
ಹಾಸನ (ಜು.07): ಸೆಪ್ಟೆಂಬರ್‌ನಲ್ಲಿ ರಾಜ್ಯದ ರಾಜಕೀಯದಲ್ಲಿ ಕ್ರಾಂತಿ ಆಗುತ್ತೆ ಎಂದು ಹೇಳಿದ್ದೀನಿ. ಈಗಿನ್ನೂ ಜುಲೈನಲ್ಲಿ ಇದ್ದೇವೆ. ಸೆಪ್ಟೆಂಬರ್ ಇನ್ನೂ ದೂರ ಇದೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸೆಪ್ಟೆಂಬರ್ ಕ್ರಾಂತಿ ಕುರಿತ ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿ, ಸೆಪ್ಟೆಂಬರ್ ಇನ್ನೂ ದೂರ ಇದೆ. ಅದೆಲ್ಲವನ್ನು ಈಗಲೇ ಹೇಳಿ ಬಿಟ್ಟರೆ ನಿಮಗೆ ಆಸಕ್ತಿ ಹೋಗಿ ಬಿಡುತ್ತದೆ. ಇನ್ನೂ ಎರಡು ತಿಂಗಳು ಇದೆ. ದೇಶವನ್ನೇ ತಲೆಕೆಳಗೆ ಮಾಡಬಹುದು ಎಂದರು.
ಸುರ್ಜೇವಾಲಾ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಅವರು ಮೊದಲನೇ ಸಲ ಇಲ್ಲಿಗೆ ಬಂದು ಏನು ಮಾಡಿದ್ರೋ, ಎರಡನೇ ಬಾರಿಯೂ ಅದನ್ನೆ ಮಾಡೋದು. ಅವರು ನಮ್ಮ ಉಸ್ತುವಾರಿ ಕಾರ್ಯದರ್ಶಿಗಳಿದ್ದಾರೆ. ಎಐಸಿಸಿಯಿಂದ ಕರ್ನಾಟಕಕ್ಕೆ ನೇಮಕವಾಗಿದ್ದಾರೆ. ನಮ್ಮಲ್ಲಿ ಏನೆಲ್ಲಾ ಘಟನಾವಳಿಗಳು ನಡೆಯುತ್ತದೆಯೋ ಅದನ್ನು ಹತ್ತಿರದಿಂದ ಗಮನಿಸಿ, ಕೇಂದ್ರಕ್ಕೆ ವರದಿಯನ್ನು ಕೊಡುತ್ತಾರೆ. ಆ ಜವಾಬ್ದಾರಿ ಕೆಲಸವನ್ನು ಅವರು ನಿರ್ವಹಿಸುತ್ತಿದ್ದಾರೆ. ಅದರಲ್ಲಿ ವಿಶೇಷತೆ ಹುಡುಕಬಾರದು ಎಂದರು.
ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ, ನಾನೇ ಐದು ವರ್ಷ ಸಿಎಂ ಎಂದು ಸಿದ್ದರಾಮಯ್ಯನವರೇ ಹೇಳೀದ್ದಾರಲ್ಲಾ. ಇನ್ನೇಕೆ ಆ ಬಗ್ಗೆ ಚರ್ಚೆ ಎಂದರು. ಸಿದ್ದರಾಮಯ್ಯನವರು ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರೆ ಅಂಥ ನನಗನ್ನಿಸುವುದಿಲ್ಲ. ಅವರಿಗೆ ಅಂಥ ಮನಸ್ಥಿತಿ ಇಲ್ಲ. ಅವರು ರಾಜ್ಯ ರಾಜಕಾರಣದಲ್ಲಿಯೇ ಇರುವಂಥವರು. ಮುಂದೆ ಸಾರ್ವಜನಿಕ ಜೀವನದಲ್ಲಿ ಇರುತ್ತೇನೆ. ಆದರೆ, ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾರೆ ಅಷ್ಟೇ. ಅವರ ಶಕ್ತಿ ಇರುವವರೆಗೂ ರಾಜ್ಯ ರಾಜಕಾರಣದಲ್ಲಿಯೇ ಮುಂದುವರಿಯಲಿದ್ದಾರೆ ಎಂದು ರಾಜಣ್ಣ ಹೇಳಿದರು.
