Bharat Jodo Yatra: 18 ಸಮಿತಿಗಳಲ್ಲಿ ದೇಶಪಾಂಡೆಗೆ ಜಾಗವಿಲ್ಲ

By Govindaraj SFirst Published Sep 19, 2022, 5:00 AM IST
Highlights

ಭಾರತ ಐಕ್ಯತಾ ಯಾತ್ರೆಯನ್ನು ರಾಜ್ಯದಲ್ಲಿ ಯಶಸ್ವಿಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ಹಲವು ಹಿರಿಯ ನಾಯಕರಿಗೆ ವಿವಿಧ ಜವಾಬ್ದಾರಿ ನೀಡಿ 18 ಸಮಿತಿಗಳನ್ನು ರಚಿಸಿದ್ದಾರೆ. ಆದರೆ, ಹಿರಿಯ ನಾಯಕ ಆರ್‌.ವಿ.ದೇಶಪಾಂಡೆ ಅವರಿಗೆ ಯಾವುದೇ ಸಮಿತಿಯಲ್ಲೂ ಸ್ಥಾನ ನೀಡಿಲ್ಲ. 

ಬೆಂಗಳೂರು (ಸೆ.19): ಭಾರತ ಐಕ್ಯತಾ ಯಾತ್ರೆಯನ್ನು ರಾಜ್ಯದಲ್ಲಿ ಯಶಸ್ವಿಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ಹಲವು ಹಿರಿಯ ನಾಯಕರಿಗೆ ವಿವಿಧ ಜವಾಬ್ದಾರಿ ನೀಡಿ 18 ಸಮಿತಿಗಳನ್ನು ರಚಿಸಿದ್ದಾರೆ. ಆದರೆ, ಹಿರಿಯ ನಾಯಕ ಆರ್‌.ವಿ.ದೇಶಪಾಂಡೆ ಅವರಿಗೆ ಯಾವುದೇ ಸಮಿತಿಯಲ್ಲೂ ಸ್ಥಾನ ನೀಡಿಲ್ಲ. ದೇಶಪಾಂಡೆ ಅವರು ಯಾತ್ರೆಗೆ ತಮ್ಮ ಕ್ಷೇತ್ರದಿಂದ ಹೆಚ್ಚಿನ ಜನರನ್ನು ಕರೆತರಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದೇ ಅವರನ್ನು ಯಾವುದೇ ಸಮಿತಿಗೆ ನೇಮಿಸದೆ ಯಾತ್ರೆಯ ಉಸ್ತುವಾರಿಯಿಂದ ಕೈಬಿಟ್ಟಿರುವುದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ರಾಹುಲ್‌ ಯಾತ್ರೆಯನ್ನು ಸಂಪೂರ್ಣ ಯಶಸ್ವಿಗೊಳಿಸಲು ಹಿರಿಯ ನಾಯಕರ ನೇತೃತ್ವದಲ್ಲಿ ಹಲವು ಸಮಿತಿಗಳನ್ನು ರಚಿಸಿರುವುದಾಗಿ ಶನಿವಾರವಷ್ಟೇ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭಾನುವಾರ ಅಧಿಕೃತವಾಗಿ 18 ಸಮಿತಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಸಮಿತಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ರಾಮಲಿಂಗಾರೆಡ್ಡಿ, ಆರ್‌.ಧ್ರುವನಾರಾಯಣ, ಮಾಜಿ ಸಚಿವರಾದ ಎಚ್‌.ಸಿ.ಮಹದೇವಪ್ಪ, ದಿನೇಶ್‌ ಗುಂಡೂರಾವ್‌, ಡಾ.ಜಿ.ಪರಮೇಶ್ವರ್‌ ಸೇರಿದಂತೆ ವಿವಿಧ ನಾಯಕರಿಗೆ ಬೇರೆ ಬೇರೆ ಸಮಿತಿಗಳ ನೇತೃತ್ವ ವಹಿಸಿ ಯಾತ್ರೆ ಸಾಗುವ ಜಿಲ್ಲೆ, ಲೋಕಸಭಾ ಕ್ಷೇತ್ರಗಳು, ಯಾತ್ರೆಯ ಪ್ರತಿನಿತ್ಯದ ಸಭೆ, ವಾಸ್ತವ್ಯ, ಸಾರಿಗೆ ಸೇರಿದಂತೆ ಹೀಗೆ ವಿವಿಧ ಜವಾಬ್ದಾರಿ ವಹಿಸಲಾಗಿದೆ. ಆದರೆ, ದೇಶಪಾಂಡೆ ಅವರಿಗೆ ಯಾವುದೇ ಸಮಿತಿಯಲ್ಲೂ ಸ್ಥಾನ ನೀಡಿಲ್ಲ.

