
ಬೆಂಗಳೂರು(ಆ.30): ಸತೀಶ್ ಜಾರಕಿಹೊಳಿ-ಪರಮೇಶ್ವರ್ ಭೇಟಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದೆ. ಹೌದು, ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿರುವ ವೇಳೆಯಲ್ಲೇ ಉಭಯ ನಾಯಕರ ಭೇಟಿ ಹಲವು ಚರ್ಚೆಗೆ ಗ್ರಾಸವಾಗಿದೆ. ಎರಡು ವಾರಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್-ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದರು. ಇಂದು ಪರಮೇಶ್ವರ್-ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ.
ಸಿಎಂ ರೇಸ್ ನಲ್ಲಿರುವ ನಾಯಕರ ಈ ಭೇಟಿ ಕೊಡ್ತಿರುವ ಮುನ್ಸೂಚನೆ ಆದರೂ ಏನು? ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ. ಸಿಎಂ ರೇಸ್ ನಲ್ಲಿ ಪ್ರಮುಖವಾಗಿ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಅವರು ಹೆಸರು ಚಾಲ್ತಿಯಲ್ಲಿವೆ. ಒಬ್ಬರಿಗೆ ಹೈಕಮಾಂಡ್ ಶ್ರೀರಕ್ಷೆ ಇದ್ದು, ಮತ್ತೊಬ್ಬರಿಗೆ ಶಾಸಕರ ಬಲ ಇದೆ. ಹೀಗಾಗಿ ಪರಂ-ಜಾರಕಿಹೊಳಿ ಭೇಟಿ ಭಾರೀ ಕುತೂಹಲ ಹೆಚ್ಚಿಸಿದೆ.
'ದೆಹಲಿಗೆ ನಮ್ಮ ನಾಯಕರು ಹೋಗಿದ್ದಾರಲ್ಲ, ನಾನು ನಮ್ಮ ಊರು ಕಡೆ ಹೋಗ್ತಿನಿ': ಸಚಿವ ಸತೀಶ್ ಜಾರಕಿಹೊಳಿ
ನಾಳೆ ಸಿಎಂ ಬದಲಾವಣೆ ಚರ್ಚೆ ಎದುರಾದರೆ ಏನು ಎಂಬ ಪ್ರಶ್ನೆಗೆ?, ಸಿಎಂ ರೇಸ್ ನಲ್ಲಿರುವ ನಾಯಕರು ಈಗಿನಿಂದಲೇ ತಯಾರಿ ಆರಂಭಿಸಿದ್ದಾರಾ? ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಸತೀಶ್ ಜಾರಕಿಹೊಳಿ ಈಗಾಗಲೇ ತಮ್ಮದೇ ತಂಡ ಕಟ್ಟಿಕೊಂಡು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇತ್ತ ಪರಮೇಶ್ವರ್ ಕೂಡ ಹೈಕಮಾಂಡ್ ನಾಯಕರನ್ನ ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದ್ದಾರೆ.
ಈ ಇಬ್ಬರೂ ನಾಯಕರ ಭೇಟಿ ಹಲವು ಆಯಾಮಗಳ ಚರ್ಚೆಗೆ ನಾಂದಿ ಹಾಡಿದೆ. ಈ ಹಿಂದೆ ಡಿಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದು ನಾಯಕರು ಸಭೆ ಸೇರಿದ್ದರು. ಇದೇ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಾಯಕರು ಸಭೆ ಸೇರಿದ್ದರು. ಈಗಿನ ಭೇಟಿ ಕೂಡ ಉನ್ನತ ಹುದ್ದೆಯ ಕ್ಮೈಮ್ ಮಾಡುವ ಸಲುವಾಗಿ ಎಂಬ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಸತೀಶ್ ಜಾರಕಿಹೊಳಿ ಅವರ ಭೇಟಿಯಾದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ನಾನು ಊಟಕ್ಕೆ ಬಂದಿದ್ದೆ ಅಷ್ಟೇ, ಯಾವುದೇ ರಾಜಕೀಯ ವಿಚಾರ ಚರ್ಚೆ ನಡೆಸಿಲ್ಲ. ರೊಟ್ಟಿ ಊಟ ರೆಡಿಯಾಗಿದೆ ಬನ್ನಿ ಅಂತಾ ಸಾಹುಕಾರ್ ಹೇಳಿದ್ದರು. ಹಾಗಾಗಿ ಊಟಕ್ಕೆ ಬಂದಿದ್ದೆ. ರುಚಿಯಾದ ಊಟ ಮಾಡಿದೆ, ಖುಷಿಯಾಯಿತು ಎಂದು ಹೇಳಿದ್ದಾರೆ.
