
ಶಿವಮೊಗ್ಗ (ಸೆ.14): ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸಿದ್ದೆ ನಾನು ಮಾಡಿದ ದೊಡ್ಡ ತಪ್ಪು ಎಂದು ಸಂಸದ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ಶಿವಮೊಗ್ಗದಲ್ಲಿ ವಿಮಾನ ಲ್ಯಾಂಡ್ ಆಗದೆ ಹುಬ್ಬಳಿಗೆ ತೆರಳಿತ್ತು. ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಶಿವಮೊಗ್ಗಕ್ಕೆ ಆಗಮಿಸಿದೆ. ನ್ಮಮೂರಿನಲ್ಲೇ ವಿಮಾನ ನಿಲ್ದಾಣವಿದ್ದರೂ ಇನ್ನೊಂದು ಊರಿಗೆ ಹೋಗಿ ಬರುವಂತಹ ದುಸ್ಥಿತಿ ಇದೆ ಎಂದು ಬೇಸರವಾಗುತ್ತದೆ ಎಂದರು.
ನಮ್ಮ ತಂದೆ ಮುಖ್ಯಮಂತ್ರಿ ಆಗಿದ್ದಾಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸಿಬಿಟ್ಟೆ. ಇದು ನಾನು ಮಾಡಿದ ದೊಡ್ಡ ತಪ್ಪು ಎಂದು ಈಗ ಅನಿಸಲು ಶುರುವಾಗಿದೆ. ವಿಮಾನ ನಿಲ್ದಾಣದ ನಿರ್ವಹಣೆಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಿದ್ದರೆ ಎಲ್ಲ ಕೆಲಸಗಳು ಸುಗಮವಾಗುತ್ತಿತ್ತು ಎಂದು ತಿಳಿಸಿದರು. ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಪೂರಕವಾದ ಉಪಕರಣಗಳನ್ನು ತರಿಸಿ ಮೂರು ತಿಂಗಳಾಗಿದೆ. ಇವುಗಳ ಅಳವಡಿಕೆಗೆ ಎರಡರಿಂದ ಮೂರು ಕೋಟಿ ರುಪಾಯಿ ಅಗತ್ಯವಿದೆ. ಟೆಂಡರ್ ಕರೆಯಲು ವಿಳಂಬವಾಗುತ್ತಿದೆ. ಇದರ ಬದಲು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದರೆ ಟೆಂಡರ್ ರಹಿತವಾಗಿ ಕಾಮಗಾರಿ ಪೂರ್ಣಗೊಳಿಸುತ್ತಿದ್ದರು.
ಸರ್ಕಾರ ಒಂದು ಕೋಟಿ ರುಪಾಯಿ ಕೊಡಲು ಸಂಪುಟ ಸಭೆ ನಡೆಸಬೇಕು ಎನ್ನುತ್ತಿದೆ. ರಾಜ್ಯ ಸರ್ಕಾರದಿಂದ ಹಣ ಕೊಡಲೂ ವಿಳಂಬವಾಗುತ್ತಿದೆ. ಕೆಲಸ ಆರಂಭಿಸಲೂ ತಡವಾಗುತ್ತಿದೆ. ಇದರಿಂದ ನಮಗೆ ದೊರೆಯಬೇಕಿದ್ದ ಅವಕಾಶವನ್ನು ಬೇರೆಯವರ ಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರ ಕೂಡಲೇ ನೈಟ್ ಲ್ಯಾಂಡಿಂಗ್ ಉಪಕರಣಗಳನ್ನು ಅಳವಡಿಸಿ ಕೊಡಬೇಕು. ಆ ಬಳಿಕ ದೆಹಲಿಯಲ್ಲಿ ಚರ್ಚೆ ನಡೆಸಿ ಮತ್ತಷ್ಟು ವಿಮಾನಗಳನ್ನು ತರಿಸುವ ಪ್ರಯತ್ನ ಮಾಡುತ್ತೇನೆ. ಇಲ್ಲವಾದಲ್ಲಿ ಇಂತಹ ಮೋಡದ ವಾತಾವರಣ ಇದ್ದರೆ ಅನೇಕ ವಿಮಾನಗಳು ಕ್ಯಾನ್ಸಲ್ ಆಗುತ್ತವೆ ಎಂದರು.
ರಾಜ್ಯದ ನ್ಯಾಯಯುತ ಪಾಲನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ, ಸಂಸದರು ಬಾಯಿಬಿಡುತ್ತಿಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರಾಘವೇಂದ್ರ ಅವರು, ಕೇಂದ್ರದಿಂದ ನೀಡಿದ ಹಲವು ಅನುದಾನಗಳು ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನನೀಡದೇ ಇರುವುದರಿಂದ ವಾಪಸ್ ಹೋಗಿದೆ. ಸರಿಯಾದ ತಾಂತ್ರಿಕ ಯೋಜನೆ ರೂಪುರೇಷೆಗಳನ್ನು ರಾಜ್ಯ ಸರ್ಕಾರ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ಒದಗಿಸದೇ ಇರುವುದರಿಂದ ಹಣ ಬಿಡುಗಡೆಯಲ್ಲಿ ವ್ಯತ್ಯಯವಾಗಿದೆ. ಇದಕ್ಕೆ ಪೂರಕ ದಾಖಲೆಗಳನ್ನು ನಾನು ಬಿಡುಗಡೆ ಮಾಡಲು ಸಿದ್ಧ. ಈ ಬಗ್ಗೆ ಇದೇ ಡಿಸಿಎಂ ಜೊತೆಗೆ ದೆಹಲಿ ಕರ್ನಾಟಕ ಭವನದಲ್ಲಿ ಹಲವು ಸಭೆಗಳನ್ನು ನಡೆಸಲಾಗಿದೆ. ರಾಜ್ಯ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಎಂದು ದೂರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.