ನ.1ರಿಂದ ಕರ್ನಾಟಕದಲ್ಲಿ 'ಜೆಡಿಎಸ್‌ ಪಂಚರತ್ನ' ರಥಯಾತ್ರೆ

Published : Oct 26, 2022, 02:54 PM IST
ನ.1ರಿಂದ ಕರ್ನಾಟಕದಲ್ಲಿ 'ಜೆಡಿಎಸ್‌ ಪಂಚರತ್ನ' ರಥಯಾತ್ರೆ

ಸಾರಾಂಶ

ನ.1ರಿಂದ 35 ಕ್ಷೇತ್ರದಲ್ಲಿ ಜೆಡಿಎಸ್‌ ಯಾತ್ರೆ, ಮೊದಲ ಹಂತದಲ್ಲಿ 6 ಜಿಲ್ಲೆಗಳಲ್ಲಿ ಸಂಚಾರ, ಕೋಲಾರದಿಂದ ಆರಂಭ, ರಾಮನಗರದಲ್ಲಿ ಅಂತ್ಯ 

ಬೆಂಗಳೂರು(ಅ.26): ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವನ್ನು ಸಂಘಟಿಸುವ ಗುರಿ ಹೊಂದಿರುವ ಜೆಡಿಎಸ್‌ನ ‘ಪಂಚರತ್ನ ರಥಯಾತ್ರೆ’ ಮೊದಲ ಹಂತದಲ್ಲಿ 35 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಬರುವ ನ.1ರಂದು ಕೋಲಾರ ಜಿಲ್ಲೆಯಿಂದ ಆರಂಭವಾಗುವ ಯಾತ್ರೆಯು ರಾಮನಗರ ಜಿಲ್ಲೆಯಲ್ಲಿ ಮುಕ್ತಾಯವಾಗಲಿದೆ. 35 ದಿನಗಳ ಕಾಲ ಆರು ಜಿಲ್ಲೆಗಳ 35 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಯಲಿದ್ದು, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವ ವಹಿಸಲಿದ್ದಾರೆ.

ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗಿದ್ದು, ರಥಯಾತ್ರೆಯು ಸಹಕಾರಿಯಾಗಲಿದೆ ಎನ್ನಲಾಗಿದೆ. ನ.1ರಿಂದ 5ರವರೆಗೆ ಕೋಲಾರ ಜಿಲ್ಲೆ, ನ.6ರಿಂದ 10ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆ, ನ.11ರಿಂದ 13ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನ.14ರಿಂದ 23ರವರೆಗೆ ತುಮಕೂರು ಜಿಲ್ಲೆ, ನ.24ರಿಂದ 30 ರವರೆಗೆ ಹಾಸನ ಜಿಲ್ಲೆ, ಡಿ.1ರಂದು ಮತ್ತೆ ತುಮಕೂರು ಜಿಲ್ಲೆ ಮತ್ತು ಡಿ.2ರಿಂದ 5ರವರೆಗೆ ರಾಮನಗರ ಜಿಲ್ಲೆಯಲ್ಲಿ ರಥಯಾತ್ರೆ ಸಂಚರಿಸಲಿದೆ.

ಜೆಡಿಎಸ್‌ 30-40 ಸ್ಥಾನ ಗೆದ್ರೆ ನಾನು ಸಿಎಂ ಆಗಲ್ಲ: ಹೆಚ್‌.ಡಿ.ಕುಮಾರಸ್ವಾಮಿ

ನ.1ರಿಂದ 5ರವರೆಗೆ ಕೋಲಾರ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಯಾತ್ರೆ ಕೈಗೊಳ್ಳಲಾಗುತ್ತದೆ. ಮುಳಬಾಗಿಲು, ಬಂಗಾರಪೇಟೆ, ಮಾಲೂರು, ಕೋಲಾರ, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆಯು ಸಂಚರಿಸಲಿದೆ. ನ.6ರಿಂದ 10ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಸಮಾವೇಶ ನಡೆಯಲಿದೆ. ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ನ.11ರಿಂದ 13ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಯಾತ್ರೆ ಸಂಚರಿಸಲಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಕ್ಷೇತ್ರದಲ್ಲಿ ಸಮಾವೇಶ ನಡೆಯಲಿದೆ.

ನ.14ರಿಂದ 23ರವರೆಗೆ ತುಮಕೂರು ಜಿಲ್ಲೆಯ 10 ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯಲಿದೆ. ತುಮಕೂರು ಗ್ರಾಮಾಂತರ, ತುಮಕೂರು ನಗರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ನ.24ರಿಂದ 30ರವರೆಗೆ ಹಾಸನ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಯಾತ್ರೆಯು ತೆರಳಲಿದೆ. ಬೇಲೂರು, ಅರಸೀಕೆರೆ, ಹಾಸನ, ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ ಕ್ಷೇತ್ರದಲ್ಲಿ ನಡೆಯಲಿದೆ. ಡಿ.1ರಂದು ತುಮಕೂರು ಜಿಲ್ಲೆಯ ಕುಣಿಗಲ್‌ ಕ್ಷೇತ್ರದಲ್ಲಿ ಯಾತ್ರೆ ಜರುಗಲಿದೆ. ಡಿ.2ರಿಂದ 5ರವರೆಗೆ ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಯಾತ್ರೆಯು ಸಂಚರಿಸಲಿದೆ. ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ.

ಯಾತ್ರೆ ವೇಳೆಯೇ ಅಭ್ಯರ್ಥಿ ಅಂತಿಮಗೊಳಿಸುವ ಸಾಧ್ಯತೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಈ ಯಾತ್ರೆಯಿಂದ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗಿದ್ದು, ಇದೇ ವೇಳೆಯಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿಯನ್ನೂ ಅಂತಿಮಗೊಳಿಸುವ ಸಾಧ್ಯತೆ ಇದೆ. ಈ ಬಾರಿ ಅಭ್ಯರ್ಥಿಗಳ ಆಯ್ಕೆಯನ್ನು ನೆಪಮಾತ್ರಕ್ಕೆ ಮಾಡುವುದು ಬೇಡ ಎಂಬ ಲೆಕ್ಕಾಚಾರವನ್ನು ಜೆಡಿಎಸ್‌ ಮುಖಂಡರು ಕೈಗೊಂಡಿದ್ದಾರೆ. ಮತ್ತೊಮ್ಮೆ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