ಡಿಕೆಶಿ ಜತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ
ಇನ್ನು ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ವಿಶೇಷ ಏನಿಲ್ಲ, ಕಚೇರಿಗೆ ಹೋಗ್ತಾ ಇರ್ತೀವಿ. ಒಂದು ಗಂಟೆ ಕೂತಿದ್ದರು. ಪಕ್ಷ, ಸಂಘಟನೆ, ಚುನಾವಣೆ ಬಗ್ಗೆ ಚರ್ಚೆ ಮಾಡಿದ್ವಿ ಅಷ್ಟೆ. ಪ್ರಸಕ್ತದ ಬಗ್ಗೆ ಚರ್ಚೆ ಆಗಿಲ್ಲ. ನಾನೇ ಹೋಗುವವನಿದ್ದೆ ಅವರೇ ಬಂದರು. ಕೇಂದ್ರ ಬಿಂದು ಅಂತೇನಿಲ್ಲ. ಹಿಂದೆ ಸಾಕಷ್ಟು ಬಾರಿ ಬಂದಿದ್ದಾರೆ. ಅವರ ಮನೆಗೆ ನಾನು ಹೋಗಿದ್ದೇನೆ. ಮನೆಗೆ ಹೋಗಿ ಬರೋದು ಏನು ಹೊಸದಲ್ಲ. ಇದು ಒಂದು ಪಕ್ಷದಲ್ಲಿ ಆಗ್ತಾವೆ. ಹಿಂದೆಯೂ ಸಾಕಷ್ಟು ಬಾರಿ ಆಗುಹೋಗುಗಳ ಬಗ್ಗೆ ಚರ್ಚೆ ಮಾಡಿದ್ದೆವು. ಈಗಲೂ ಅದನ್ನೇ ಚರ್ಚೆ ಮಾಡಿದ್ದೇವೆ ಅಷ್ಟೆ. ಒಳ್ಳೆದಾಗಲಿ ಅಂತ ಎಲ್ಲಾ ಚರ್ಚೆ ಮಾಡಿದ್ದು ಅಷ್ಟೆ ಎಂದು ಹೇಳಿದ್ದಾರೆ.
ಇಲ್ಲಿ ಸಿಎಂ ಬದಲಾವಣೆ ಇಲ್ಲ. ಆ ರೀತಿ ಯಾರು ಬಯಸಿಲ್ಲ. ಒಂದು ವೇಳೆ ಅಂತ ಸನ್ನಿವೇಶ ಬರಲ್ಲ. ಊಹೆನೂ ನಾವು ಮಾಡಿಲ್ಲ. ಸಿಎಂ ಬದಲಾವಣೆ ಒಂದು ಅಪ್ರಸ್ತುತ ಅಷ್ಟೆ ಎಂದು ತಿಳಿಸಿದ್ದಾರೆ.
ಆಡಿಯೋ ಬಿಡುಗಡೆ ವಿಚಾರದ ಬಗ್ಗೆ ಈಗಾಗಲೇ ತನಿಖೆ ನಡೆಸಲಾಗುತ್ತಿದೆ. ಸಿಎಂ ದೇಸಾಯಿ ಆಯೋಗ ರಚಿಸಿದ್ದಾರೆ ಅಷ್ಟೆ. ವರದಿ ಬಳಿಕ ಮಾತಾಡೋಣ ಎಂದಷ್ಟೇ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.