
ಹಾವೇರಿ (ಮೇ.09): ಇತ್ತೀಚೆಗೆ ನಡೆದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಜನರು ನಮಗೆ ಆಶೀರ್ವಾದ ಮಾಡಿದ್ದು, 2028ಕ್ಕೆ ರಾಜ್ಯದಲ್ಲಿ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಇದು ದಿಕ್ಸೂಚಿಯಾಗಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಈ ಫಲಿತಾಂಶ ಮುಂದಿನ 2028ರ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದಿದ್ದರು.
ಆದರೆ ರಾಜ್ಯದಲ್ಲಿ ನಡೆದ ಎಲ್ಲ ಉಪಚುನಾವಣೆಗಳಲ್ಲೂ ನಾವೇ ಗೆದ್ದಿದ್ದೇವೆ. ಅವರದೇ ಮಾತಿನಂತೆ ಈ ಫಲಿತಾಂಶ ಮುಂಬರುವ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನಾಯಕತ್ವದ ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಗ್ಯಾರಂಟಿಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಿವೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ನಮಗೆ ಜವಾಬ್ದಾರಿ ಕೊಟ್ಟಿದ್ದರು. ಆ ಕೆಲಸವನ್ನು ನಾವು ಮಾಡಿದ್ದೇವೆ.
ದಾವಣಗೆರೆಯಲ್ಲಿ 35 ಸಾವಿರ ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ವೋಟು ಹಾಕಿದ್ದು, ಅಲ್ಪಸಂಖ್ಯಾತರ ಜತೆಗೆ ಎಲ್ಲ ಸಮುದಾಯದ ಮತದಾರರು ನಮಗೆ ವೋಟು ಹಾಕಿದ್ದಾರೆ. 2028ರಲ್ಲಿ ಮತ್ತೆ ನಾವೇ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು. ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿಯವರು ಸಂಪೂರ್ಣ ಗ್ಯಾರಂಟಿಗಳನ್ನು ನಿಲ್ಲಿಸಿ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಸಲೀಂ, ರಾಜ್ಯದಲ್ಲಿ ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಆಗುತ್ತಿದೆ. ಮುಂದೆಯೂ ರಾಜ್ಯದ ಜನರು ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಷಡ್ಯಂತ್ರ ಮಾಡಿ ಗೆಲುವು...
2023ರ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ನಾವು ಗೆದ್ದಿದ್ದೆವು. ಆದರೆ ಷಡ್ಯಂತ್ರ ಮಾಡಿ ಈಗ ಬಿಜೆಪಿ ಗೆಲ್ಲಿಸಿದ್ದಾರೆ. ಮರು ಎಣಿಕೆ ಮಾಡಲು ಕೋರ್ಟ್ ಆದೇಶಿಸಿತ್ತು. ಮತ ಎಣಿಕೆ ಮಾಡಿ ಕೋರ್ಟ್‌ಗೆ ಫಲಿತಾಂಶ ನೀಡಬೇಕಿತ್ತು. ಆದರೆ, ಬಹಿರಂಗವಾಗಿ ಫಲಿತಾಂಶ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡುತ್ತೇವೆ. ಬ್ಯಾಲೆಟ್ ಪೇಪರ್ ತಿದ್ದಿ ಸೋತವರನ್ನು ಗೆಲ್ಲಿಸಿದ್ದು, ಬಿಜೆಪಿ ವೋಟು ಚೋರಿ ಪಾರ್ಟಿ ಎಂದು ಟೀಕಿಸಿದರು. ಬೆಂಗಳೂರು ಸೆಂಟ್ರಲ್‌ನಲ್ಲಿ ಮತ ಕಳ್ಳತನ ಮಾಡಿರುವುದನ್ನು ನಾವು ತೋರಿಸಿದ್ದೆವು. ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳಿರುತ್ತವೆ. ಅವುಗಳನ್ನು ತೆಗೆದು ನೋಡಬೇಕು. ಷಡ್ಯಂತ್ರ ಮಾಡಿ ಬಿಜೆಪಿ ಗೆಲ್ಲಿಸಿದ್ದಾರೆ ಎಂದು ದೂರಿದರು.
ರಾಜ್ಯಪಾಲರಿಂದ ರಾಜಕೀಯ...
ತಮಿಳುನಾಡಿನಲ್ಲಿ ದೊಡ್ಡಪಕ್ಷವಾಗಿ ಹೊರ ಹೊಮ್ಮಿರುವ ವಿಜಯ್ ಅವರಿಗೆ ಸರ್ಕಾರ ಅವಕಾಶ ನೀಡದೇ ರಾಜ್ಯಪಾಲರು ರಾಜಕಾರಣ ಮಾಡಿ ಅತಂತ್ರ ಮಾಡಿದ್ದಾರೆ. ರಾಜ್ಯಪಾಲರು ದೊಡ್ಡ ಪಕ್ಷವನ್ನು ಕರೆದು ಬಹುಮತ ಸಾಬೀತಿಗೆ ಅವಕಾಶ ಕೊಡಬೇಕಿತ್ತು. ಆದರೆ, ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಅವಕಾಶ ಕೊಡದೆ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ರಾಜ್ಯಪಾಲರ ಕೆಲಸ ರಾಜಕೀಯ ಪ್ರೇರಿತವಾಗಿದೆ. ವಿಜಯ ಅವರನ್ನು ಸಿಎಂ ಮಾಡಬಾರದು ಎಂಬುದು ಕೇಂದ್ರ ಸರ್ಕಾರದ ಷಡ್ಯಂತ್ರ ಎಂದು ಕಿಡಿಕಾರಿದರು.
ಬಹುಶಃ ಈ ತಿಂಗಳಲ್ಲಿ ಸಂಪುಟ ಪುನಾರಚನೆ ಆಗಬಹುದು. ಸಿಎಂ, ಡಿಸಿಎಂ ಸೇರಿದಂತೆ ಹೈಕಮಾಂಡ್ ನಾಯಕರು ಸೇರಿ ಅಂತಿಮ ತೀರ್ಮಾನ ಮಾಡುತ್ತಾರೆ. ಆದಷ್ಟು ಬೇಗ ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಹುಮತವನ್ನು ರಾಜಭವನದಲ್ಲಿ ಸಾಬೀತು ಪಡಿಸಬೇಕಿಲ್ಲ, ಚುನಾವಣೆಯಲ್ಲಿ ಗೆದ್ದಿರುವ ದೊಡ್ಡ ಪಕ್ಷವನ್ನು ಕರೆದು ಸರ್ಕಾರ ರಚಿಸಲು ಅವಕಾಶ ಕೊಟ್ಟು, ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿದೆ. ಆ ಪ್ರಕಾರ ತಮಿಳುನಾಡು ರಾಜ್ಯಪಾಲರು ನಡೆದುಕೊಳ್ಳಬೇಕು ಎಂದು ವಿಪ ಮುಖ್ಯಸಚೇತಕ ಸಲೀಂ ಅಹ್ಮದ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.