
ತೆಲಂಗಾಣ(ಅ.26): ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಪದಗ್ರಹಣ ಮಾಡಿದ್ದಾರೆ. ಸುನಕ್ ಪ್ರಧಾನಿಯಾಗುತ್ತಿದ್ದಂತೆ ಭಾರತದಲ್ಲಿ ರಾಜಕೀಯ ಜೋರಾಗಿದೆ. ಬಿಜೆಪಿ ಇದನ್ನು ನೋಡಿ ಕಲಿಯಬೇಕು ಎಂದು ಕಾಂಗ್ರೆಸ್ ಕುಟುಕಿದೆ. ಬ್ರಿಟನ್‌ನಲ್ಲಿ ಅಲ್ಪಸಂಖ್ಯಾತ ಪ್ರಧಾನಿಯಾಗಿದ್ದಾರೆ. ಭಾರತದಲ್ಲಿ ಅಲ್ಪಸಂಖ್ಯಾತ ಪ್ರಧಾನಿಯಾಗುವುದನ್ನು ಬಿಜೆಪಿ ಒಪ್ಪಿಕೊಳ್ಳುತ್ತಾ ಎಂದು ಪ್ರಶ್ನಿಸಿದೆ. ಈ ರಾಜಕೀಯ ಗುದ್ದಾಟ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಆಘಾತ ಎದುರಾಗಿದೆ. ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಕಾರಣ ನೀಡಿ ತೆಲಂಗಾಣ ಹಿರಿಯ ನಾಯಕ, ಮಾಜಿ ರಾಜ್ಯಸಭಾ ಸಂಸದ ಆನಂದ್ ಬಾಸ್ಕರ್ ರಾಪೋಲು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತೆಲಂಗಾಣದಲ್ಲಿ ಅಧಿಕಾರಿ ಹಿಡಿಯಲು ಯತ್ನಿಸುತ್ತಿರುವ ಬೆನ್ನಲ್ಲೇ ಹಿರಿಯ ನಾಯಕನ ರಾಜೀನಾಮೆ ತೀವ್ರ ಹಿನ್ನಡೆ ತಂದಿದೆ.
2019ರಲ್ಲಿ ಆನಂದ್ ಬಾಸ್ಕರ್ ರಾಪೋಲು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕಳೆದ ನಾಲ್ಕು ವರ್ಷ ಬಿಜೆಪಿಯಲ್ಲಿದ್ದ ಆನಂದ್ ಬಾಸ್ಕರ್ ರಾಪೋಲು ಇದೀಗ ಬರೋಬ್ಬರಿ 2 ಪುಟದ ರಾಜೀನಾಮೆ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಕಳುಹಿಸಿದ್ದಾರೆ. ಬಿಜೆಪಿಯಲ್ಲಿ ನನ್ನ ಹಾಗೂ ನನ್ನ ಸಮುದಾಯವನ್ನು ಕಡೆಗಣಿಸಿದೆ. ವಸುದೈವ ಕುಟುಂಬಕಂ ಅನ್ನೋದನ್ನು ಬಲವಾಗಿ ನಂಬುವ ಬಿಜೆಪಿ ಎಲ್ಲರನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತಿಲ್ಲ ಅನ್ನೋದಕ್ಕೆ ನಾನೇ ಸಾಕ್ಷಿ. ಬ್ರಿಟನ್‌ನಲ್ಲಿ ಕೇವಲ 3 ಶೇಕಡಾ ಇರುವ ಹಿಂದೂ ಸಮುದಾಯದ ವ್ಯಕ್ತಿ ಇದೀಗ ಪ್ರಧಾನಿಯಾಗಿದ್ದಾರೆ. ಆದರೆ ಬಿಜೆಪಿಯಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆ. ರಾಷ್ಟ್ರ ನಾಯಕನ ಅವಕಾಶಗಳನ್ನು ತಪ್ಪಿಸಿದೆ ಎಂದು ಆನಂದ್ ಬಾಸ್ಕರ್ ರಾಪೋಲು ಹೇಳಿದ್ದಾರೆ.
Karnataka Politics: ಯತ್ನಾಳ್ ನಾಯಕನಲ್ಲ ಹೇಳಿಕೆಯ ಹಿಂದಿನ ಕಾರಣಗಳು?!
