
ಬೆಂಗಳೂರು (ಮೇ.31): ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಸ್ಯೆ ಬಗೆಹರಿಸಿ ಅವುಗಳ ಅಭಿವೃದ್ಧಿಗೆ ಅಗತ್ಯ ನೆರವು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಎಂಎಸ್‌ಎಂಇ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ನೀಡುವುದಾಗಿ ಮುಖ್ಯಮಂತ್ರಿಗಳು ಈಗಾಗಲೇ ಭರವಸೆಯನ್ನೂ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕಾಸಿಯಾ, ಎಫ್‌ಕೆಸಿಸಿಐ ಮತ್ತು ಪೀಣ್ಯ ಕೈಗಾರಿಕೆಗಳ ಒಕ್ಕೂಟ ಸಂಯುಕ್ತವಾಗಿ ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಇಂಡಿಯಾ ಎಂಎಸ್ಎಂಇ ಸಮಾವೇಶ-2025’ ಉದ್ಘಾಟಿಸಿ ಮಾತನಾಡಿ, ಎಂಎಸ್ಎಂಇಗಳು ಸರ್ಕಾರ ಮಾಡಲಾಗದ ಕೆಲಸ ಮಾಡುತ್ತಿವೆ. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ಜನರ ಕುಟುಂಬಗಳಿಗೆ ಆಧಾರವಾಗಿವೆ. ಹಾಗಾಗಿ ಈ ಕೈಗಾರಿಕೆಗಳು ದೇಶದ, ರಾಜ್ಯದ ಅಭಿವೃದ್ಧಿಯಲ್ಲಿ ಮಹತ್ವ ಪಾತ್ರ ವಹಿಸುತ್ತವೆ. ಅವುಗಳ ಸಮಸ್ಯೆಗಳನ್ನು ಬಗೆಹರಿಸಿ ಅಗತ್ಯ ನೆರವು ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿ. ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಅಗತ್ಯ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಬಲಿಷ್ಠವಾದಷ್ಟು ಸರ್ಕಾರಗಳು ಬಲಿಷ್ಠವಾಗುತ್ತವೆ. ನೀವುಗಳು ದುರ್ಬಲವಾದರೆ, ಸರ್ಕಾರವೂ ದುರ್ಬಲವಾಗುತ್ತದೆ. ಇಂದಿನ ದಿನಮಾನದಲ್ಲಿ ನೀವೆಲ್ಲರೂ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಾಗಿದೆ. ನನ್ನ ಸಹೋದರ ಕನಕಪುರದಲ್ಲಿ ರೇಷ್ಮೆಗೆ ಸಂಬಂಧಿಸಿ ಒಂದು ಸಣ್ಣ ಕೈಗಾರಿಕೆ ಆರಂಭಿಸಿದ್ದು, ತಂತ್ರಜ್ಞಾನ ಪೂರೈಕೆಗೆ ಚೀನಾ ಕಂಪನಿ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆದರೆ ವೀಸಾ ಸಮಸ್ಯೆಯಿಂದ ಅವರು ಬಂದು ತರಬೇತಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಅದು ಅರ್ಧಕ್ಕೆ ನಿಂತಿದೆ. ಆದರೂ ನನ್ನ ಸಹೋದರ ಏನಾದರೂ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದಾನೆ.
ಹಾಗಾಗಿ ನಾವು ಬೇರೆಯವರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು. ಎಂಎಸ್‌ಎಂಇಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಕಾರ ಅಗತ್ಯವಿದೆ. ಮೇಕ್ ಇನ್ ಇಂಡಿಯಾ ಚಿಂತನೆಗೆ ಹೆಚ್ಚು ಒತ್ತು ನೀಡಿದಾಗ ನಮ್ಮ ಪ್ರತಿಭೆಗಳು ನಮ್ಮಲ್ಲಿಯೇ ಉಳಿದುಕೊಳ್ಳುತ್ತವೆ. ನಮ್ಮ ರಾಜ್ಯದಲ್ಲಿ 250 ಇಂಜಿನಿಯರಿಂಗ್ ಕಾಲೇಜುಗಳಿವೆ. ಇಲ್ಲಿಂದ ವಿದ್ಯಾಭ್ಯಾಸ ಮಾಡಿದ ಪ್ರತಿಭಾನ್ವಿತರು ಬೇರೆ ದೇಶಕ್ಕೆ ಹೋಗುತ್ತಿದ್ದಾರೆ. ಅವರನ್ನು ಇಲ್ಲಿಯೇ ಬಳಸಿಕೊಳ್ಳಬೇಕು. ನಾವೆಲ್ಲರೂ ಒಟ್ಟಾಗಿ ಸೇರಿ ಮುನ್ನಡೆಯಬೇಕಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.