ಕಾಂಗ್ರೆಸ್‌ಗೆ ಸಸಿಕಾಂತ್ ಸೆಂಥಿಲ್ ಸೇರ್ಪಡೆ: ಮುಂದಿನ ಎಲೆಕ್ಷನ್‌ನಲ್ಲಿ ಸ್ಪರ್ಧೆ?

By Kannadaprabha News  |  First Published Nov 10, 2020, 10:27 AM IST

ಮಾಜಿ ಐಪಿಎಸ್ ಅಣ್ಣಾಮಲೈ ಬಿಜೆಪಿ ಸೇರಿ ರಾಜಕೀಯ ಶುರು ಮಾಡಿರುವ ಬೆನ್ನಲ್ಲೇ ಇದೀಗ ಮತ್ತೋರ್ವ ಮಾಜಿ ಐಎಎಸ್ ಅಧಿಕಾರಿ ರಾಜಕೀಯ ಸೇರಿದ್ದಾರೆ. 


ಚೆನ್ನೈ (ನ.10): ಕರ್ನಾಟಕ ಕೇಡರ್‌ನ ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌  ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ತಮಿಳುನಾಡು ಕಾಂಗ್ರೆಸ್‌ ಸಮಿತಿ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್‌ ಉಸ್ತುವಾರಿ ದಿನೇಶ್‌ ಗುಂಡೂರಾವ್‌, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಕೆ.ಎಸ್‌.ಅಳಗಿರಿ ಮತ್ತಿತರರ ಸಮ್ಮುಖದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. 41 ವರ್ಷದ ಸೆಂಥಿಲ್‌ 2009ನೇ ಬ್ಯಾಚಿನ ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿ. 2019ರ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗಲೇ ರಾಜೀನಾಮೆ ನೀಡಿದ್ದರು. ಬಳಿಕ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅದಾದ ಒಂದು ವರ್ಷದ ನಂತರ ಭಾನುವಾರ ಕಾಂಗ್ರೆಸ್‌ ಪಕ್ಷ ಸೇರುವುದಾಗಿ ತಿಳಿಸಿದ್ದರು.

ರಾಹುಲ್‌ ಚಿಂತನೆ ಜನಪರ: ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ಬಂದಾಗ ಅಲ್ಲಿ ಹೆಚ್ಚು ಗಮನ ಹರಿಸುತ್ತೇನೆ. ಕರ್ನಾಟಕದಲ್ಲಿ ಚುನಾವಣೆ ಬರುವಾಗ ಇಲ್ಲಿ ಬರುತ್ತೇನೆ. ಇದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವದ ಜತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ರಾಹುಲ್‌ ಗಾಂಧಿ ಚಿಂತನೆ ಜನರ ಬಗ್ಗೆ ಮತ್ತು ದೇಶದ ಭವಿಷ್ಯದ ಬಗ್ಗೆ ಕಾಳಜಿಪೂರ್ವಕವಾಗಿದೆ. ಪ್ರಜಾಪ್ರಭುತ್ವ ವಿರೋಧಿ ಆಡಳಿತದ ಬಗ್ಗೆ ಜನರು ಅರಿತುಕೊಳ್ಳುತ್ತಿದ್ದು ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ ಎಂದು ಸೆಂಥಿಲ್‌ ಹೇಳಿದರು.

Tap to resize

Latest Videos

ದಕ್ಷಿಣ ಕನ್ನಡ ಡಿಸಿಯಾಗಿದ್ದ ಸೇಂಥಿಲ್‌ ಇಂದು ಕಾಂಗ್ರೆಸ್‌ಗೆ! ...

2009ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದ ಸಸಿಕಾಂತ್‌ ಸೆಂಥಿಲ್‌ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶದಲ್ಲಿ 9ನೇ ಸ್ಥಾನ ಪಡೆದು ಕರ್ನಾಟಕದಲ್ಲಿ ಆಡಳಿತಾತ್ಮಕ ಕರ್ತವ್ಯಕ್ಕೆ ಸೇರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ನಿರ್ವಹಿಸಿದ ಬಳಿಕ 2107ರ ಅಕ್ಟೋಬರ್‌ 10ಕ್ಕೆ ದ.ಕ. ಜಿಲ್ಲಾಧಿಕಾರಿಯಾಗಿ ನಿಯುಕ್ತಿಯಾಗಿದ್ದರು. ಅಲ್ಲಿಂದ ಸುಮಾರು 2 ವರ್ಷಗಳ ಕಾಲ ಇಲ್ಲೇ ಕಾರ್ಯ ನಿರ್ವಹಿಸಿದ್ದ ಅವರು ಕಳೆದ ವರ್ಷ ಸೆ.6ರಂದು ದಿಢೀರನೆ ರಾಜೀನಾಮೆ ನೀಡಿ ಗಮನ ಸೆಳೆದಿದ್ದರು. ಈ ವೇಳೆ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಪತ್ರದಲ್ಲಿ ‘‘ಪ್ರಜಾಪ್ರಭುತ್ವದ ಮೂಲ ಆಧಾರ ಸ್ತಂಭಗಳು ಹಿಂದೆಂದೂ ಕಾಣದ ರೀತಿಯಲ್ಲಿ ರಾಜಿ ಮಾಡಿಕೊಳ್ಳುತ್ತಿವೆ. ದೇಶದ ಬಹುತ್ವಕ್ಕೆ ಇದರಿಂದ ಭವಿಷ್ಯದಲ್ಲಿ ಅಪಾಯವಿದ್ದು ಸೇವೆಯಿಂದ ಹೊರಗಿದ್ದೇ ಎಲ್ಲ ಜನರ ಒಳಿತಿಗಾಗಿ ದುಡಿಯುತ್ತೇನೆ’’ ಎಂದು ಉಲ್ಲೇಖಿಸಿದ್ದರು.

ಚುನಾವಣೆಯಲ್ಲಿ ಸ್ಪರ್ಧೆ?: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸೆಂಥಿಲ್‌ ಸ್ಪಷ್ಟವಾಗಿ ಏನೂ ತಿಳಿಸಿಲ್ಲ. ಆದರೆ ಪಕ್ಷ ಅವರನ್ನು ಸ್ಪರ್ಧೆಗಿಳಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು ಮೂಲಗಳು ತಿಳಿಸಿವೆ.

click me!