
ವಿಧಾನಸಭೆ (ಆ.23): ಸರ್ಕಾರಿ ಶಾಲೆಗಳನ್ನು ಸಬಲಗೊಳಿಸಿ, ಶಾಲೆಗಳ ಮೇಲೆ ಜನರಲ್ಲಿ ವಿಶ್ವಾಸಾರ್ಹತೆ ಹೆಚ್ಚುವಂತೆ ಮಾಡಬೇಕು ಎಂದು ಬಿಜೆಪಿ ಶಾಸಕ ಎಸ್. ಸುರೇಶ್‌ಕುಮಾರ್ ಆಗ್ರಹಿಸಿದರು. ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಕುರಿತು ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸರ್ಕಾರಿ ಶಾಲಾ ಮಕ್ಕಳ ಸಾಧನೆಗಳನ್ನು ಉದಾಹರಣೆ ಸಹಿತ ವಿವರಿಸಿ ಮಾತನಾಡಿದ ಸುರೇಶ್‌ಕುಮಾರ್, ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆಯಿದ್ದರೂ, ಅಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿ ಪ್ರತಿಭೆ ಕಡಿಮೆಯಿಲ್ಲ.
ಹಲವು ಮಕ್ಕಳು ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳ ವಿಶ್ವಾಸಾರ್ಹತೆ ಜಾಸ್ತಿಯಾಗಿ, ಹೆಚ್ಚಿನ ಮಕ್ಕಳು ದಾಖಲಾಗುವಂತೆ ಮಾಡಬೇಕಿದೆ. ಶಿಕ್ಷಣ ಕ್ಷೇತ್ರವನ್ನು ಅನುತ್ಪಾದಕ ಕ್ಷೇತ್ರದಿಂದ ದೇಶದ ಭವಿಷ್ಯದ ಸತ್ಪ್ರಜೆಗಳನ್ನು ಸೃಷ್ಟಿಸುವ ಕ್ಷೇತ್ರ ಎಂದು ಪರಿಗಣಿಸಿ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂದರು. ರಾಜ್ಯದಲ್ಲಿನ 41 ಸಾವಿರ ಪ್ರಾಥಮಿಕ, 4 ಸಾವಿರಕ್ಕೂ ಹೆಚ್ಚಿನ ಪ್ರೌಢ ಶಾಲೆಗಳಿವೆ. ಅವುಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಿದೆ. ಅದನ್ನು ನೀಗಿಸಲು ಸರ್ಕಾರ ಮುಂದಾಗಬೇಕು.
ಸರ್ಕಾರಿ ಶಾಲೆಗಳ ಮೇಲೆ ಜನರಿಗೆ ಪ್ರೀತಿ ಬರುವಂತೆ ಮಾಡಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದ ಶಾಲೆಯನ್ನು ಆರಂಭಿಸಬೇಕು. ಶಾಸಕರು ವಾರಕ್ಕೊಮ್ಮೆ ಒಂದು ಶಾಲೆಗೆ ಹೋಗಿ ಅಲ್ಲಿನ ಮಕ್ಕಳು, ಪೋಷಕರು, ಶಿಕ್ಷಕರೊಂದಿಗೆ ಮಾತುಕತೆ ನಡೆಸಬೇಕು. ಆಗ ಜನರಿಗೆ ಸರ್ಕಾರಿ ಶಾಲೆ ಬಗ್ಗೆ ಆತ್ಮಸ್ಥೈರ್ಯ ಬರುತ್ತದೆ. ಖಾಸಗಿ ಶಾಲೆಗಳ ಮೇಲಿನ ಮೃದು ಧೋರಣೆ ಬಿಟ್ಟು. ಸರ್ಕಾರಿ ಶಾಲೆಗಳನ್ನು ಸದೃಢಪಡಿಸಲು ಖಾಸಗಿ ಶಾಲೆಗಳ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಧೇಯಕಗಳು ಪರಿಷತ್‌ನಲ್ಲೂ ಪಾಸ್: ಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು ಹತ್ತು ವಿಧೇಯಕಗಳಿಗೆ ಬುಧವಾರ ವಿಧಾನ ಪರಿಷತ್ ಅಂಗೀಕಾರ ನೀಡಿತು. ಗಿಕ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ, ಬಾಲ್ಯ ನಿಶ್ಚಿತಾರ್ಥವನ್ನೂ ಅಪರಾಧವೆಂದು ಪರಿಗಣಿಸಿ, ಶಿಕ್ಷೆ ವಿಧಿಸುವ 2025ನೇ ಸಾಲಿನ ‘ಬಾಲ್ಯ ವಿವಾಹ ನಿಶೇಷ (ಕರ್ನಾಟಕ ತಿದ್ದುಪಡಿ) ವಿಧೇಯಕ’, ಸಾರಿಗೆ ನೌಕರರರವನ್ನು ಇನ್ನೂ 10 ವರ್ಷ ನಿರ್ಬಂಧಿಸುವ ‘ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ತಿದ್ದುಪಡಿ ವಿಧೇಯಕ’, ಕಡಿಮೆ ವಿಸ್ತೀರ್ಣದ ಕಟ್ಟಡಗಳಿಗೆ ಸಿಸಿ, ಒಸಿ ವಿನಾಯಿತಿ ನೀಡುವ ‘ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ’, ನಗರ ಪಾಲಿಕೆಗಳಿಗೆ ಆಯುಕ್ತಾಲಯ ಸೃಜಿಸುವುದು ಸೇರಿ ಆಡಳಿತ ಸುಧಾರಣೆಗೆ ತಂದಿರುವ ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಮತ್ತು ಕೆಲವು ಇತರೆ ಕಾನೂನುಗಳ ತಿದ್ದುಪಡಿ ವಿಧೇಯಕ’.
ದೇವದಾಸಿಯರು ಸರ್ಕಾರದ ಸೌಲಭ್ಯ, ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ತಂದೆ ಹೆಸರು ತುಂಬುವುದನ್ನು ಕಡ್ಡಾಯಗೊಳಿಸದ ಅಥವಾ ಅವರಿಷ್ಟಕ್ಕೆ ಬಿಡುವ ‘ಕರ್ನಾಟಕ ದೇವದಾಸಿ (ಪ್ರತಿಬಂಧಕ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ವಿಧೇಯಕ’, ಸರ್ಕಾರಿ ಕೋಟಾದ ವೈದ್ಯ ಸೀಟಿನಲ್ಲಿ ವ್ಯಾಸಂಗ ಮಾಡಿದವರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಹಾಗು ಗ್ರಾಮೀಣ ಆಸ್ಪತ್ರೆಗಳಿಗೆ ನಿಯೋಜಿಸಿ ಹೆಚ್ಚುವರಿಯಾದ ವೈದ್ಯರನ್ನು ನಗರ ಪ್ರದೇಶಕ್ಕೂ ನಿಯೋಜಿಸುವ ‘ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ’, ನಕಲಿ ವೈದ್ಯರನ್ನು ತಡೆಯಲು ತರಲಾಗಿರುವ ‘ಕರ್ನಾಟಕ ವೈದ್ಯಕೀಯ ನೋಂದಣಿ(ತಿದ್ದುಪಡಿ) ವಿಧೇಯಕ, ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ’ ಹಾಗೂ ಬೆಂಗಳೂರು ನಗರ ವಿವಿಗೆ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ಹೆಸರು ಇಡುವ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ದೊರೆಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.