
ಮುಂಬೈ: ಶಿವಸೇನೆ vs ಶಿವಸೇನೆ (Shiva Sena vs Shiva Sena war) ಹೋರಾಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಬಣಕ್ಕೆ ಚುನಾವಣಾ ಆಯೋಗದಲ್ಲಿ ಗೆಲುವು ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಹೇಳಿದ್ದಾರೆ. ಚುನಾವಣಾ ಆಯೋಗ ಸದ್ಯ ಶಿವಸೇನೆಯ ಚಿಹ್ನೆಯಾದ ಬಾಣ ಮತ್ತು ಬಿಲ್ಲನ್ನು ಬಳಸದಂತೆ ಎರಡೂ ಬಣಗಳಿಗೆ ಆದೇಶಿಸಿದೆ. ಅಂಧೇರಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಉದ್ಧವ್ ಠಾಕ್ರೆ (Uddhav Thackeray) ಮತ್ತು ಏಕನಾಥ ಶಿಂಧೆ (Eknath Shinde) ಇಬ್ಬರೂ ತಾತ್ಕಾಲಿಕ ಚಿಹ್ನೆಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ. ಮೂರು ಚಿಹ್ನೆಗಳನ್ನು ನೀಡಿದ್ದು ಅದರಲ್ಲಿ ಚುನಾವಣಾ ಆಯೋಗ ಒಂದು ಚಿಹ್ನೆಯ ಬಳಕೆಗೆ ಅನುಮತಿ ಕೊಡಲಿದೆ.
ಒಂದೆಡೆ ಉದ್ಧವ್ ಠಾಕ್ರೆ ಭಾಳಾ ಸಾಹೇಬ್ ಠಾಕ್ರೆ ಕಟ್ಟಿದ ಶಿವಸೇನೆಗೆ ನಾನೇ ಉತ್ತರಾಧಿಕಾರಿ ಎಂದು ಹೇಳಿಕೊಂಡಿದ್ದಾರೆ. ಆದರೆ ಪಕ್ಷದ ನಾಲ್ಕನೇ ಮೂರು ಭಾಗಕ್ಕಿಂತಲೂ ಹೆಚ್ಚು ಶಾಸಕರು ಮತ್ತು ಸಂಸದರು ತಮ್ಮ ಜೊತೆಗಿದ್ದು, ನಿಜವಾದ ಶಿವ ಸೈನಿಕರು ಎಂದು ಕರೆದುಕೊಳ್ಳುತ್ತಿದ್ದಾರೆ. ಸದ್ಯ ಚೆಂಡು ಚುನಾವಣಾ ಆಯೋಗದಲ್ಲಿದ್ದು ಪಕ್ಷದ ಹೆಸರು ಮತ್ತು ಅಧಿಕೃತ ಚಿಹ್ನೆ ಯಾರ ಪರವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ವೇಳೆ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯೆ ನೀಡಿದ್ದು, ಏಕನಾಥ ಶಿಂಧೆ ಬಣಕ್ಕೆ ಚುನಾವಣಾ ಆಯೋಗದಲ್ಲಿ ಗೆಲುವು ಸಿಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಶಿಂಧೆ ಜೊತೆ ಹೆಚ್ಚು ಶಾಸಕರ ಮತ್ತು ಸಂಸದರ ಬೆಂಬಲವಿದೆ. ಉದ್ಧವ್ ಠಾಕ್ರೆ ಬಳಿ ಬೆರಳೆಣಿಕೆಯ ಶಾಸಕರಿದ್ದಾರೆ.
ಇದನ್ನೂ ಓದಿ: ತ್ರಿಶೂಲ, ಸೂರ‍್ಯ, ದೀವಟಿಗೆ ಚಿಹ್ನೆ ಕೇಳಿದ Uddhav Thackeray: ಇಂದು ಸುಪ್ರೀಂಕೋರ್ಟ್ ಮೊರೆ..?
