ವಿಜಯನಗರ: ಗೆಲುವಿನ ‘ಆನಂದ’ಕ್ಕೆ ಬ್ರೇಕ್‌ ಹಾಕುವುದೇ ಕಾಂಗ್ರೆಸ್‌?

By Kannadaprabha News  |  First Published Mar 4, 2023, 1:08 PM IST

ವಿಜಯನಗರ ಕ್ಷೇತ್ರದಲ್ಲಿ 4 ಬಾರಿ ಜಯದ ನಗೆ ಬೀರಿರುವ ಆನಂದ ಸಿಂಗ್‌, ಪಕ್ಷ ಬದಲಿಸಿದರೂ ಜಯಭೇರಿ ಸಾಧಿಸಿದ ನಾಯಕ. 


ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಮಾ.04):  ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಪ್ರತಿನಿಧಿಸುವ ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲೀಗ ಸಿಂಗ್‌ ನಾಗಾಲೋಟಕ್ಕೆ ತಡೆ ಒಡ್ಡುವರರು ಯಾರು? ಎಂಬ ಪ್ರಶ್ನೆ ಎದ್ದಿದೆ. ಹಾಗಾಗಿ, ಕಾಂಗ್ರೆಸ್‌ ಹೈಕಮಾಂಡ್‌ ಅಳೆದು ತೂಗಿ ಟಿಕೆಟ್‌ ನೀಡುವುದಕ್ಕೆ ಮುಂದಾಗಿದೆ. 2008ಕ್ಕೆ ಮೊದಲು ಇದು ಹೊಸಪೇಟೆ ಕ್ಷೇತ್ರವಾಗಿತ್ತು. ಕ್ಷೇತ್ರ ಮರು ವಿಂಗಡಣೆ ಬಳಿಕ ವಿಜಯನಗರ ಕ್ಷೇತ್ರವಾಗಿದೆ. ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಚುನಾವಣೆಗಳಲ್ಲಿ ಆನಂದ ಸಿಂಗ್‌ ಜಯಭೇರಿ ಬಾರಿಸಿದ್ದಾರೆ. ಮೂರು ಬಾರಿ ಬಿಜೆಪಿಯಿಂದ ಹಾಗೂ ಒಮ್ಮೆ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಎರಡು ಬಾರಿ ಮಂತ್ರಿಯಾಗಿದ್ದಾರೆ.

Latest Videos

undefined

ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಿಂಗ್‌ ಅವರು ದುಂಬಾಲು ಬಿದ್ದು, ವಿಜಯನಗರ ಜಿಲ್ಲೆ ಮಾಡಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟುಅನುದಾನ ನೀಡಿದ್ದಾರೆ. ಆನಂದ ಸಿಂಗ್‌ ಕೂಡ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಕಷ್ಟುಅನುದಾನ ತಂದಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕ್ಷೇತ್ರವೀಗ ಕಮಲದ ಭದ್ರಕೋಟೆಯಾಗಿ ಮಾರ್ಪಾಡಾಗುತ್ತಿದೆ. ಹೀಗಾಗಿ, ಕ್ಷೇತ್ರದಲ್ಲಿ ಮತ್ತೆ ಅಧಿಪತ್ಯ ಸಾಧಿಸಲು ‘ಕೈ’ ನಾಯಕರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

ವಿಜಯನಗರ: ನಾಲ್ಕು ಬಾರಿ ಗೆದ್ದದ್ದಾಯ್ತು, ಈ ಸಲ ಮಗನನ್ನ ಕಣಕ್ಕಿಳಿಸ್ತಾರಾ ಆನಂದ್‌ ಸಿಂಗ್‌?

ಆನಂದ ಸಿಂಗ್‌ ಕಾಂಗ್ರೆಸ್‌ನಿಂದ ಗೆದ್ದಿದ್ದು 2018ರಲ್ಲಿ ಮಾತ್ರ. ಉಳಿದ ಮೂರು ಬಾರಿ, 2013, 2018ರ ಸಾರ್ವತ್ರಿಕ ಮತ್ತು 2019ರ ಉಪಚುನಾವಣೆಗಳಲ್ಲಿ ಬಿಜೆಪಿಯಿಂದ ಗೆದ್ದಿದ್ದಾರೆ. ಈಗ ಆನಂದ ಸಿಂಗ್‌ರನ್ನು ಕಟ್ಟಿಹಾಕಲು ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಎಚ್‌.ಆರ್‌. ಗವಿಯಪ್ಪರನ್ನು ಕಾಂಗ್ರೆಸ್‌ ನಾಯಕರು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಕಾಂಗ್ರೆಸ್ಸಿನಲ್ಲಿ 11 ಜನ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಈ ಪೈಕಿ ಮಾಜಿ ಶಾಸಕ ಸಿರಾಜ್‌ ಶೇಖ್‌, ಮುಖಂಡರಾದ ವೆಂಕಟರಾವ್‌ ಘೋರ್ಪಡೆ, ರಾಜಶೇಖರ ಹಿಟ್ನಾಳ, ಕುರಿ ಶಿವಮೂರ್ತಿ, ಎಚ್‌ಎನ್‌ಎಫ್‌ ಇಮಾಮ್‌ ನಿಯಾಜಿ, ಸಯ್ಯದ್‌ ಮೊಹಮ್ಮದ್‌ ಪ್ರಮುಖರು. ಆದರೆ, ಆನಂದ ಸಿಂಗ್‌ರನ್ನು ಕಟ್ಟಿಹಾಕಬಲ್ಲ, ಅವರ ಪಟ್ಟುಗಳನ್ನು ಬಲ್ಲವರನ್ನೇ ಕಣಕ್ಕಿಳಿಸುವ ಆಲೋಚನೆಯಲ್ಲಿ ‘ಕೈ’ ನಾಯಕರಿದ್ದಾರೆ.

