ದೇಶ ವಿರೋಧಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಸಂದೇಶ ರವಾನೆ ಎಂದ ಸಂಸದ ಬಿ.ವೈ.ರಾಘವೇಂದ್ರ
ಶಿವಮೊಗ್ಗ(ಸೆ.29): ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾದ ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ದೇಶದಲ್ಲಿ ಐದು ವರ್ಷಗಳ ಅವಧಿಗೆ ನಿಷೇಧಿಸಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರದ ಆದೇಶ ದಿಟ್ಟಕ್ರಮ ಎಂದು ಸಂಸದ ಬಿ.ವೈ.ರಾಘವೇಂದ್ರ ಸ್ವಾಗತಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ, ದೇಶದ ಭದ್ರತೆ, ಅಂತರಿಕ ಸುರಕ್ಷತೆ ಹಿನ್ನೆಲೆ ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ದೇಶದಲ್ಲಿ 5 ವರ್ಷಗಳ ಅವಧಿಗೆ ನಿಷೇಧಿಸಿ, ಕೇಂದ್ರ ಭಾರತೀಯ ಜನತಾ ಪಕ್ಷದ ಸರ್ಕಾರ ಆದೇಶ ಹೊರಡಿಸಿದ ಕ್ರಮ ಸರಿಯಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗುತ್ತಿದ್ದ ಈ ಸಂಘಟನೆಗಳನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. 2001 ಸೆಪ್ಟೆಂಬರ್ 27ರಂದು ಇದೇ ರೀತಿ ದೇಶದ್ರೋಹ ಕೃತಿಯಲ್ಲಿ ತೊಡಗಿಕೊಂಡಿದ್ದ ಸಿಮಿ ಸಂಘಟನೆಯನ್ನು ಬ್ಯಾನ್ ಮಾಡಲಾಗಿತ್ತು, 2022 ಸೆಪ್ಟೆಂಬರ್ 27ರಂದು ಪಿಎಫ್‌ಐ ಸೇರಿದಂತೆ 5 ಸಂಘಟನೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಹೇಳಿದರು.
ದೇಶದ್ರೋಹಿಗಳಿಗೆ ಈಗ ತೋರಿಸುತ್ತಿರುವುದು ಸ್ಯಾಂಪಲ್ ಮಾತ್ರ: ಈಶ್ವರಪ್ಪ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಅಂಗ ಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಅಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾಸ್ಟೆಡರೇಶನ್ ಆಫ್ ನ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳ ಇವುಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಬ್ಯಾನ್ ಮಾಡಿದೆ. ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರ ಎಂದು ತಿಳಿಸಿದರು.
ನಿಖರ ಮಾಹಿತಿ ಮೇರೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸೇರಿದಂತೆ ವಿವಿಧ ರಾಜ್ಯಗಳ ಪೋಲಿಸ್ ಇಲಾಖೆ, ಇಲಾಖೆ ಗುಪ್ತಚರ ಮತ್ತು ಇತರ ತನಿಖಾ ತಂಡಗಳು ದೇಶದ 15 ರಾಜ್ಯಗಳಲ್ಲಿ ದಾಳಿ ನಡೆಸಿ ಅನೇಕ ಸಾಕ್ಷಿಗಳನ್ನು ಹಾಗೂ ದೊಡ್ಡಮಟ್ಟದ ಹಣವನ್ನು ಮತ್ತು ಸಂಘಟನೆ ಪ್ರಮುಖರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಈ ನೆಲದ ಕಾನೂನಿಗೆ ವಿರುದ್ಧವಾಗಿರುವ, ದೇಶ ವಿರೋಧಿ ಚಟುವಟಿಕೆ ನಡೆಸುವ ಯಾರನ್ನೂ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದರು.