Maharashtra Political Crisis: ಮಹಾರಾಷ್ಟ್ರದ ಸಚಿವ ಏಕನಾಥ ಶಿಂಧೆ 12 ಶಾಸಕರ ಜೊತೆ ಗುಜರಾತಿನ ಸೂರತ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಲೆಕ್ಕಾಚಾರಗಳ ಪ್ರಕಾರ ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್‌ನ ಮೈತ್ರಿ ಸರ್ಕಾರವನ್ನು ಉರುಳಿಸಲು ಶಿಂಧೆ ಬಂಡಾಯವೆದ್ದಿದ್ದಾರೆ. ಬಿಜೆಪಿ ಕಡೆಗೆ ಈ ಎಲ್ಲಾ ಶಾಸಕರ ಒಲವಿದೆ ಎನ್ನಲಾಗಿದ್ದು, ಸರ್ಕಾರ ಉಳಿಸಿಕೊಳ್ಳಲು ಉದ್ಧವ್ ಠಾಕ್ರೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಮುಂಬೈ: ಮಹಾರಾಷ್ಟ್ರ ಸಚಿವ ಏಕನಾಥ್ ಶಿಂಧೆ (Eknath Shinde) ಮತ್ತು ಕೆಲ ಶಿವಸೇನೆ ಶಾಸಕರು (Disgruntled Shiv Sena MLAs) ಸೋಮವಾರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬಂದ ನಂತರ ಕಾಣೆಯಾಗಿದ್ದಾರೆ. ಪಕ್ಷದ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Maharashtra CM Uddhav Thackeray) ಅವರ ಸಂಪರ್ಕಕ್ಕೂ ಸಿಗದೇ ಶಿಂಧೆ ಕೆಲ ಶಾಸಕರ ಜೊತೆ ನಾಪತ್ತೆಯಾಗಿದ್ದಾರೆ. ಇದರಿಂದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಭವಿಷ್ಯ ಡೋಲಾಯಮಾನವಾಗಿದೆ. ಈ ಎಲ್ಲಾ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಶಿವಸೇನೆ ಕೆಲ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ಶಂಕಿಸಲಾಗಿತ್ತು. ಈಗ ಸುಮಾರು 12 ಶಾಸಕರು ಸಂಪರ್ಕಕ್ಕೆ ಸಿಗದಿರುವುದನ್ನು ನೋಡಿದರೆ ಶಿವಸೇನೆಯಲ್ಲಿ ಬಂಡಾಯ ಪರ್ವ ಆರಂಭವಾಗಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ನಾಪತ್ತೆಯಾಗಿರುವ ಶಾಸಕರು ಗುಜರಾತಿನ ಸೂರತ್‌ನ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಶಿವಸೇನೆ ಶಾಸಕರು ವಾಸ್ತವ್ಯ ಹೂಡಿರುವುದರಿಂದ ಮಹಾರಾಷ್ಟ್ರ ಸರ್ಕಾರ ಉರುಳಿಸಲು ಆಪರೇಷನ್ ಕಮಲ ನಡೆಯುವ ಸಾಧ್ಯತೆಯಿದೆ.
ಸೂರತ್‌ನಿಂದ ಇಂದು ಮಧ್ಯಾಹ್ನ ಏಕನಾಥ ಶಿಂಧೆ ಪತ್ರಿಕಾಗೋಷ್ಠಿ ನಡೆಸುತ್ತಾರೆ ಎನ್ನಲಾಗಿದೆ. ಹೋಟೆಲ್ ಸುತ್ತಮುತ್ತ ಭದ್ರತೆ ಒದಗಿಸಲಾಗಿದ್ದು, ಪ್ರವೇಶ ನಿರ್ಬಂಧ ಹೇರಲಾಗಿದೆ. ಏಕನಾಥ ಶಿಂಧೆ ನಿಕಟವರ್ತಿಗಳ ಮಾಹಿತಿ ಪ್ರಕಾರ ಶಿಂಧೆಗೆ 20 ಶಾಸಕರ ಬೆಂಬಲವಿದೆ. ಪಶ್ಚಿಮ ಮಹಾರಾಷ್ಟ್ರ, ಮರಾಠಾವಾಡ ಮತ್ತು ವಿದರ್ಭ ಭಾಗದ ಶಾಸಕರು ಶಿಂಧೆ ಜೊತೆಗಿದ್ದಾರೆ ಎನ್ನಲಾಗಿದೆ.
ಪರಿಷತ್ ಚುನಾವಣೆಯ ಫಲಿತಾಂಶ:
ನಿನ್ನೆಯ ಪರಿಷತ್ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಐದು, ಶಿವಸೇನೆ ಮತ್ತು ಎನ್‌ಸಿಪಿ ತಲಾ ಎರಡು ಸೀಟ್‌ಗಳನ್ನು ಗೆದ್ದುಕೊಂಡಿತ್ತು. ಶಿವಸೇನೆ ಶಾಸಕರ ಅಡ್ಡ ಮತದಾನದಿಂದ ಬಿಜೆಪಿಯ ಐದು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಒಟ್ಟೂ 106 ಶಾಸಕರನ್ನು ಹೊಂದಿದೆ. ಶಿವಸೇನೆ 50, ಎನ್‌ಸಿಪಿ 51 ಮತ್ತು ಕಾಂಗ್ರೆಸ್ 44 ಶಾಸಕ ಬಲ ಹೊಂದಿದೆ. ಒಂದು ವೇಳೆ ಏಕನಾಥ ಶಿಂಧೆ 20 ಶಾಸಕರ ಜೊತೆ ಬಿಜೆಪಿಗೆ ಬೆಂಬಲ ನೀಡಿದಲ್ಲಿ, ಮಹಾ ವಿಕಾಸ್ ಅಘಾಡಿ ಶಕ್ತಿ ಕುಗ್ಗಲಿದೆ. ಜತೆಗೆ ಚಿಕ್ಕಪುಟ್ಟ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಪ್ರವಾಹ ಬಂದಾಗ ಬಾರದ ಮೋದಿ, ಈಗ ಯೋಗ ಮಾಡಲು ಬಂದಿದ್ದಾರೆ- ಸಿದ್ದು
ಈ ಎಲ್ಲಾ ಲೆಕ್ಕಾಚಾರಗಳು ನಡೆದಲ್ಲಿ ಉದ್ಧವ್ ಠಾಕ್ರೆ ಸದನದಲ್ಲಿ ವಿಶ್ವಾಸ ಮತ ಸಾಬೀತುಪಡಿಸಬೇಕಾಗಲಿದೆ. ಒಂದೆಡೆ ಬಿಜೆಪಿ ಏಕನಾಥ ಶಿಂಧೆ ಮೂಲಕ ಆಪರೇಷನ್ ನಡೆಸುತ್ತಿದ್ದರೆ, ಇತ್ತ ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಮೂರು ಪಕ್ಷಗಳು ಶಿಂಧೆ ಸಂಪರ್ಕಿಸಿ ಮನವೊಲಿಸಲು ಯತ್ನಿಸುತ್ತಿದೆ. ಅಜಿತ್ ಪವಾರ್ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಬಂಡಾಯ ಶಾಸಕರು ವಾಪಸ್ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಸದ್ಯ ಪರಿಸ್ಥಿತಿ ಮಹಾ ವಿಕಾಸ್ ಅಘಾಡಿ ಸರ್ಕಾರದ ಕೈಯಲ್ಲಿಲ್ಲ ಎನ್ನಲಾಗುತ್ತಿದೆ. ಯಾಕೆಂದರೆ ಪರಿಷತ್ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮೂರೂ ಪಕ್ಷಗಳ ಶಾಸಕರು ಬಿಜೆಪಿ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿರುವ ಸಾಧ್ಯತೆಯಿದೆ.
ಶಿಂಧೆಗೆ ಉಪ ಮುಖ್ಯಮಂತ್ರಿ ಆಫರ್:
ಮೂಲಗಳ ಪ್ರಕಾರ ಬಂಡಾಯ ಸಚಿವ ಏಕನಾಥ ಶಿಂಧೆಗೆ ಉಪ ಮುಖ್ಯಮಂತ್ರಿ ಸ್ಥಾನದ ಆಫರ್ ಮಾಡಲಾಗಿದೆ. ಬಿಜೆಪಿ ಸರ್ಕಾರ ರಚನೆ ಮಾಡಿದಲ್ಲಿ ಏಕನಾಥ ಶಿಂಧೆ ಅವರನ್ನು ಡಿಸಿಎಂ ಮಾಡಲಾಗುವುದು ಎಂದು ದೇವೇಂದ್ರ ಫಡ್ನವಿಸ್ ಭರವಸೆ ನೀಡಿದ್ದಾರೆ, ಇದೇ ಕಾರಣಕ್ಕೆ ಶಿಂಧೆ ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: ಮುಂಬರುವ ಎಲೆಕ್ಷನ್‌ನಲ್ಲಿ ಕುಮಾರಸ್ವಾಮಿ ಯಾವ ಕ್ಷೇತ್ರದಿಂದ ಸ್ಪರ್ಧೆ?: ಎಚ್‌ಡಿಕೆ ಹೇಳಿದ್ದಿಷ್ಟು
ದೆಹಲಿ ತಲುಪಿದ ಫಡ್ನವಿಸ್:
ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ದೆಹಲಿಗೆ ಹೋಗಿದ್ದಾರೆ. ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಪಕ್ಷ ರಚನೆಯ ಸಾಧ್ಯಾಸಾಧ್ಯತೆಯನ್ನು ಚರ್ಚಿಸುವ ಸಲುವಾಗಿ ಅವರು ದೆಹಲಿಗೆ ಹೋಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲದ ಚಟುವಟಿಕೆ ಆರಂಭವಾಗಿರುವುದಂತೂ ಸತ್ಯ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಈ ಬಾರಿಯೂ ಏನಾದರು ಮ್ಯಾಜಿಕ್ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳುತ್ತಾರ ಅಥವಾ ಈ ಬಾರಿ ಅವರ ಕೈಮೀರಿ ಹೋಗಲಿದೆಯಾ ಎಂಬುದನ್ನು ಕಾದುನೋಡಬೇಕು.