ಒಂದೇ ಪ್ರತಿಮೆ 2 ಬಾರಿ ಉದ್ಘಾಟನೆ, ಇಂದು ಸಿಎಂ ಬೊಮ್ಮಾಯಿಯಿಂದ ಲೋಕಾರ್ಪಣೆ, ಮಾ.5ರಂದು ಮತ್ತೆ ಕಾಂಗ್ರೆಸ್‌ನಿಂದ ಉದ್ಘಾಟನೆ.
ಬೆಳಗಾವಿ(ಮಾ.02): ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಸಮಾರಂಭ ಗುರುವಾರ ಬೆಳಗ್ಗೆ 10 ಗಂಟೆಗೆ ರಾಜಹಂಸಗಡದ ಕೋಟೆ ಆವರಣದಲ್ಲಿ ನಡೆಯಲಿದೆ. ಈ ಪ್ರತಿಮೆ ಅನಾವರಣ ಕಾರ್ಯಕ್ರಮ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನಡುವಿನ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಲಕ್ಷ್ಮಿ ಹೆಬ್ಬಾಳಕರ ಅವರು ಮಾ.5ರಂದು ಮತ್ತೊಮ್ಮೆ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದ್ದಾರೆ.
ಗುರುವಾರ ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಮೆ ಅನಾವರಣಗೊಳಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ ಪಾಲ್ಗೊಳ್ಳಲಿದ್ದಾರೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರಮೇಶ ಜಾರಕಿಹೊಳಿ ಸೇರಿ ಜಿಲ್ಲೆಯ ಎಲ್ಲ ಸಂಸದರು, ಎಲ್ಲ ಶಾಸಕರು ಉಪಸ್ಥಿತರಿರುತ್ತಾರೆ.
ಪ್ರಧಾನಿ ಮೋದಿ ರೋಡ್ ಶೋಗೆ ಹಣ ಕೊಟ್ಟು ಜನ ಕರೆಸಿದ್ದಾರೆ: ಸಿದ್ದರಾಮಯ್ಯ
5ರಂದು ಮತ್ತೊಮ್ಮೆ ಲೋಕಾರ್ಪಣೆ:
ಈ ಮಧ್ಯೆ, ಗ್ರಾಮೀಣ ಕ್ಷೇತ್ರದ ಪಂತಬಾಳೇಕುಂದಿಯಲ್ಲಿ ಬುಧವಾರ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಲಕ್ಷ್ಮೇ ಹೆಬ್ಬಾಳಕರ, ಕ್ಷೇತ್ರದ ಜನತೆಯ ನಿರ್ಧಾರದಂತೆ ಮಾ.5 ರಂದು ಅನಾವರಣ ಕಾರ್ಯಕ್ರಮ ಆಯೋಜಿಸಿದ್ದೇವೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಹಾಗೂ ನೆರೆಯ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಲಾಗಿದೆ. ಶತಮಾನಗಳಷ್ಟುಹಳೆಯದಾದ ರಾಜಹಂಸಗಡ ಕೋಟೆಯನ್ನು ಅಭಿವೃದ್ಧಿಪಡಿಸಿದ್ದು ಕಾಂಗ್ರೆಸ್, ಅದೂ ನಾನು ಈ ಕ್ಷೇತ್ರದ ಶಾಸಕರಾದ ನಂತರ. ಮಾ.3 ರಂದು ಮಹಾರಾಷ್ಟ್ರದ ರಾಯಗಢದಿಂದ ಶಿವಾಜಿ ಮಹಾರಾಜರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಮಾ.4ರಂದು ರಾಜಹಂಸಗಢಕ್ಕೆ ಆಗಮಿಸಿದ ನಂತರ, ಮಾ.5ರಂದು ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಮಾಡಿ, ನಂತರ ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡೋಣ ಎಂದರು.