
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಶಾಸಕರಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಈ ಆಂತರಿಕ ಭಿನ್ನಮತವೇ ಜಿಲ್ಲೆಗೆ ಸಚಿವ ಸ್ಥಾನ ತಪ್ಪಲು ಮುಖ್ಯ ಕಾರಣ ಎಂದು ಕಾರವಾರ ಶಾಸಕ ಸತೀಶ್ ಸೈಲ್ ನೇರವಾಗಿ ಆರೋಪಿಸಿದ್ದಾರೆ. ಆ ಮೂಲಕ ಜಿಲ್ಲಾ ಕಾಂಗ್ರೆಸ್‌ನಲ್ಲಿನ ಅಸಮಾಧಾನ ಸ್ಫೋಟಗೊಂಡಿದೆ.
ಕಾರವಾರದಲ್ಲಿ ಮಾತನಾಡಿದ ಸತೀಶ್ ಸೈಲ್, ಜಿಲ್ಲೆಯ ಹಿರಿಯ ಶಾಸಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಶಾಸಕರಲ್ಲಿ ಒಗ್ಗಟ್ಟಿಲ್ಲದ ಕಾರಣ ನಮಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಸಚಿವ ಸ್ಥಾನ ಅನುಭವಿಸಿದ ಹಿರಿಯರು, ಕಿರಿಯ ಶಾಸಕರಿಗೆ ಮಂತ್ರಿ ಸ್ಥಾನ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ ಹಾಗೂ ಮಂಕಾಳು ವೈದ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಕಳೆದ ಬಾರಿಯೇ ಮುಖ್ಯಮಂತ್ರಿಗಳು ನನಗೆ ಆಶ್ವಾಸನೆ ನೀಡಿದ್ದರು. ಮೊದಲು ಮೀನುಗಾರ ಸಮುದಾಯದ ಮಂಕಾಳು ವೈದ್ಯ ಅವರಿಗೆ ಸ್ಥಾನ ನೀಡಿ, ಬಳಿಕ ನನ್ನನ್ನು ಮಂತ್ರಿ ಮಾಡುತ್ತೇನೆ ಎಂದಿದ್ದರು. ಆದರೆ ಈಗ ಜಿಲ್ಲೆಯ ಯಾರಿಗೂ ಸ್ಥಾನ ಸಿಕ್ಕಿಲ್ಲ. ನನಗೆ ಮಂತ್ರಿ ಸ್ಥಾನ ತಪ್ಪಿಸಿದ ಜಿಲ್ಲೆಯ ಶಾಸಕರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು.
ಕಾಂಗ್ರೆಸ್ ಪಕ್ಷವು ಆರ್.ವಿ. ದೇಶಪಾಂಡೆ ಅವರಿಗೆ ಕಳೆದ 40 ವರ್ಷಗಳಿಂದ ಅಧಿಕಾರ ನೀಡಿದೆ. ಮಂಕಾಳು ವೈದ್ಯ ಅವರು ಕೂಡ ಸಚಿವರಾಗಿ ಕೆಲಸ ಮಾಡಿದ್ದಾರೆ. ಆದರೆ ಈ ಬಾರಿ ಜಿಲ್ಲೆಗೆ ಸಂಪೂರ್ಣ ಅನ್ಯಾಯವಾಗಿದೆ. ಒಗ್ಗಟ್ಟಿನ ಕೊರತೆಯಿಂದಾಗಿ ಜಿಲ್ಲೆಯ ಹಿತಾಸಕ್ತಿ ಬಲಿಯಾಗಿದೆ ಎಂಬುದು ಸೈಲ್ ಅವರ ಮಾತಿನ ಸಾರಾಂಶವಾಗಿತ್ತು.
ಇತ್ತ ಕಾರವಾರ ಶಾಸಕರು ಹಿರಿಯರ ವಿರುದ್ಧ ಕಿಡಿಕಾರುತ್ತಿದ್ದರೆ, ಅತ್ತ ಭಟ್ಕಳದಲ್ಲಿ ಮಂಕಾಳು ವೈದ್ಯ ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಮೀನುಗಾರ ಸಮುದಾಯ ಭಾರಿ ಆಕ್ರೋಶ ವ್ಯಕ್ತಪಡಿಸಿದೆ. ಹೈಕಮಾಂಡ್ ಪಟ್ಟಿಯಲ್ಲಿ ಮಂಕಾಳು ವೈದ್ಯ ಅವರ ಹೆಸರು ಇದ್ದರೂ, ಕೊನೆ ಕ್ಷಣದಲ್ಲಿ ಕೈಬಿಟ್ಟಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಭಟ್ಕಳದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಮೊಗೇರ ಸಮಾಜ, ಮೀನುಗಾರಿಕೆ ಸಹಕಾರಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮೀನುಗಾರ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಮತ್ತು ಕೂಡಲೇ ಮಂಕಾಳು ವೈದ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲೆಯ ಇಬ್ಬರು ಪ್ರಬಲ ಶಾಸಕರ ನಡುವಿನ ಈ ಶೀತಲ ಸಮರ ಮತ್ತು ಮೀನುಗಾರರ ಪ್ರತಿಭಟನೆ ಈಗ ಉತ್ತರ ಕನ್ನಡ ಕಾಂಗ್ರೆಸ್‌ನಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.