2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಗವಿಯಪ್ಪ ಅವರು, ಆನಂದ ಸಿಂಗ್‌ಗೆ ತೀವ್ರ ಪೈಪೋಟಿ ನೀಡಿದ್ದರು. 2019ರ ಉಪಚುನಾವಣೆಯಲ್ಲಿ ಸಂಡೂರಿನ ರಾಜಮನೆತನದ ವೆಂಕಟರಾವ್‌ ಘೋರ್ಪಡೆ ಸ್ಪರ್ಧಿಸಿದ್ದರು. ಅಬ್ಬರದ ಪ್ರಚಾರವಿಲ್ಲದೆ ಹೆಚ್ಚಿನ ಮತಗಳನ್ನು ಪಡೆದಿದ್ದರು. ಜೆಡಿಎಸ್‌ ಕೂಡ ಈ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕಲಿದ್ದು, ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್‌ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.

ಕ್ಷೇತ್ರದ ಹಿನ್ನೆಲೆ:

1957ರಲ್ಲಿ ಹೊಸಪೇಟೆ ಕ್ಷೇತ್ರ ರಚನೆಯಾದಾಗ ಕಂಪ್ಲಿ ಕೂಡ ಸೇರಿತ್ತು. ಕಾಂಗ್ರೆಸ್‌ ಮೊದಲಿನಿಂದಲೂ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿತ್ತು. ಆರ್‌. ನಾಗನಗೌಡ ಮೊದಲ ಬಾರಿಗೆ ಶಾಸಕರಾಗಿ, ಸಚಿವರೂ ಆದರು. ಆನಂದ ಸಿಂಗ್‌ರ ಚಿಕ್ಕಪ್ಪ ಸತ್ಯನಾರಾಯಣ ಸಿಂಗ್‌ ಎರಡು ಬಾರಿ ಮತ್ತು ಅವರ ಅಣ್ಣ ರತನ್‌ ಸಿಂಗ್‌ ಒಮ್ಮೆ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಗುಜ್ಜಲ ಜಯಲಕ್ಷ್ಮೀ ಕೂಡ ಕಾಂಗ್ರೆಸ್ಸಿನಿಂದ ಗೆದ್ದಿದ್ದರು. ಜಿ. ಶಂಕರಗೌಡರು ಬಿಜೆಪಿಯಿಂದ ಒಮ್ಮೆ ಗೆಲುವು ಸಾಧಿಸಿದ್ದರು.

ಪ್ರಧಾನಿ ಮೋದಿ ಬಂದ್ರೆ ಕಾಂಗ್ರೆಸ್‌ ನಾಯಕರಿಗೆ ಚಳಿಜ್ವರ: ಶ್ರೀರಾಮುಲು

ಗವಿಯಪ್ಪ ಅವರು ಪಕ್ಷೇತರರಾಗಿಯೂ ಕ್ಷೇತ್ರದಲ್ಲಿ ಜಯಶಾಲಿಯಾಗಿದ್ದಾರೆ. 2018ರಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಆನಂದ ಸಿಂಗ್‌, ಬಿಜೆಪಿಯ ಗವಿಯಪ್ಪರನ್ನು 8,228 ಮತಗಳ ಅಂತರದಿಂದ ಸೋಲಿಸಿದ್ದರು. ಅವರು ಸ್ಪರ್ಧಿಸಿದ ನಾಲ್ಕು ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಗೆದ್ದ ಚುನಾವಣೆ ಇದಾಗಿದೆ. 2019ರ ಉಪ ಚುನಾವಣೆಯಲ್ಲಿ ವೆಂಕಟರಾವ್‌ ಘೋರ್ಪಡೆ ಅವರನ್ನು 30,125 ಮತಗಳಿಂದ ಸೋಲಿಸಿದ್ದಾರೆ.

ಜಾತಿ ಲೆಕ್ಕಾಚಾರ:

ಕ್ಷೇತ್ರದಲ್ಲಿ 2,43,765 ಮತದಾರರಿದ್ದು, ವಾಲ್ಮೀಕಿ ನಾಯಕ, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕುರುಬ, ವೀರಶೈವ ಲಿಂಗಾಯತ, ಪರಿಶಿಷ್ಟರ ಜಾತಿಯಲ್ಲಿ ಮಾದಿಗ, ಛಲವಾದಿ, ಲಂಬಾಣಿ ಮತ್ತು ಬೋವಿಗಳು ಕೂಡ ನಿರ್ಣಾಯಕರಾಗಿದ್ದಾರೆ.

click me!