ಸಂಪುಟ ವಿಸ್ತರಣೆ ಸೀಕ್ರೆಟ್ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ: ಅಪ್ಪ ಸಿದ್ದು ಹಾಕಿದ್ದ ಮಾಸ್ಟರ್ ಪ್ಲಾನ್ ರಿವೀಲ್

Published : Aug 06, 2026, 01:30 PM IST
siddaramaiah and yatidnra siddaramaiah

ಸಾರಾಂಶ

ಆಗಸ್ಟ್ 3 ರಂದು ನಡೆದ ಸಚಿವ ಸಂಪುಟ ವಿಸ್ತರಣೆಯ ಹಿಂದಿನ ಅಸಲಿ ಕಥೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಿದ್ಧಪಡಿಸಿದ್ದ 'ಮಾಸ್ಟರ್ ಪ್ಲಾನ್' ಬಗ್ಗೆ ಅವರ ಪುತ್ರ ಹಾಗೂ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರಿನಲ್ಲಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಶಿಫಾರಸ್ಸು ಪಟ್ಟಿಯಲ್ಲಿದ್ದವರು ಯಾರು? ಹೈಕಮಾಂಡ್ ಅದಕ್ಕೆ ಹೇಗೆ ಪ್ರತಿಕ್ರಿಯಿಸಿತು ಎಂಬ ಇಡೀ 'ಸೀಕ್ರೆಟ್' ಈಗ ಬಹಿರಂಗವಾಗಿದೆ.

ಮೈಸೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಮುಗಿದಿದೆ. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಈ ಪ್ರಕ್ರಿಯೆಯ ಹಿಂದೆ ಸಿದ್ದರಾಮಯ್ಯ ಅವರ ಪಾತ್ರವೇನು ಎಂಬ ಚರ್ಚೆಗೆ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ಇಟ್ಟಿದ್ದ ಪಟ್ಟಿ ಮತ್ತು ಅದರಲ್ಲಾದ ಬದಲಾವಣೆಗಳ ಬಗ್ಗೆ ಯತೀಂದ್ರ ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

14 ಜನರ ಶಿಫಾರಸ್ಸು ಪಟ್ಟಿ ಸಿದ್ಧಪಡಿಸಿದ್ದ ಸಿದ್ದರಾಮಯ್ಯ

ಯತೀಂದ್ರ ಅವರ ಪ್ರಕಾರ ಸಿದ್ದರಾಮಯ್ಯ ಅವರು ಒಟ್ಟು 14 ಜನರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಬಳಿ ಶಿಫಾರಸ್ಸು ಮಾಡಿದ್ದರು. ನಮ್ಮ ತಂದೆ ಕೊಟ್ಟಿದ್ದ ಪಟ್ಟಿಯಲ್ಲಿನ ಬಹುತೇಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಅವರು ಪಕ್ಷದ ಹಿತದೃಷ್ಟಿಯಿಂದಲೇ ಈ ಪಟ್ಟಿಯನ್ನು ಸಿದ್ಧಪಡಿಸಿದ್ದರು ಎಂದು ಯತೀಂದ್ರ ತಿಳಿಸಿದ್ದಾರೆ. ಇದು ಸಂಪುಟದ ಮೇಲೆ ಸಿದ್ದರಾಮಯ್ಯ ಅವರು ಹೊಂದಿದ್ದ ಹಿಡಿತವನ್ನು ತೋರಿಸುತ್ತದೆ.

ಈ ಸಂಪುಟ ವಿಸ್ತರಣೆಯಲ್ಲಿ ಎಚ್.ಸಿ.ಮಹದೇವಪ್ಪ ಅವರಿಗೆ ಸ್ಥಾನ ಸಿಗದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಯತೀಂದ್ರ, ಸಿದ್ದರಾಮಯ್ಯ ಅವರು ಸಿದ್ಧಪಡಿಸಿದ್ದ ಎರಡು ಹಂತದ ಪಟ್ಟಿಯಲ್ಲೂ ಮಹದೇವಪ್ಪ ಅವರ ಹೆಸರಿತ್ತು. ಅವರಿಗೆ ಸಚಿವ ಸ್ಥಾನ ಕೊಡಿ ಎಂದು ನಮ್ಮ ತಂದೆ ಹೈಕಮಾಂಡ್ ಬಳಿ ಒತ್ತಾಯ ಮಾಡಿದ್ದರು. ಆದರೆ ಹೈಕಮಾಂಡ್ ಮಾತ್ರ ಯಾವುದೋ ಕಾರಣಕ್ಕೆ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಲು ಒಪ್ಪಲಿಲ್ಲ ಎಂದು ಹೈಕಮಾಂಡ್ ನಡೆಯನ್ನು ವಿವರಿಸಿದ್ದಾರೆ.