ತಮ್ಮ 2 ಪುಟದ ರಾಜೀನಾಮೆ ಪತ್ರದಲ್ಲಿ ಆರ್ಥಿಕ, ಸಾಮಾಜಿಕ, ಭೌಗೋಳಿಕ, ಕೃಷಿ, ಬಡತನ, ಭಾಷೆ, ಕೋವಿಡ್ ಸೇರಿದಂತೆ ಮಿನಿ ಬಜೆಟ್ ರೀತಿಯಲ್ಲೇ ಉಲ್ಲೇಖಗಳನ್ನು ಮಾಡಿದ್ದಾರೆ. ಕೋವಿಡ್ ಹಾಗೂ ನಂತರ ಪರಿಣಾಮಗಳನ್ನು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೋವಿಡ್‌ನಿಂದ ಜನರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಹಲವು ಕೆಲಸ ಕಳೆದುಕೊಂಡಿದ್ದಾರೆ. ಆದಾಯ ನಿಂತು ಹೋಗಿದೆ. ಇತ್ತ ಕೇಂದ್ರ ಸರ್ಕಾರ ಆಕ್ಸಿಜನ್ ಸಮಸ್ಯೆಯಿಂದ ಯಾರು ನಿಧನರಾಗಿಲ್ಲ ಎಂದಿದೆ. ಇಷ್ಟೇ ಅಲ್ಲ ಕೋವಿಡ್ ಸಮರ್ಥ ರೀತಿಯಲ್ಲಿ ಎದುರಿಸಿದ್ದೇವೆ ಎಂದು ಬಿಜೆಪಿ ಸಂಭ್ರಮ ಆಚರಿಸುತ್ತಿದೆ.
ಸ್ಥಳೀಯ ಬಾಷೆಗಳ ಕಡೆಗಣನೆ, ಪ್ರಾದೇಶಿಕ ಪಕ್ಷಗಳನ್ನು ಇಲ್ಲವಾಗಿಸುವ ಹುನ್ನಾರ ಸೇರಿದಂತೆ ಎರಡು ಪುಟದಲ್ಲಿ ದೇಶದ ಒಟ್ಟು ಸಮಸ್ಯೆಗಳನ್ನು ವಿವರಿಸಿದ್ದಾರೆ. ಕೊನೆಯ ಪ್ಯಾರಾದಲ್ಲಿ ತಮ್ಮ ರಾಜೀನಾಮೆ ಕಾರಣಗಳನ್ನು ಹೇಳಿದ್ದಾರೆ. ಎರಡು ಪುಟದ ರಾಜೀನಾಮೆ ಪತ್ರದಲ್ಲಿ ಬ್ರಿಟನ್‌ನಿಂದ ಇಡೀ ಭಾರತ ಸುತ್ತಾಡಿದ ಆನಂದ್ ಬಾಸ್ಕರ್ ರಾಪೋಲು, ಕೊನೆಯ ನಾಲ್ಕು ಸಾಲಿನಲ್ಲಿ ರಾಜೀನಾಮೆ ಕಾರಣಗಳನ್ನು ಹೇಳಿದ್ದಾರೆ.
ಚಲವಾದಿ ಸಮುದಾಯಕ್ಕೆ ಬಿಜೆಪಿ ಟಿಕೆಟ್ ಕಡೆಗಣನೆ: ಕಮಲ ನಾಯಕರ ವಿರುದ್ಧ ಆಕ್ರೋಶ
ಕಳೆದ ನಾಲ್ಕು ವರ್ಷದಲ್ಲಿ ನನ್ನ ಪಕ್ಷದಲ್ಲಿ ಕಡೆಗಣಿಸಲಾಗಿದೆ. ಪಕ್ಷದ ರಾಷ್ಟ್ರೀಯ ಜವಾಬ್ದಾರಿಗಳಿಂದ ನನ್ನನ್ನು ಹೊರಗಿಡಲಾಗಿದೆ. ನಾನು ಮಾಡಿದ ಕೆಲಸಗಳಿಗೆ ಬೆಲೆ ಕೊಡುತ್ತಿಲ್ಲ. ನನಗೆ ಬೆಂಬಲ ಸಿಗುತ್ತಿಲ್ಲ. ಇವೆಲ್ಲವನ್ನೂ ಸಹಿಸಿಕೊಂಡು ಕಳೆದ ನಾಲ್ಕು ವರ್ಷ ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಇದೀಗ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಆನಂದ್ ಬಾಸ್ಕರ್ ರಾಪೋಲು ಪತ್ರದಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.