ಸಿಎಂ ಆಯ್ಕೆಯಾಗಬೇಕಾಗಿದ್ದು ಶಾಸಕಾಂಗ ಪಕ್ಷದ ಸಭೆಯಲ್ಲಿ ಎಂದು ಹೇಳುವ ಮೂಲಕ ಡಿಕೆಶಿ ಪರ ಬ್ಯಾಟಿಂಗ್ ಬೀಸುತ್ತಿರುವ ಸ್ವಾಮೀಜಿಗಳ ಹೇಳಿಕೆಗೆ ಸಚಿವ ಆರ್.ಬಿ.ತಿಮ್ಮಾಪೂರ್ ಅವರು ತಿರುಗೇಟು ನೀಡಿದ್ದಾರೆ.
ಬಾಗಲಕೋಟೆ (ಜು.01): ಸಿಎಂ ಆಯ್ಕೆಯಾಗಬೇಕಾಗಿದ್ದು ಶಾಸಕಾಂಗ ಪಕ್ಷದ ಸಭೆಯಲ್ಲಿ ಎಂದು ಹೇಳುವ ಮೂಲಕ ಡಿಕೆಶಿ ಪರ ಬ್ಯಾಟಿಂಗ್ ಬೀಸುತ್ತಿರುವ ಸ್ವಾಮೀಜಿಗಳ ಹೇಳಿಕೆಗೆ ಸಚಿವ ಆರ್.ಬಿ.ತಿಮ್ಮಾಪೂರ್ ಅವರು ತಿರುಗೇಟು ನೀಡಿದ್ದಾರೆ. ಬಾಗಲಕೋಟೆಯ ನವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,ಸ್ವಾಮೀಜಿಗಳು ಯಾರು ಯಾರಿಗೆ ಆಶೀರ್ವಾದ ಮಾಡ್ತಾರೆ, ಮಾಡಲಿ. ಆದ್ರೆ ಸಿಎಂ ಆಯ್ಕೆ ನಡೆಯುವುದು ಶಾಸಕಾಂಗ ಪಕ್ಷದ ಸಭೆಯಲ್ಲಿ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನದೇ ಆದ ಮಹತ್ವ ವಿದೆ.ಇಲ್ಲಿ ನನ್ನ ನಿಮ್ಮ ಅಭಿಪ್ರಾಯಗಳು ಗೌನ ಆಗ್ತಾವೆ. ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎನ್ನುವ ಮೂಲಕ ರಾಜ್ಯ ರಾಜಕಾರಣದಲ್ಲಿ ಆರಂಭವಾಗಿರುವ ಸಿಎಂ ಬದಲಾವಣೆಯ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಸ್ವಾಮೀಜಿಗಳ ರಾಜಕೀಯ ಹೇಳಿಕೆ ತರವಲ್ಲ: ಮಠಾಧೀಶರು ರಾಜಕೀಯ ಬಗ್ಗೆ ಚರ್ಚಿಸುವುದು ಎಷ್ಟು ಸೂಕ್ತ ಎಂಬುದನ್ನು ಅವರೇ ಅರಿಯಬೇಕು. ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಸಿಎಂ ಇದ್ದಾರೆ. ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂವರು ಡಿಸಿಎಂ ಬೇಡಿಕೆ ಕೇಳಿಬರುತ್ತಿದ್ದು, ಡಿಸಿಎಂ ಸ್ಥಾನಕ್ಕೆ ನಿಮ್ಮದೂ ಪೈಪೋಟಿ ಇದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ನೀವು ಸಿಎಂ ಸ್ಥಾನ ಕೊಟ್ರೆ ಬಿಡ್ತಿರಾ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಏತ ನೀರಾವರಿ ಉದ್ಘಾಟಿಸಿದ ಸಚಿವ: ಜಮಖಂಡಿ, ಮುಧೋಳ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಬಹು ನಿರೀಕ್ಷಿತ ವೆಂಕಟೇಶ್ವರ ಏತ ನೀರಾವರಿಗೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸಮೀಪದ ಕುಲಹಳ್ಳಿಯಲ್ಲಿರುವ ಏತ ನೀರಾವರಿ ಕೇಂದ್ರದಲ್ಲಿ ನೀರು ಪೂರೈಕೆಯ ಬಟನ್ ಒತ್ತಿ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ೨೦೧೭ರಲ್ಲಿ ಪ್ರಾರಂಭವಾದ ಕಾಮಗಾರಿಗೆ ಒಟ್ಟು ₹ ೫೪ ಕೋಟಿ ವೆಚ್ಚದಲ್ಲಿ ಸಾಕಾರವಾದ ಈ ಯೋಜನೆಯಿಂದ ಒಟ್ಟು ೧೨೦೦ ಹೆಕ್ಟೇರ್ ಜಮೀನು ನೀರಾವರಿಯಾಗಲಿದೆ. ಮೂರು ತಾಲೂಕುಗಳ ಸುಮಾರು ೧೪ ಗ್ರಾಮಗಳ ರೈತರಿಗೆ ಇದರಿಂದ ಅನುಕೂಲವಾಗಲಿದೆ.
ರಾಜ, ರಾಜ್ಯ ಮತ್ತು ಕೇಂದ್ರವಾಗಲಿ ತೆರಿಗೆ ವಸೂಲಿ ಮಾಡಿಯೇ ಆಡಳಿತ ನಡೆಸೋದು: ಸಿಎಂ ಸಿದ್ದರಾಮಯ್ಯ
ಒಣಭೂಮಿ ಹೊಂದಿರುವ ಈ ಭಾಗದ ರೈತರಿಗೆ ನೀರಾವರಿ ಸೌಕರ್ಯ ಲಭಿಸಿ ಬಾಳು ಬಂಗಾರವಾಗಲಿದೆ ಎಂದ ಅವರು, ಈ ಯೋಜನೆ ಅನುಷ್ಠಾನದಲ್ಲಿ ಮಾಜಿ ಸಚಿವೆ ಉಮಾಶ್ರೀಯವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು. ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಸಿದ್ದು ಕೊಣ್ಣೂರ, ಡಾ. ಎ.ಆರ್. ಬೆಳಗಲಿ, ಡಾ.ಪದ್ಮಜೀತ ನಾಡಗೌಡ ಪಾಟೀಲ, ಲಕ್ಷö್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ಸಂಗಪ್ಪ ಉಪ್ಪಲದಿನ್ನಿ, ಭೀಮಶಿ ಮಗದುಮ್ಮ, ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಪೂಜಾರಿ, ರಾಯಪ್ಪ ಪೂಜಾರಿ, ಬಸವರಾಜ ದೊಡಮನಿ, ತುಕಾರಾಮ ಬನ್ನೂರ, ಮಹಾಲಿಂಗ ನಾವಿ, ಶೇಖರ ಹಕ್ಕಲದಡ್ಡಿ ಸೇರಿದಂತೆ ಅನೇಕರಿದ್ದರು.