ಜಮೀರ್ ಬಗ್ಗೆ ಸಿದ್ದರಾಮಯ್ಯ ಕೇಳಿರಲಿಲ್ಲ

ಇನ್ನೊಂದು ಅಚ್ಚರಿಯ ವಿಷಯವೆಂದರೆ ಸಿದ್ದರಾಮಯ್ಯ ಅವರು ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಬಳಿ ಕೇಳಿರಲೇ ಇಲ್ಲವಂತೆ. ಹಾಗೆಯೇ ಗಾಯತ್ರಿ ಅವರಿಗೆ ಸಚಿವ ಸ್ಥಾನ ತಪ್ಪಿದ ವಿಚಾರದಲ್ಲಾಗಲಿ ಅಥವಾ ತನ್ವೀರ್ ಸೇಠ್ ಅವರಿಗೆ ಸ್ಥಾನ ಸಿಗದ ವಿಚಾರದಲ್ಲಾಗಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಎಂದು ಯತೀಂದ್ರ ಸ್ಪಷ್ಟಪಡಿಸಿದ್ದಾರೆ. ಕೆಲವೊಂದು ಬಾರಿ ಕೆಲವು ಜಾತಿಗಳಿಗೆ ಸ್ಥಾನ ತಪ್ಪುತ್ತದೆ, ಅದನ್ನು ಪಕ್ಷ ಮುಂದೆ ಸರಿದೂಗಿಸುತ್ತದೆ ಎಂದಿದ್ದಾರೆ.

ಪ್ರಮಾಣ ವಚನಕ್ಕೆ ಬಾರದ ರಹಸ್ಯ

ಆಗಸ್ಟ್ 3 ರಂದು ನಡೆದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಗೈರಾಗಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆಗಸ್ಟ್ 3 ನಮ್ಮ ತಂದೆಯ ಹುಟ್ಟು ಹಬ್ಬ. ಆ ಕಾರಣಕ್ಕಾಗಿಯೇ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ. ಸಂಪುಟದ ಬಗ್ಗೆ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಯತೀಂದ್ರ ಗೊಂದಲಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನೀಡಿದ್ದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ತಂದೆ ಅರ್ಧಕ್ಕೆ ಸಿಎಂ ಸ್ಥಾನದಿಂದ ಕೆಳಗಿಳಿದ ಕಾರಣ ನನಗೆ ಸಚಿವ ಸ್ಥಾನ ನೀಡಲಾಗಿದೆ. ನನಗೆ ಸ್ಥಾನ ನೀಡದಿದ್ದರೆ ಸಹಜವಾಗಿ ನಮ್ಮ ಸಮುದಾಯಕ್ಕೆ ಬೇಜಾರಾಗುತ್ತಿತ್ತು. ಇದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ತಮ್ಮ ಸಚಿವ ಸ್ಥಾನವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಅಸಮಾಧಾನಗೊಂಡಿರುವ ಹಿರಿಯ ನಾಯಕರಾದ ಮಹದೇವಪ್ಪ ಹಾಗೂ ತನ್ವೀರ್ ಸೇಠ್ ಅವರನ್ನು ಖುದ್ದು ಭೇಟಿಯಾಗಿ ಮಾತನಾಡುವುದಾಗಿ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಂತ್ರಿಗಿರಿ ಸಿಗದ್ದಕ್ಕೆ ನೋವಿಲ್ಲ, ಹೀಗ್ಯಾಕೆ ಮಾಡಿದರೆಂಬ ಬೇಸರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ
ಮಂತ್ರಿಗಿರಿ ಅಸಮಾಧಾನ ಶಮನಕ್ಕೆ ಅಖಾಡಕ್ಕಿಳಿದ ಟ್ರಬಲ್ ಶೂಟರ್ ಸಿಎಂ ಡಿ.ಕೆ.ಶಿವಕುಮಾರ್, ಚಕ್ರಾಯುಧ ಕೆಳಗಿಳಿಸ್ತಾರ ಕೃಷ್ಣಪ್ಪ!