
ದಾವಣಗೆರೆ (ನ.16): ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಶನಿವಾರ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ತಮ್ಮ ಹೊಸ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಇತ್ತೀಚೆಗಷ್ಟೇ ಅವರು ಇಟಲಿಯ ಅಗಸ್ಟಾ ಕಂಪನಿಯ ಹೆಲಿಕಾಪ್ಟರನ್ನು ಖರೀದಿಸಿದ್ದರು. ಸುಮಾರು 20 ಕೋಟಿ ರೂ.ಬೆಲೆಯ ಈ ಅತ್ಯಾಧುನಿಕ ಡಬಲ್ ಎಂಜಿನ್ ಹೆಲಿಕಾಪ್ಟರ್, ಆಧುನಿಕ ಸುರಕ್ಷಾ ವ್ಯವಸ್ಥೆಯನ್ನು ಹೊಂದಿದೆ. ಐವರು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳು ಇದರಲ್ಲಿ ಪ್ರಯಾಣಿಸಬಹುದು. ಸುಧಾರಿತ ವೈರ್‌ಲೆಸ್ ಸಂವಹನ ವ್ಯವಸ್ಥೆಯನ್ನೂ ಹೆಲಿಕಾಪ್ಟರ್ ಹೊಂದಿದೆ.
ಉತ್ತರ ಕರ್ನಾಟಕದಲ್ಲಿ ಸ್ವಂತ ಹೆಲಿಕಾಪ್ಟರ್ ಹೊಂದಿದ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆ ಇವರದು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಜಗಳೂರು ಶಾಸಕ ದೇವೇಂದ್ರಪ್ಪ ಜೊತೆ ರಾಜನಹಳ್ಳಿ ಗುರುಪೀಠದ ಆವರಣದಲ್ಲಿರುವ ಹೆಲಿಪ್ಯಾಡ್‌ಗೆ ಆಗಮಿಸಿದ ಸಚಿವರನ್ನು ಸ್ಥಳೀಯ ನಾಯಕರು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ, ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿ, ಪ್ರಸನ್ನಾನಂದ ಶ್ರೀಗಳ ಆಶೀರ್ವಾದ ಪಡೆದರು. ನಂತರ, ಬೆಳ್ಳೂಡಿ ಕಾಗಿನೆಲೆ ಮಠಕ್ಕೆ ತೆರಳಿ ನಿರಂಜನಾನಂದ ಶ್ರೀಗಳ ಭೇಟಿ ಮಾಡಿ, ಆಶೀರ್ವಾದ ಪಡೆದರು
ಬಳಿಕ, ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ. ಸಿಎಂ ಬದಲಾವಣೆ ವಿಚಾರವಾಗಿ ಯಾವುದೇ ಚರ್ಚೆ ಇಲ್ಲ. ಸಿದ್ದರಾಮಯ್ಯನವರು ಐದು ವರ್ಷವೂ ಸಿಎಂ ಆಗಿರುತ್ತಾರೆ. ಸಿಎಂ ಬದಲಾವಣೆ ಇಲ್ಲ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಎಂದರು. ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯಿಸಿ, ಸಂಪುಟ ಪುನಾರಚನೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ಅದರ ಬಗ್ಗೆ ನಮ್ಮ ಜೊತೆ ಚರ್ಚೆ ಮಾಡೋದಿಲ್ಲ. ಈ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರುತ್ತದೆ. ಸಂಪುಟ ಪುನಾರಚನೆಯಾದರೆ ಇನ್ನೂ ಎರಡು ಸ್ಥಾನವನ್ನು ವಾಲ್ಮೀಕಿ ಸಮಾಜಕ್ಕೆ ಕೇಳಿದ್ದೇವೆ.
ಇದರಿಂದ ನಮ್ಮ ಸಮುದಾಯದವರಿಗೆ ಒಳ್ಳೆಯದಾಗುತ್ತೆ. ನಮ್ಮ ಸಮಾಜದಲ್ಲಿ ಯಾರಿಗಾದರೂ ಕೊಡಲಿ. ಇವರಿಗೇ ಕೊಡಿ ಎಂದು ಡಿಮ್ಯಾಂಡ್ ಮಾಡೋದಿಲ್ಲ ಎಂದು ಹೇಳಿದರು. ಬಿಹಾರ ಫಲಿತಾಂಶದಿಂದ ಸಿದ್ದರಾಮಯ್ಯನವರಿಗೆ ಮತ್ತೆ ಬಲ ಬಂದಿದೆ. ಅವರು ಇನ್ನೂ ಗಟ್ಟಿಯಾಗಿದ್ದಾರೆ. ಈ ಚುನಾವಣಾ ಫಲಿತಾಂಶ ಕಾಂಗ್ರೆಸ್ ಗೆ ಪಾಠವಾಗಿದೆ. ಎಲ್ಲೆಲ್ಲಿ ಲೋಪದೋಷವಾಗಿದೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಕರ್ನಾಟಕದಲ್ಲಿ ಅಹಿಂದಕ್ಕೆ ಹೆಚ್ಚು ಮಹತ್ವವಿದೆ. ಬಿಹಾರದಲ್ಲಿ ಎಲ್ಲರನ್ನೂ ಒಗ್ಗೂಡಿಸುವುದಕ್ಕೆ ಸಾಧ್ಯವಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಅಹಿಂದ ವರ್ಗವನ್ನು ಒಗ್ಗೂಡಿಸಲು ಸಾಧ್ಯವಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.