"ಏಕನಾಥ ಶಿಂಧೆ ಮತ್ತು ಉದ್ಧವ್ ಠಾಕ್ರೆ ಅವರ ನಡುವಿನ ಚಿಹ್ನೆ ಮತ್ತು ಅಧಿಕೃತ ಹೆಸರಿಗಾಗಿ ನಡೆಯುತ್ತಿರುವ ಕಾನೂನು ಸಮರದಲ್ಲಿ ನನ್ನ ಪ್ರಕಾರ ಚುನಾವಣಾ ಆಯೋಗ ಶಿಂಧೆ ಪರವಾಗಿ ತೀರ್ಪು ನೀಡಲಿದೆ," ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಮಹಾರಾಷ್ಟ್ರ ಸಚಿವ ದೀಪಕ್ ಕೇಸರ್ಕರ್ ಕೂಡ ಮಾತನಾಡಿದ್ದು, "ನಮ್ಮ ಬಳಿ ಬಹುಮತವಿದೆ. ಶಾಸಕರು ಮತ್ತು ಸಂಸದರು ನಮ್ಮ ಬಳಿ ಇದ್ದಾರೆ. ಆದರೂ ಚುನಾವಣಾ ಆಯೋಗ ಚಿಹ್ನೆ ಮತ್ತು ಪಕ್ಷದ ಹೆಸರು ಬಳಸದಂತೆ ಮಧ್ಯಂತರ ಆದೇಶ ನೀಡಿದೆ. ನಮ್ಮ ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ. ನಾವಿನ್ನೂ ಚುನಾವಣಾ ಆಯೋಗಕ್ಕೆ ಪ್ರಮಾಣ ಪತ್ರ ನೀಡಿಲ್ಲ. ಯಾಕೆಂದರೆ ನಮ್ಮ ಬಳಿ ಬಹುಮತವಿದೆ. ನಾಳೆ ನಾನು ಅಫಿಡವಿಟ್ ಸಲ್ಲಿಸುತ್ತೇವೆ," ಎಂದಿದ್ದಾರೆ.
ಮುಂದುವರೆದ ಅವರು ಉದ್ಧವ್ ಠಾಕ್ರೆ ಬಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ಧಾರೆ. "ಚುನಾವಣಾ ಆಯೋಗ ಮಧ್ಯಂತರ ಆದೇಶ ನೀಡಿದ ತಕ್ಷಣ ಬೇರೆ ಚಿಹ್ನೆಯನ್ನು ಅವರು ಸಲ್ಲಿಸಿದ್ದಾರೆ. ಇದನ್ನು ನೋಡಿದರೆ ಬಿಲ್ಲು ಮತ್ತು ಬಾಣದ ಮೇಲೆ ಅವರಿಗೆ ಯಾವುದೇ ಭಾವನೆ ಇಲ್ಲ ಅನಿಸುತ್ತದೆ," ಎಂದಿದ್ದಾರೆ.
ಇದನ್ನೂ ಓದಿ: Shiv Sena ಪಕ್ಷದ ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಮದ್ಯಂತರ ಆದೇಶ
ಉದ್ಧವ್ ಠಾಕ್ರೆ ಬಣ ಬೇಕೆಂದೇ ಚುನಾವಣಾ ಆಯೋಗದ ವಿಚಾರಣೆ ವೇಳೆ ಕಾಲಹರಣ ಮಾಡಿದೆ. ಅವರು ನಿಜಕ್ಕೂ ಪಕ್ಷದ ಚಿಹ್ನೆಯನ್ನು ರಕ್ಷಿಸಿಕೊಳ್ಳಬೇಕೆಂದಿದ್ದರೆ ಅವರು ದಾಖಲೆಗಳನ್ನು ಮೊದಲೇ ಆಯೋಗಕ್ಕೆ ನೀಡುತ್ತಿದ್ದರು. ಸುಮಾರು 4,600 ನಕಲಿ ಅಫಿಡವಿಟ್‌ಗಳನ್ನು ಸಲ್ಲಿಸಿರುವುದು ಪೊಲೀಸರಿಗೆ ಸಿಕ್ಕಿದೆ ಎಂದು ಅವರು ಹೇಳಿದರು. ಮುಂಬೈ ಪೊಲೀಸರು ಭಾನುವಾರ ನೀಡಿದ ಮಾಹಿತಿ ಪ್ರಕಾರ ಸುಮಾರು 4,500ಕ್ಕೂ ಹೆಚ್ಚು ನಕಲಿ ಅಫಿಡವಿಟ್‌ಗಳನ್ನು ತಯಾರಿಸಿ ಉದ್ಧವ್ ಠಾಕ್ರೆ ಬಣಕ್ಕೆ ಸಹಾಯ ಮಾಡುತ್ತಿದ್ದ ಅನಾಮಧೇಯ ವ್ಯಕ್ತಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.