ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಸ್ತದಿಂದ ಉದ್ಘಾಟನೆಯಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಾಳೆ ಮತ್ತೊಮ್ಮೆ ಲೋಕಾರ್ಪಣೆಯಾಗಲಿದೆ.
ಬೆಳಗಾವಿ(ಮಾ.04): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಸ್ತದಿಂದ ಉದ್ಘಾಟನೆಯಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಾಳೆ(ಭಾನುವಾರ) ಮತ್ತೊಮ್ಮೆ ಲೋಕಾರ್ಪಣೆಯಾಗಲಿದೆ. ಹೌದು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಾಜಹಂಸಗಡ ಕೋಟೆ ಕದನ ತುಸು ಜೋರಾಗಿಯೇ ನಡೆದಿದೆ. ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಇಂದು(ಶನಿವಾರ) ಶಾಸ್ತ್ರೋತ್ತವಾಗಿ ಪೂಜೆ ಮಾಡಲಾಗಿದೆ. ಮಹಾರಾಷ್ಟ್ರದ ತುಳಜಾಪುರದಿಂದ ಆಗಮಿಸಿದ ಅರ್ಚಕರು ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಮಾಡಿದ್ದಾರೆ.
ರಾಜಹಂಸಗಡ ಕೋಟೆಗೆ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಭೇಟಿ ನೀಡಿದ್ದಾರೆ. ಸಿದ್ದೇಶ್ವರ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ಮಾಡಿಸಲಾಗಿದೆ. ಸುದರ್ಶನ ಹೋಮ, ಪ್ರಾಣ ಪ್ರತಿಷ್ಠಾಪನೆ ಸೇರಿ ಹಲವು ಪೂಜಾ ಕೈಂಕರ್ಯಗಳು ನೆರವೇರಿವೆ. ಇಂದು ಸಂಜೆ 4 ಗಂಟೆಯವರೆಗೆ ಪೂಜಾ ಕೈಂಕರ್ಯಗಳು ನಡೆಯಲಿವೆ.
ಬೆಳಗಾವಿಯಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಶಿವಾಜಿ ಪ್ರತಿಮೆ ಜಟಾಪಟಿ
ನಾಳೆ ಬೆಳಗ್ಗೆ 9 ಗಂಟೆಯಿಂದ ಛತ್ರಪತಿ ಶಿವಾಜಿ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಬೆಳಗ್ಗೆ 9ರಿಂದ 10ರವರೆಗೆ ಪಾಲಕಿ ಉತ್ಸವ, 10.30ಕ್ಕೆ ಧ್ವಜಾರೋಹಣ, ಉತ್ಸವಮೂರ್ತಿ ಪೂಜೆ, ಡೋಲ್ ತಾಶಾದೊಂದಿಗೆ ಶಿವಾಜಿ ಮೂರ್ತಿ ಉದ್ಘಾಟನೆಯಾಗಲಿದೆ.
ಶಿವಾಜಿ ಮಹಾರಾಜರ 13ನೇ ವಂಶಸ್ಥ ಯುವರಾಜ ಸಂಭಾಜಿರಾಜೇ ಛತ್ರಪತಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಸತೇಜ್ ಪಾಟೀಲ್, ಮರಾಠಿ ನಟ, ಸಂಸದ ಡಾ.ಅಮೋಲ್ ಕೋಲೆ, ಲಾತೂರು ಶಾಸಕ ಧೀರಜ್ ದೇಶಮುಖ್, ಖ್ಯಾತ ಚಿತ್ರನಟ ರಿತೇಶ್ ದೇಶಮುಖ್ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ನಾಳೆ ಸಂಜೆ 5.30ರಿಂದ ರಾಜಹಂಸಗಡ ಕೋಟೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡೋಲ್ ತಾಶಾ, ಲೇಸರ್ ಶೋ, ಕ್ರ್ಯಾಕರ್ ಶೋ, ಮರದಾನಿ ಖೇಳ ಸೇರಿ ಪಾರಂಪರಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆ. ಇಂದು ಶಾಸ್ತ್ರೋತ್ತವಾಗಿ ಶಿವಾಜಿ ಪ್ರತಿಮೆಗೆ ಪೂಜೆ ನೆರವೇರುತ್ತಿದೆ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಹೇಳಿದ್ದಾರೆ.
