
ಬೆಂಗಳೂರು (ಏ.13): ‘ನಾನು ಅಬ್ದುಲ್ ಜಬ್ಬಾರ್ ಅವರ ಹೆಸರೆತ್ತಿ ಆರೋಪ, ಟೀಕೆ ಮಾಡಿಲ್ಲ. ಇಲ್ಲೇ ಇದ್ದ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಅವರು ಪ್ರತಿ ನಿತ್ಯವೂ ಹೈಕಮಾಂಡ್‌ಗೆ ವರದಿ ನೀಡಿದ್ದಾರೆ. ನನ್ನ ವಿರುದ್ಧ ಮಾಡುತ್ತಿರುವ ಅವರ ಸುಳ್ಳು ಆರೋಪ ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ’ ಎಂದು ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಯಾರ ಮೇಲೂ ಹೆಸರು ಹೇಳಿ ಆರೋಪ ಮಾಡಿಲ್ಲ. ಕಾಣದ ಕೈಗಳು ಕೆಲಸ ಮಾಡಿವೆ ಎಂದು ಹೇಳಿದ್ದೇವೆ. ಮಾಧ್ಯಮದವರು ಕೇಳಿದರೂ ಹೆಸರು ಹೇಳಿಲ್ಲ. ಆದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ಅಭಿಷೇಕ್ ದತ್ತ ಇಲ್ಲೇ ಇದ್ದರು. ಅಭಿಷೇಕ್ ದತ್ ಅವರು ಹೈಕಮಾಂಡ್‌ಗೆ ವರದಿ ನೀಡಿದ್ದಾರೆ. ಹೀಗಾಗಿ ನಾವು ಆರೋಪ ಮಾಡಿರುವುದಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಸುಳ್ಳು’ ಎಂದು ಹೇಳಿದರು.
ನಾನು ಹೆಸರು ಹೇಳದ ಕಾರಣ ಅವರು ಬೇಸರಪಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ. ಅವರು ಏನೇನೋ ತಿಳಿದುಕೊಂಡರೆ ಅದಕ್ಕೆ ಉತ್ತರ ಕೊಡಲಾಗಲ್ಲ. ನಾವು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳಿದ್ದೆ. ಜತೆಗೆ ಅಲ್ಪಸಂಖ್ಯಾತ ನಾಯಕರ ಒಪ್ಪಿಗೆ ಮೇರೆಗೆ ಸಮರ್ಥ್ ಅವರಿಗೆ ಟಿಕೆಟ್ ನೀಡಿರುವುದನ್ನು ದಾವಣಗೆರೆಯಲ್ಲಿ ಹೇಳಬೇಕಿತ್ತು. ಕೆಲವರು ಅದನ್ನು ಮಾಡಲಿಲ್ಲ ಎಂದಷ್ಟೇ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಕರೆದಿಲ್ಲ ಎಂಬ ಕಾರಣಕ್ಕೆ ಅಬ್ದುಲ್ ಜಬ್ಬಾರ್ ಬಂದಿಲ್ಲ ಎಂಬ ಬಗ್ಗೆ ಪ್ರತಿಕ್ರಿಯಿಸಿರುವ ಸಲೀಂ ಅಹಮದ್, ‘ನನ್ನನ್ನು ಕೆಪಿಸಿಸಿಯಿಂದ ವೀಕ್ಷಕರನ್ನಾಗಿ ಮಾಡಿದ್ದರು. ನನ್ನನ್ನೇ ಮಲ್ಲಿಕಾರ್ಜುನ್ ಅವರು ಕರೆಯಲಿಲ್ಲ. ಕೆಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು, ಸುರ್ಜೇವಾಲ ಅವರು ಹೇಳಿದ್ದಾರೆ ಸಾಕಲ್ಲವೇ? ಡಿ.ಕೆ. ಶಿವಕುಮಾರ್ ಮಾತಾಡಿದ್ದಾರೆ ಎಂದು ಜಬ್ಬಾರ್ ಅವರೇ ಹೇಳಿದ್ದರು.
ಸಮರ್ಥ್ ಕೇವಲ ಹೆಸರಷ್ಟೇ, ನಮ್ಮ ಕರ್ತವ್ಯ ನಾವು ನಿಭಾಯಿಸಬೇಕಲ್ಲವೇ ಎಂದು ಸಲೀಂ ಅಹಮದ್ ತಿರುಗೇಟು ನೀಡಿದರು. ಚುನಾವಣೆ ಆದ ತಕ್ಷಣ ಧನ್ಯವಾದ ಹೇಳೋದು ನಮ್ಮ ಪಕ್ಷದ ಸಂಪ್ರದಾಯ. ದಾವಣಗೆರೆಯಲ್ಲಿ ನೀತಿ ಸಂಹಿತೆ ಇದ್ದ ಕಾರಣ ಅಲ್ಲಿ ಸುದ್ದಿಗೋಷ್ಠಿ ಮಾಡಲಿಲ್ಲ. ಕೆಪಿಸಿಸಿಯಲ್ಲಿ ಅಲ್ಪಸಂಖ್ಯಾತ ಎಲ್ಲಾ ನಾಯಕರು ಬಂದು ಸುದ್ದಿಗೋಷ್ಠಿ ನಡೆಸಿದ್ದೆವು. ತರಾತುರಿಯಲ್ಲಿ ಸುದ್ದಿಗೋಷ್ಠಿ ಕರೆದಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.