
ಕನ್ನಡಪ್ರಭ ವಾರ್ತೆ ಬೆಂಗಳೂರು (ಏ.13): ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿರಿಯ ಶಾಸಕರ ಒತ್ತಡ ತೀವ್ರಗೊಂಡಿದೆ. ಪುನಾರಚನೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್‌ನ 25 ಮಂದಿ ಹಿರಿಯ ಶಾಸಕರು ವರಿಷ್ಠರನ್ನು ಭೇಟಿ ಮಾಡಲು ಭಾನುವಾರ ಸಂಜೆ ದೆಹಲಿಗೆ ತಲುಪಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸುವ ಹೊಸ್ತಿಲಲ್ಲಿ ನಿಂತಿದೆ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಉಪಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.
ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಪಟ್ಟಣ್, ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಭಾನುವಾರ ಸಂಜೆ ಶಾಸಕರ ತಂಡ ಬೆಂಗಳೂರಿನಿಂದ ದೆಹಲಿಗೆ ತಲುಪಿದೆ. ಈ ತಂಡದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರ ಆಪ್ತ ವಲಯದ ಶಾಸಕರೂ ಇದ್ದಾರೆ.
ಶಾಸಕರು 2-3 ದಿನ ದೆಹಲಿಯಲ್ಲೇ ಉಳಿದುಕೊಂಡು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಭೇಟಿ ಮಾಡಲು ಉದ್ದೇಶಿಸಿದ್ದಾರೆ. ಅವಕಾಶ ಸಿಕ್ಕರೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರನ್ನೂ ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಸಂಪುಟದಲ್ಲಿರುವ ಸುಮಾರು 20 ಹಿರಿಯ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಮತ್ತು ಸತತವಾಗಿ ಗೆಲ್ಲುತ್ತಾ ಬಂದಿರುವ ಶಾಸಕರಿಗೆ ಅವಕಾಶ ನೀಡುವಂತೆ ಮನವಿ ಮಾಡುವ ಸಾಧ್ಯತೆಯಿದೆ. ಹಿರಿಯ ಸದಸ್ಯರು ಸೇರಿ ಪರಿಷತ್ ಸದಸ್ಯರು, ಹೊಸದಾಗಿ ಆಯ್ಕೆಯಾದ ಶಾಸಕರು ಪ್ರತ್ಯೇಕ ಸಭೆ ನಡೆಸಿ ಪುನಾರಚನೆ ಮಾಡಿ ತಮಗೆ ಸ್ಥಾನ ನೀಡಬೇಕೆಂದು ಹಲವು ಬಾರಿ ಮನವಿ ಮಾಡಿದ್ದರು.
ನಾಯಕತ್ವ ಬದಲಾವಣೆ ಬೇಡಿಕೆಯ ಗೊಂದಲ, ಬೇರೆ ಬೇರೆ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಿದ್ದೂ ಸೇರಿ ವಿವಿಧ ಕಾರಣಗಳಿಂದ ಸಂಪುಟ ಪುನಾರಚನೆ ಪ್ರಕ್ರಿಯೆಯನ್ನು ಹೈಕಮಾಂಡ್ ಮುಂದೂಡುತ್ತಾ ಬಂದಿದೆ.
ಈಗ ಮುಂಬರುವ ಪಂಚಾಯತಿ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಮುನ್ನ ಸಂಪುಟ ಪುನಾರಚನೆ ಮಾಡುವಂತೆ ಒತ್ತಡ ಹೇರಲು ಶಾಸಕರು ಮುಂದಾಗಿದ್ದಾರೆ. ಹಲವು ಹಿರಿಯ ಸಚಿವರು ನಿಷ್ಕ್ರಿಯರಾಗಿದ್ದಾರೆ. ಈ ಬಗ್ಗೆ ಸಿಎಲ್‌ಪಿಯಲ್ಲೂ ಹಲವು ಬಾರಿ ಪ್ರಸ್ತಾಪವಾಗಿದೆ ಎಂಬುದನ್ನೂ ಈ ವೇಳೆ ಗಮನಕ್ಕೆ ತರುವ ಸಾಧ್ಯತೆಯಿದೆ ಎನ್ನಲಾಗಿದೆ.
ದೆಹಲಿಗೆ ತೆರಳುವ ಮೊದಲು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ‘ಒಂದು ವರ್ಷದ ಬಳಿಕ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿಗಳು ನನಗೆ ಹೇಳಿದ್ದರು. ಎರಡು ವರ್ಷದ ನಂತರ ಅನುಕೂಲ ಮಾಡಿಕೊಡುತ್ತೇವೆಂದು ಪಕ್ಷದ ನಾಯಕರು ಈ ಹಿಂದೆ ಹೇಳಿದ್ದರು. ಆದರೆ ಇನ್ನೂ ಏನೂ ಆಗಿಲ್ಲ. ನಮ್ಮಲ್ಲಿರುವ ವ್ಯತ್ಯಾಸಗಳ ಬಗ್ಗೆ ತಿಳಿಸಲು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದೇವೆ’ ಎಂದರು.
ಅಶೋಕ್ ಎಂ.ಪಟ್ಟಣ್ ಮಾತನಾಡಿ, ‘ಸಂಪುಟ ಪುನಾರಚನೆ ಕುರಿತು ಬೇಡಿಕೆ ಸಲ್ಲಿಸಲು ದೆಹಲಿಗೆ ಹೋಗುವುದಾಗಿ ಅಧಿವೇಶನದ ಸಮಯದಲ್ಲೇ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೆವು. ನಾವು 3–4 ದಿನ ದೆಹಲಿಯಲ್ಲಿ ಉಳಿಯುತ್ತೇವೆ. ವೇಣುಗೋಪಾಲ್, ಸುರ್ಜೇವಾಲಾ ಸೇರಿ ಕೆಲವು ಹೈಕಮಾಂಡ್ ನಾಯಕರನ್ನು ಭೇಟಿ ಆಗುತ್ತೇವೆ’ ಎಂದರು.
ಕಾಂಗ್ರೆಸ್ ಹಿರಿಯ ಶಾಸಕ ಪಿ.ಎಂ ನರೇಂದ್ರ ಸ್ವಾಮಿ ಮಾತನಾಡಿ, ದೆಹಲಿಗೆ ನನಗೂ ಆಹ್ವಾನ ಬಂದಿತ್ತು, ನಾನು ಮಗಳ ಮದುವೆ ಕಾರ್ಯದ ಒತ್ತಡದಲ್ಲಿದ್ದೇನೆ. ನಾನೂ ಒಂದು ದಿನ ದೆಹಲಿಗೆ ಹೋಗುತ್ತೇನೆ. ಕಾಂಗ್ರೆಸ್ಸಿಗನಾಗಿ ನಾನೂ ಆಕಾಂಕ್ಷಿಯಾಗಿದ್ದೇನೆ. ನಾನು ವಿದ್ಯಾರ್ಥಿ ನಾಯಕತ್ವದಿಂದ ಬೆಳೆದು ಬಂದವನು. ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ ಎಂದರು.
ನಾವು ರಾಹುಲ್‌ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೆ ದೆಹಲಿಗೆ ಹೋಗುತ್ತಿದ್ದೇವೆ. ಸಂಪುಟ ಪುನಾರಚನೆ ಆಗಬೇಕು ಎಂಬುದು ನಮ್ಮ ಬೇಡಿಕೆ. ನಾನು ತುಮಕೂರು ಜಿಲ್ಲೆಯಲ್ಲೇ ಮೂರು ಬಾರಿ ಗೆದ್ದಿದ್ದೇನೆ. ಪರಮೇಶ್ವರ್, ರಾಜಣ್ಣ ಸೇರಿ ಹಲವರಿಗೆ ಅವಕಾಶ ಸಿಕ್ಕಿದೆ. ಈ ಬಾರಿ ನನಗೂ ಅವಕಾಶ ಸಿಗಬೇಕು ಎಂಬುದು ನಮ್ಮ ಬೇಡಿಕೆ. ನಾವು ನಾಯಕತ್ವ ವಿಷಯ ಚರ್ಚೆ ಮಾಡುವುದಿಲ್ಲ ಎಂದು ಶಾಸಕ ಕೆ. ಷಡಕ್ಷರಿ ಹೇಳಿದ್ದಾರೆ.
ಭಾನುವಾರ ಸಂಜೆ ವೇಳೆಗೆ 25 ಮಂದಿ ದೆಹಲಿಗೆ ತಲುಪಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಪುಟ್ಟರಂಗಶೆಟ್ಟಿ, ಹಂಪನಗೌಡ ಬಾದರ್ಲಿ, ಡಿ.ಜಿ.ಶಾಂತನಗೌಡ, ಜೆ.ಟಿ.ಪಾಟೀಲ, ಎ.ಆರ್.ಕೃಷ್ಣ ಮೂರ್ತಿ, ಪ್ರಸಾದ್ ಅಬ್ಬಯ್ಯ, ಯಶವಂತರಾಯ ಗೌಡ ಪಾಟೀಲ, ಕೆ.ಷಡಕ್ಷರಿ, ಟಿ.ಬಿ.ಜಯಚಂದ್ರ, ಅಶೋಕ್ ಪಟ್ಟಣ, ಎಸ್.ಎನ್.ನಾರಾಯಣ ಸ್ವಾಮಿ, ಲಕ್ಷ್ಮಣ ಸವದಿ, ಅಪ್ಪಾಜಿ ನಾಡಗೌಡ, ರಿಜ್ವಾನ್ ಅರ್ಷದ್, ರಮೇಶ್ ಬಂಡಿಸಿದ್ದೇಗೌಡ , ಬಿ.ಶಿವಣ್ಣ, ಪಿ.ಎಂ.ನರೇಂದ್ರ ಸ್ವಾಮಿ, ವಿನಯ್ ಕುಲಕರ್ಣಿ, ರಾಘವೇಂದ್ರ ಹಿಟ್ನಾಳ್ , ಬೇಳೂರು ಗೋಪಾಲಕೃಷ್ಣ ಅವರೂ ತೆರಳಿರುವುದಾಗಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.