ಸಿಎಂ ಬೊಮ್ಮಾಯಿಗೂ ಆಹ್ವಾನ
ನಾಳೆ ಬೆಳಗ್ಗೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆಯಾಗುತ್ತಿರುವುದರಿಂದ ಹಲವು ರಾಜಕೀಯ ನಾಯಕರಿಗೆ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿಗಳಿ ಬಸವರಾಜ ಬೊಮ್ಮಾಯಿ ಅವರಿಗೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಹ್ವಾನ ನೀಡಿದ್ದಾರೆ ಅಂತ ಮೃಣಾಲ್ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕಾರ್ಯಕ್ರಮದಿಂದ ಹಿಂದೆ ಸಂಸದ ಡಾ.ಅಮೋಲ್ ಕೋಲೆ
MES ಒತ್ತಡಕ್ಕೆ ಮಣಿದು ಮಹಾರಾಷ್ಟ್ರದ ನಟ, ಸಂಸದ ಡಾ.ಅಮೋಲ್ ಕೋಲೆ ಅವರು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ ಅಂತ ಹೇಳಲಾಗುತ್ತಿದೆ. ನಿನ್ನೆ ಶಿವಾಜಿ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬರೋದಾಗಿ ಡಾ.ಅಮೋಲ್ ಕೋಲೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ವಿಡಿಯೋ ಹೇಳಿಕೆಯಲ್ಲಿ 'ಬೆಳಗಾವಿ'ಗೆ ಬರ್ತಿದೀನಿ ಅಂತ ಡಾ.ಅಮೋಲ್ ಕೋಲೆ ಹೇಳಿದ್ದರು.
ಯಡಿಯೂರಪ್ಪ ಸೇವೆಯನ್ನು ಬಿಜೆಪಿ ಎಂದೂ ಮರೆಯಲ್ಲ: ರಾಜನಾಥ ಸಿಂಗ್
'ಬೆಳಗಾವಿ' ಅಂತಾ ಪದ ಬಳಸಿದ್ದಕ್ಕೆ ಎಂಇಎಸ್ ಪುಂಡರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಮರಾಠಿ ನಟ, ಸಂಸದ ಡಾ.ಅಮೋಲ್ ಕೋಲೆ ತಮ್ಮ ನಿರ್ಧಾರವನ್ನ ಬದಲಿಸಿದ್ದಾರೆ ಅಂತ ಹೇಳಲಾಗುತ್ತಿದೆ. 'ಬೆಳಗಾಂವ' ಎಂಬ ಪದವನ್ನು ತಪ್ಪಾಗಿ ಉಲ್ಲೇಖಿಸಿದ್ದಕ್ಕೆ ಮರಾಠಿ ಬಾಂಧವರ ಕ್ಷಮೆ ಕೇಳುವೆ, ವಿಡಿಯೋ ಹೇಳಿಕೆ ನೀಡುವಾಗ ನನ್ನಿಂದ ತಪ್ಪಾಗಿದೆ ಅಂತ ಡಾ.ಅಮೋಲ್ ಕೋಲೆ ವಿನಂತಿಸಿಕೊಂಡಿದ್ದಾರೆ.
ಹಿಂದೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಟ ಡಾ.ಅಮೋಲ್ ಕೋಲೆ ಧ್ವನಿ ಎತ್ತಿದ್ದರು. 'ಮರಾಠ ಟೈಗರ್' ಮರಾಠಿ ಚಿತ್ರದ ಮೂಲಕ ನಟ ಡಾ.ಅಮೋಲ್ ಕೋಲೆ ಗಡಿ ವಿವಾದ ಕೆದಕಿದ್ದರು. ಈಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಡಾ.ಅಮೋಲ್ ಕೋಲೆ, ಈ ವಿಡಿಯೋದಲ್ಲಿ 'ಬೆಳಗಾವಿ' ಬದಲಾಗಿ 'ಬೆಳಗಾಂವ' ಎಂದು ಹೇಳಿದ್ದಾರೆ. ನನ್ನಿಂದ ಬಹುದೊಡ್ಡ ತಪ್ಪಾಗಿದೆ ನಾನು ಬಹಿರಂಗವಾಗಿ ಕ್ಷಮೆಯಾಚನೆ ಮಾಡ್ತಿನಿ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.