ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದ್ದು, ನಿರೀಕ್ಷೆಯಂತೆಯೇ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಸಿಕ್ಕಿದೆ. ಈ ಮೂಲಕ ಎರಡೂವರೆ ವರ್ಷಗಳ ಬಳಿಕ ಗೋಕಾಕದ ಜಾರಕಿಹೊಳಿ ಕುಟುಂಬಕ್ಕೆ ಮತ್ತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ದೊರೆತಿದೆ.
ಶ್ರೀಶೈಲ ಮಠದ
ಬೆಳಗಾವಿ (ಜೂ.11) ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದ್ದು, ನಿರೀಕ್ಷೆಯಂತೆಯೇ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಸಿಕ್ಕಿದೆ. ಈ ಮೂಲಕ ಎರಡೂವರೆ ವರ್ಷಗಳ ಬಳಿಕ ಗೋಕಾಕದ ಜಾರಕಿಹೊಳಿ ಕುಟುಂಬಕ್ಕೆ ಮತ್ತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ದೊರೆತಿದೆ.
ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಹೊಣೆ ವಹಿಸಿಕೊಂಡಿದ್ದ ಸತೀಶ ಜಾರಕಿಹೊಳಿ ಅವರಿಗೆ 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಸಿಕ್ಕಿತ್ತು. ಇದೀಗ 2023ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಸತೀಶ ಜಾರಕಿಹೊಳಿ ಅವರಿಗೆ ಸಿಕ್ಕಿದೆ. ಈ ಮೂಲಕ ಬೆಳಗಾವಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಮೂರು ಬಾರಿ ಸಿಕ್ಕಂತಾಗಿದೆ.
ರಾಯಚೂರು: ಸಚಿವ ಶರಣ ಪ್ರಕಾಶ ಪಾಟೀಲ್ ವಿರುದ್ಧ 'ಗೋ ಬ್ಯಾಕ್' ಪ್ರತಿಭಟನೆ
2023ರ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿದ್ಧತೆ ನಡೆಸಿದ್ದ ಸತೀಶ ಜಾರಕಿಹೊಳಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ತಮ್ಮ ಹೊಸ ವಾಹನದ ಸಂಖ್ಯೆಯನ್ನು ಕೂಡ 2023ನ್ನೇ ಪಡೆದಿದ್ದರು. ಈ ವಾಹನವನ್ನು ಬೆಳಗಾವಿಯ ಸದಾಶಿವ ನಗರದ ಸ್ಮಶಾನಭೂಮಿಯಿಂದಲೇ ಚಾಲನೆ ನೀಡಿದ್ದರು. ಈಗ ಅವರು ಅಂದುಕೊಂಡಂತೆಯೇ ರಾಜ್ಯದಲ್ಲಿ ಸ್ಪಷ್ಟಬಹುಮತಗಳೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಿದ ಗದ್ದುಗೆ ಹಿಡಿದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಸಂಪುಟದಲ್ಲೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸತೀಶ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ ಖಾತೆಯೂ ಸಿಕ್ಕಿದೆ. ಇದರೊಂದಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯೂ ಸಿಕ್ಕಿದೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಗೆ ಆಗಮಿಸಿದ ಸತೀಶ ಜಾರಕಿಹೊಳಿ ಅವರು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ್ದರು. ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿಯೂ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಜನಪರ ಆಡಳಿತಕ್ಕೆ ಕಟ್ಟುನಿಟ್ಟಿನ ಆದೇಶವನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಭ್ರಷ್ಟಾಚಾರದ ವಾಸನೆ ಬಂದಿರುವ ಕಾಮಗಾರಿಗಳ ಕುರಿತು ತನಿಖೆ ನಡೆಸುವಂತೆಯೂ ಆದೇಶ ನೀಡಿದ್ದಾರೆ.
ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದ ಬಿಜೆಪಿ ಸರ್ಕಾರ:
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಸಿಡಿ ಹಗರಣದ ಹಿನ್ನೆಲೆಯಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ವೇಳೆ ಜಿಲ್ಲೆಯಲ್ಲಿ ದಿ.ಉಮೇಶ ಕತ್ತಿ ಮತ್ತು ಶಶಿಕಲಾ ಜೊಲ್ಲೆ ಇವರಿಬ್ಬರೂ ಸಚಿವರಿದ್ದರು. ಇವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಸಿಕ್ಕಿರಲಿಲ್ಲ. ನೆರೆಯ ಜಿಲ್ಲೆಯವರಾದ ಜಗದೀಶ ಶೆಟ್ಟರ್ ಮತ್ತು ಗೋವಿಂದ ಕಾರಜೋಳ ಅವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು. ಈ ಮೂಲಕ ಬಿಜೆಪಿ ಸರ್ಕಾರ ಜಿಲ್ಲೆಯಲ್ಲದವರಿಗೆ ಉಸ್ತುವಾರಿ ಜವಾಬ್ದಾರಿ ನೀಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತ್ತು. ಗೋವಿಂದ ಕಾರಜೋಳ ಅವರಂತೂ ಜಿಲ್ಲೆಗೆ ಅಪರೂಪದ ಅತಿಥಿಯಾಗಿದ್ದರು. ಹೀಗಾಗಿ, ಆಡಳಿತ ಯಂತ್ರದ ಮೇಲೆ ಬಿಗಿ ಹಿಡಿತ ಇರಲಿಲ್ಲ.
ಯಾವುದೇ ಸರ್ಕಾರ ಬಂದರೂ ಗೋಕಾಕದ ಜಾರಕಿಹೊಳಿ ಕುಟುಂಬದ ಸಹೋದರರಲ್ಲಿ ಯಾರಾದರೊಬ್ಬರು ಸಚಿವರಾಗುತ್ತಲೇ ಇದ್ದರು. ಆದರೆ, ರಮೇಶ ಜಾರಕಿಹೊಳಿ ರಾಜೀನಾಮೆ ನೀಡಿದ್ದರಿಂದ ಜಾರಕಿಹೊಳಿ ಕುಟುಂಬ ಸಚಿವ ಸ್ಥಾನದಿಂದಲೂ ವಂಚಿತವಾಗಿತ್ತು. ಈ ಬಾರಿ ಕಾಂಗ್ರೆಸ್ ಸರ್ಕಾರ ಸಚಿವ ಸತೀಶ ಜಾರಕಿಹೊಳಿ ಅವರಿಗೆ ತವರು ಜಿಲ್ಲೆ ಬೆಳಗಾವಿ ಜಿಲ್ಲಾ ಉಸ್ತುವಾರಿ ನೀಡುವ ಮೂಲಕ ಜಾರಕಿಹೊಳಿ ಕುಟುಂಬಕ್ಕೆ ಶಕ್ತಿ ನೀಡಿದಂತಾಗಿದೆ.
ಹೋರಾಟ ಬಿಟ್ರೆ ಅವರಿಗಿನ್ನೇನು ಕೆಲಸ?: ಬಿಜೆಪಿ ವಿರುದ್ಧ ಜಾರಕಿಹೊಳಿ ವ್ಯಂಗ್ಯ
ನೆರೆಯ ಧಾರವಾಡ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹೊರಲು ಉತ್ಸುಕತೆ ಹೊಂದಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೇ ಹೆಬ್ಬಾಳಕರ ಅವರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಈ ಮೂಲಕ ಬೆಳಗಾವಿ ಜಿಲ್ಲೆಯವರಿಗೆ ಹೆಚ್ಚಿನ ಆದ್ಯತೆ ನೀಡಿದಂತಾಗಿದೆ.