ಬಿಜೆಪಿಯಲ್ಲೂ ಕ್ರಾಂತಿಯಾಗಬಹುದು: ಕ್ರಾಂತಿ ಎಂದ ಕೂಡಲೇ ಬರೀ ಕಾಂಗ್ರೆಸ್ ನಲ್ಲಿ ಮಾತ್ರ ಕ್ರಾಂತಿ ಆಗುತ್ತದೆ ಅಂದುಕೊಳ್ಳಬಾರದು ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ಕ್ರಾಂತಿ ಎಂದರೇ ಹಲವಾರು ರೀತಿಯ ಕ್ರಾಂತಿಗಳಿವೆ. ಜಗಜೀವನ್ ರಾಮ್ ಹಸಿರು ಕ್ರಾಂತಿ ಮಾಡಿಲ್ವಾ ಎಂದ ಅವರು, ರಷ್ಯಾದ ಕ್ರಾಂತಿಯೂ ಸಹ ಅಕ್ಟೋಬರ್ ನಲ್ಲಾಗಿರುವುದು ಎಂದರು. ಬಿಜೆಪಿಯಲ್ಲೂ ಕ್ರಾಂತಿ ಆಗುತ್ತಿದೆ ಎಂದ ಅವರು, ಕೇಂದ್ರ ಸರ್ಕಾರದಲ್ಲೂ ಸಹ ಬದಲಾವಣೆ ನಿರೀಕ್ಷೆ ಮಾಡಬಹುದು. ಆರ್ ಎಸ್ಎಸ್ ನವರ ಸೆಟ್ ಆಫ್ ಪ್ರಿನ್ಸಿಪಲ್ ನಂತೆ 75 ವರ್ಷದ ನಂತರ ಯಾವುದೇ ಹುದ್ದೆಯಲ್ಲಿ ಇರಲಿಕ್ಕಿಲ್ಲ ಎಂದ ರಾಜಣ್ಣ, ಹಾಗಾಗಿಯೇ ಅಡ್ವಾಣಿಗೆ ಪ್ರಧಾನಿ ಸ್ಥಾನ ಸಿಕ್ಕಿಲ್ಲ. ಈಗ ಅದೇ ಪ್ರಿನ್ಸಿಪಲ್ ಮೋದಿಯರಿಗೂ ಆಗುತ್ತದೆ ಎಂದು ತಿಳಿಸಿದರು.
ಆ ಒಂದು ಬದಲಾವಣೆ ಕ್ರಾಂತಿ ಅಲ್ವಾ, ಅದನ್ನು ಯಾಕೆ ನೀವು ಊಹೆ ಮಾಡುವುದಿಲ್ಲ. ಬರೀ ಕರ್ನಾಟಕದ ಕಾಂಗ್ರೇಸ್ ಪಾರ್ಟಿಯನ್ನು ಯಾಕೆ ಊಹೆ ಮಾಡುತ್ತೀರಾ ಎಂದರು. ಸಿಎಂ ಬದಲಾಯಿಸುತ್ತಾರೆ, ಸಂಪುಟ ವಿಸ್ತರಣೆ. ಅಧ್ಯಕ್ಷ ಬದಲಾವಣೆ. ಬರೀ ಇದರ ಬಗ್ಗೆ ಯಾಕೆ ಚರ್ಚೆ ಮಾಡುತ್ತೀರಾ ಎಂದ ರಾಜಣ್ಣ, ರಾಜಕೀಯ ನಿಂತ ನೀರಲ್ಲ, ಅದು ಬದಲಾಗುತ್ತಿರುತ್ತದೆ. ರಾಜಕೀಯ ಸಂದರ್ಭಕ್ಕೆ ಅನುಗುಣವಾಗಿ ಬದಲಾಗುತ್ತದೆ. ನಮ್ಮ ಕಾಂಗ್ರೆಸ್ ನಲ್ಲಿ ಒಟ್ಟು ಮೂರು ಪವರ್ ಸೆಂಟರ್ ಗಳಿವೆ, ಹೈಕಮಾಂಡ್, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಪವರ್ ಸೆಂಟರ್ ಎಂದರು. ಕೆಲ ಮಾಧ್ಯಮದವರು ರಾಜಣ್ಣನವರು, ಸಿದ್ದರಾಮಯ್ಯನವರಿಂದ ದೂರಾಗಿದ್ದಾರೆಂದು ಸುದ್ದಿ ಮಾಡಿದ್ದಾರೆ. ಸಿದ್ಧರಾಮಯ್ಯ ಇರುವುದರಿಂದಲೇ ನಾನು ರಾಜಕಾರಣ ಮಾಡುತ್ತಿರುವುದು. ಅವರಿಲ್ಲದಿದ್ದರೇ ರಾಜಕೀಯ ಬಿಡುತ್ತೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.