೆಟ್ ಘೋಷಣೆ ಮಾಡಿರುವ ಅಭ್ಯರ್ಥಿ ಕೂಡ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಿಂದ ಈಶ್ವರಪ್ಪ ಅತ್ಯಾಪ್ತ ಎಸ್. ಎನ್. ಚನ್ನಬಸಪ್ಪ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಟಿಕೆಟ್ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ ಎಂದು ಸ್ವತಃ ಚನ್ನಬಸಪ್ಪ ಮಾಹಿತಿ ನೀಡಿದ್ದಾರೆ. ನಾಳೆ ನಾಮಪತ್ರ ಸಲ್ಲಿಕೆಗೆ ಪಕ್ಷ ಸಿದ್ದತೆ ನಡೆಸಿ ಪ್ರಕಟಣೆಯನ್ನೂ ಹೊರಡಿಸಿದೆ. ನಾಳೆ ಬೆಳಗ್ಗೆ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ತೆರಳಿ, ರಾಮಣ್ಣ ಶೆಟ್ಟಿ ಪಾರ್ಕ್, ಗಾಂಧಿಬಜಾರ್, ನೆಹರು ರಸ್ತೆ ಮೂಲಕ ಸಾಗಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಾಗುತ್ತದೆ. ಬಿಜೆಪಿಯ ಎಲ್ಲ ಕಾರ್ಯಕರ್ತರೂ ಬಂದು ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.
ಜೆಡಿಎಸ್‌ನಿಂದ ಆಯನೂರು ಮಂಜುನಾಥ್ ಸ್ಪರ್ಧೆ: ಚಿತ್ರದುರ್ಗದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ಶಾಲು ಹೊದಿಸಿ, ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬಿ-ಫಾರಂ ನೀಡಿದರು. ಇನ್ನು ವಿಧಾನ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿ ನಂತರ, ಜೆಡಿಎಸ್‌ನಿಂದ ಸ್ಪರ್ಧೆ ಮಾಡಲಿದ್ದಾರೆ.
ಶಿವಮೊಗ್ಗದಲ್ಲಿ ಗಲಭೆಗಳು ಆರಂಭವಾಗಿವೆ:
ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗಿದೆ. ಕೋಮುಸೌಹಾರ್ಧತೆ ಇಲ್ಲ, ಗಲಭೆಗಳು ಆಗುತ್ತಿವೆ. ನಮ್ಮ ನಾಯಕರ ಹಿಡಿತವಿಲ್ಲದ ಮಾತಿನಿಂದ ಶಿವಮೊಗ್ಗ ಅಸ್ತವ್ಯಸ್ತವಾಗಿದೆ. ಶಿವಮೊಗ್ಗದಲ್ಲಿ ಶಾಂತಿ ನೆಲೆಸಲು ನಾನು ಈ ತೀರ್ಮಾನ ಕೈಗೊಂಡಿದ್ದೇನೆ. ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರಿದ್ದೇನೆ. ಮೊದಲ ಭೇಟಿಯಲ್ಲೇ ಕುಮಾರಸ್ವಾಮಿ ಬಿಫಾರಂ ನೀಡಿದ್ದಾರೆ. ರಾತ್ರಿಯೊಳಗೆ ಹುಬ್ಬಳ್ಳಿಗೆ ತೆರಳಿ ಹೊರಟ್ಟಿ ಅವರಿಗೆ ರಾಜೀನಾಮೆ ನೀಡುತ್ತೇನೆ ಎಂದು ಆಯನೂರು ಮಂಜುನಾಥ್ ತಿಳಿಸಿದರು.
12 ಜೆಡಿಎಸ್ ಅಭ್ಯರ್ಥಿಗಳ ಬದಲಿಸಿದ ಕುಮಾರಣ್ಣ: ಇದು ಗೆಲುವಿನ ಸೂತ್ರವೇ?
ಒಂದೇ ಭೇಟಿಯಲ್ಲಿ ಜೆಡಿಎಸ್ ಬಿ-ಫಾರಂ: ಮಾಧ್ಯಮಗಳೊಂದಿಗೆ ಮಾತನಾಡಿದ ಆಯನೂರು ಮಂಜುನಾಥ್, ನಾನು MLC ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಹುಬ್ಬಳ್ಳಿಗೆ ಹೊರಟಿದ್ದೆನು. ಜೆಡಿಎಸ್ ಜತೆ ನಿನ್ನೆಯಿಂದಲೇ ಸಂಪರ್ಕದಲ್ಲಿದ್ದೆವು. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಚಿತ್ರದುರ್ಗಕ್ಕೆ ಆಗಮಿಸಿದ್ದರು. ಚಿತ್ರದುರ್ಗ ಜೆಡಿಎಸ್ ಜಿಲ್ಲಾ ಕಚೇರಿಗೆ ಆಗಮಿಸಿದಾಗ ಪಕ್ಷ ಸೇರ್ಪಡೆ ಆಗಿದ್ದೇನೆ. ಇದೇ ವೇಳೆ ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಬಿ.ಫಾರಂ ಸಹ ನೀಡಿದ್ದಾರೆ. ನಾಳೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು.