ಆ ಮುಸ್ಲಿಂ ಮಹಾನಾಯಕನ ವಿರುದ್ಧ ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌ ವಾಗ್ದಾಳಿ

Published : Apr 13, 2026, 05:53 AM IST
rizwan arshad

ಸಾರಾಂಶ

ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರು, ಪಕ್ಷದ ಹಿರಿಯ ನಾಯಕರೊಬ್ಬರು ಬಿಜೆಪಿ ಗೆಲ್ಲಿಸಲು 'ಡಬಲ್ ಗೇಮ್' ಆಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ಏ.13): ‘ಕೆಲವರು ನಾನೇ ಹೆಚ್ಚು, ನಾನು ಇಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಮತ್ತೊಬ್ಬ ನಾಯಕ ಇಲ್ಲ ಎಂಬ ಭಾವನೆಯಲ್ಲಿದ್ದಾರೆ. ನಾವು ಬಿಜೆಪಿ ಸೋಲಿಸಲು ಹೋದರೆ ನಮ್ಮಲ್ಲಿನ ಕೆಲವರು ಡಬಲ್‌ ಗೇಮ್‌ ಆಡಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನಿಸಿದರು’ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕ ರಿಜ್ವಾನ್‌ ಅರ್ಷದ್‌ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಜಮೀರ್ ಅಹಮದ್‌ ಖಾನ್‌ ಅವರತ್ತ ಚಾಟಿ ಬೀಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರು ಅಬ್ದುಲ್‌ ಜಬ್ಬಾರ್ ಅವರಿಗೆ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದರು. ಮುಖ್ಯಮಂತ್ರಿಗಳ ಮುಂದೆಯೂ ಅದೇ ‘ಒಬ್ಬ ನಾಯಕರು’, ಕೊಟ್ಟರೆ ಜಬ್ಬಾರ್‌ಗೆ ಕೊಡಿ ಎಂದರು. ಜಬ್ಬಾರ್‌ ಅವರು ಇಲ್ಲದಿದ್ದರೆ ಬೇರೆ ಮುಸ್ಲಿಂ ಆಕಾಂಕ್ಷಿಗಳು ಇರಲಿಲ್ಲವೇ? ಒಬ್ಬ ವ್ಯಕ್ತಿಯ ಪರ ನಿಂತು ಸಮುದಾಯದ ಪರ ಎಂದು ಹೇಳಿಕೊಳ್ಳುವುದು ಸರಿಯೇ? ಟಿಕೆಟ್‌ ನೀಡಲಿಲ್ಲ ಎಂದು ಕಾಂಗ್ರೆಸ್‌ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದೆ ಎಂದು ಅಪಪ್ರಚಾರ ಮಾಡುವುದು ಸರಿಯೇ’ ಎಂದು ಕಿಡಿಕಾರಿದರು.

ಜಬ್ಬಾರ್‌ ಅವರ ಪರ ಪಟ್ಟು ಹಿಡಿದಿದ್ದು ಯಾರು ಎಂಬ ಪ್ರಶ್ನೆಗೆ, ‘ಅವರು ಯಾರು ಎಂಬುದನ್ನು ನೀವೇ ತಿಳಿದುಕೊಳ್ಳಿ. ದಾವಣಗೆರೆ ದಕ್ಷಿಣ ಕ್ಷೇತ್ರದ ಪ್ರಚಾರಕ್ಕೆ ಬಾರದವರು ಮೂವರು. ಒಬ್ಬರ ಮೇಲೆ ಕ್ರಮ ಆಗಿದೆ. ಇನ್ನಿಬ್ಬರು ಇದ್ದಾರಲ್ಲ? ಅದರಲ್ಲಿ ಯಾರು ಜಬ್ಬಾರ್‌ಗೆ ಟಿಕೆಟ್‌ ಕೊಡಿಸಬೇಕು ಎಂದು ಪಟ್ಟು ಹಿಡಿದರೋ ಅವರು ಇಬ್ಬರಲ್ಲಿ ಇಬ್ಬರು’ ಎಂದು ಪರೋಕ್ಷವಾಗಿ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಜಮೀರ್ ಅಹಮದ್‌ ಖಾನ್‌ ವಿರುದ್ಧ ಆರೋಪ ಮಾಡಿದರು.

ಬಿಜೆಪಿ ಗೆಲ್ಲಿಸಲು ಯತ್ನಿಸಿದರು

ಯಾರು ಮತ ವಿಭಜಿಸಿ ಬಿಜೆಪಿ ಗೆಲ್ಲಿಸಬೇಕು ಎಂದು ಪ್ರಯತ್ನ ಪಟ್ಟರು ಎಂಬುದು ಗೊತ್ತಿದೆ. ಅವರ ಪ್ರಯತ್ನ ಯಾವುದೇ ಫಲ ನೀಡಿಲ್ಲ. ಕೆಲವರು ನಾನೇ ಹೆಚ್ಚು, ನಾನು ಇಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಇನ್ಬೊಬ್ಬ ನಾಯಕ ಇಲ್ಲ ಎನ್ನುವ ಭಾವನೆಯಲ್ಲಿದ್ದಾರೆ. ಇದರಿಂದಲೇ ಮುಸ್ಲಿಂ ನಾಯಕ ಪಟ್ಟಕ್ಕೆ ಧಕ್ಕೆ ಬಂದಿದೆ. ಯಾವ ಮುಸ್ಲಿಂ ನಾಯಕರು ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಿದರು ಎಂಬ ಬಗ್ಗೆ ಹೈಕಮಾಂಡ್‌ಗೆ ಗೊತ್ತಿದೆ. ನಾವು ಬಿಜೆಪಿ ಸೋಲಿಸಲು ಹೋಗಿದ್ದೆವು. ಆದರೆ ನಮ್ಮಲ್ಲಿ ಕೆಲವರು ಡಬಲ್‌ ಗೇಮ್‌ ಆಡಿದರು ಎಂದು ರಿಜ್ವಾನ್‌ ಆರೋಪ ಮಾಡಿದರು.

ಅಬ್ದುಲ್‌ ಜಬ್ಬಾರ್‌ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಬ್ದುಲ್‌ ಜಬ್ಬಾರ್‌ ಅವರ ರಾಜೀನಾಮೆ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಅವರ ಪತ್ರದಲ್ಲಿ ಮೂರನೇ ತಾರೀಖು ಎಂದು ಇದೆ. ಬಹುಶಃ ಕಾಂಗ್ರೆಸ್‌ಗೆ ಹಿನ್ನಡೆ ಆಗಲಿ ಎಂದು ಆಗಲೇ ರಾಜೀನಾಮೆ ಬರೆದಿಟ್ಟುಕೊಂಡಿದ್ದರೋ ಏನೋ ಗೊತ್ತಿಲ್ಲ ಎಂದು ದೂರಿದರು.

ಜಬ್ಬಾರ್‌ ರಾಜೀನಾಮೆ ಅಂಗೀಕಾರ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕವೇ ವಿಸರ್ಜನೆ

ಕನ್ನಡಪ್ರಭ ವಾರ್ತೆ ಬೆಂಗಳೂರು (ಏ.13): ದಾವಣಗೆರೆ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಗೊಂದಲ ಹಿನ್ನೆಲೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ವಿಧಾನಪರಿಷತ್‌ ಸದಸ್ಯ ಅಬ್ದುಲ್ ಜಬ್ಬಾರ್ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಭಾಗದ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ. ಅಬ್ದುಲ್ ಜಬ್ಬಾರ್ ನೇತೃತ್ವದಲ್ಲಿ ರಚಿಸಲಾಗಿದ್ದ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ ಎಂದು ಶಿವಕುಮಾರ್ ಅವರು ಭಾನುವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ‘ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ನೂತನ ಸಮಿತಿಯನ್ನು ಶೀಘ್ರ ರಚನೆ ಮಾಡಲು ಕ್ರಮ ವಹಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ನಾಯಕರ ಸಾಮೂಹಿಕ ರಾಜೀನಾಮೆ

ದಾವಣಗೆರೆ (ಏ.13): ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್‌ಸಿ ಕೆ.ಅಬ್ದುಲ್ ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸುವುದರೊಂದಿಗೆ ಪಕ್ಷದಲ್ಲಿ ಇದೀಗ ರಾಜೀನಾಮೆ ಪರ್ವ ಶುರುವಾಗಿದೆ. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್‌, ಕಾರ್ಯದರ್ಶಿ ಅಬ್ದುಲ್ ಘನಿ ತಾಹೀರ್ ಈ ವಿಷಯ ತಿಳಿಸಿದರು. ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ ಪಕ್ಷದ ಅಲ್ಪಸಂಖ್ಯಾತರ ವಿಭಾಗದಿಂದ ಪಕ್ಷದ ಗೆಲುವಿಗಾಗಿ ಅಬ್ದುಲ್ ಜಬ್ಬಾರ್‌ ಸೂಚನೆಯಂತೆ ದುಡಿದ್ದೇವೆ. ಜಬ್ಬಾರ್ ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ ನಾವು ಸಾಮಾಹಿಕ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಕಳಿಸಿ ಕೊಡಲಿದ್ದೇವೆ. ಸಾಮಾನ್ಯ ಕಾರ್ಯಕರ್ತರಾಗಿ ಮುಂದುವರಿಯುತ್ತೇವೆ ಎಂದರು.

ದಕ್ಷಿಣ ಕ್ಷೇತ್ರದ ಟಿಕೆಟನ್ನು ಅಲ್ಪಸಂಖ್ಯಾತರು, ಅಹಿಂದ ಅಥವಾ ಪಂಚಮಸಾಲಿ ಸಮುದಾಯಕ್ಕೆ ನೀಡುವಂತೆ ಕೇಳಿದ್ದಕ್ಕೆ ಅಬ್ದುಲ್ ಜಬ್ಬಾರ್‌ಗೆ ಗುರಿಯಾಗಿಸಿಕೊಂಡು ಪಕ್ಷದ ರಾಜ್ಯ ಮುಖಂಡರು ಎನಿಸಿಕೊಂಡವರು ಮಿಥ್ಯಾರೋಪ ಮಾಡುತ್ತಿದ್ದಾರೆ ಎಂದು ದೂರಿದರು.ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್‌, ಕಾರ್ಯದರ್ಶಿಗಳಾದ ಅಬ್ದುಲ್ ಘನಿ ತಾಹೀರ್‌, ಹುಸೇನ್ ಉಕ್ಕಡಗಾತ್ರಿ, ಉಬೇದುಲ್ಲಾ ರಾಜೀನಾಮೆ ನೀಡಿದ್ದೇವೆ. ಜಿಲ್ಲಾ ಕಾರ್ಯಾಧ್ಯಕ್ಷ ಎ.ಅಬ್ದುಲ್ ಜಬ್ಬಾರ್‌, ಕಾರ್ಯದರ್ಶಿ ಆಸೀಫ್ ಜುನೈದಿ, ನೂರ್ ಅಹಮ್ಮದ್‌ ಸೇರಿದಂತೆ ಅನೇಕರು ಸಾಮೂಹಿಕ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಪುಟದಲ್ಲಿ ಬದಲಾವಣೆ? ಸಚಿವ ಸ್ಥಾನಕ್ಕಾಗಿ 25 ಕೈ ಶಾಸಕರ ದಿಲ್ಲಿ ಚಲೋ
ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