Mandya: ಡಿ.ಕೆ.ಶಿವಕುಮಾರ್‌​-ನಿಖಿಲ್‌ ಕುಮಾರಸ್ವಾಮಿ ಪರಸ್ಪರ ಮುಖಾಮುಖಿ

ಸಿದ್ದು ಯಾತ್ರೆ ಬಗ್ಗೆ ಎಂಬಿಪಾ ಸಮಿತಿ ನಿರ್ಧರಿಸುತ್ತೆ: ಭಾರತ್‌ ಜೋಡೋ ಯಾತ್ರೆ ಬಳಿಕ ಕಾಂಗ್ರೆಸ್‌ ರಾಜ್ಯದಲ್ಲಿ ಮತ್ತೊಂದು ಯಾತ್ರೆಗೆ ಸಜ್ಜಾಗುತ್ತಿರುವುದು ನಿಜ. ಆದರೆ, ಇದನ್ನು ಯಾವ ರೀತಿ ಮಾಡಬೇಕು ಎಂಬ ರೂಪರೇಷೆಯನ್ನು ಪಕ್ಷದ ಪ್ರಚಾರ ಸಮಿತಿ ನಿರ್ಧಾರ ಮಾಡುತ್ತದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷರುಗಳಾದ ಆರ್‌.ವಿ.ದೇಶಪಾಂಡೆ ಮತ್ತು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್‌ ಗುಂಡೂರಾವ್‌ ಅವರು, ಪಕ್ಷ ಮತ್ತೊಂದು ಯಾತ್ರೆಗೆ ಸಜ್ಜಾಗುತ್ತಿದೆಯಂತಲ್ಲ ಎಂಬ ಪ್ರಶ್ನೆಗೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಲು 224 ವಿಧಾನಸಭಾ ಕ್ಷೇತ್ರಗಳನ್ನೂ ತಲುಪುವಂತಹ ಕ್ಯಾಂಪೇನ್‌ ಮಾಡಬೇಕು ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ. ಭಾರತ್‌ ಜೋಡೋ ಯಾತ್ರೆ ಬಳಿಕ ಈ ಕ್ಯಾಂಪೇನ್‌ ನಡೆಸುವುದು. ಕ್ಯಾಂಪೇನ್‌ ಯಾವ ರೀತಿ ಮಾಡಬೇಕು, ಯಾವ್ಯಾವ ನಾಯಕರು ಏನೇನು ಮಾಡಬೇಕು ಎಂಬ ಎಲ್ಲವನ್ನೂ ಎಂ.ಬಿ.ಪಾಟೀಲ್‌ ಅವರ ಅಧ್ಯಕ್ಷತೆಯ ಪ್ರಚಾರ ಸಮಿತಿ ನಿರ್ಧರಿಸುತ್ತದೆ ಎಂದರು.

ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಥಯಾತ್ರೆಗೆ ಸಿದ್ಧತೆ ನಡೆದಿದೆಯಂತಲ್ಲ ಎಂಬ ಪ್ರಶ್ನೆಗೆ, ಸಿದ್ದರಾಮಯ್ಯ ಒಬ್ಬರೇ ಯಾತ್ರೆ ಮಾಡುತ್ತಾರೆ ಎಂಬುದು ಊಹಾಪೋಹ. ಅದಕ್ಕೆ ಉತ್ತರ ಕೊಡುವುದಿಲ್ಲ. ಸಿದ್ದರಾಮಯ್ಯ ಅವರು ಜನಪ್ರಿಯ ನಾಯಕರು, ಅವರ ನೇತೃತ್ವದಲ್ಲೂ ಆಗಬೇಕು, ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರು, ಅವರ ನೇತೃತ್ವದಲ್ಲೂ ಆಗಬೇಕು. ಅವರ ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇನ್ನೂ ಅನೇಕ ನಾಯಕರಿದ್ದಾರೆ. ಎಲ್ಲರೂ ಒಳಗೊಳ್ಳಬೇಕು. ಸಾಮೂಹಿಕ ನಾಯಕತ್ವದಿಂದ ಹೋದಾಗಲೇ ಪಕ್ಷದವನ್ನು ಅಧಿಕಾರಕ್ಕೆ ತರಲು ಸಾಧ್ಯ. ಇದರ ಅಂತಿಮ ರೂಪರೇಷೆಯನ್ನು ಪ್ರಚಾರ ಸಮಿತಿ ಸಿದ್ಧಪಡಿಸುತ್ತದೆ ಎಂದರು.

ಸಿದ್ದು, ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆ ಎಂಬುದು ಸುಳ್ಳು: ಪರಮೇಶ್ವರ್‌

ಮತ್ತೊಂದೆಡೆ ದೇಶಪಾಂಡೆ ಮಾತನಾಡಿ, ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಅವರು ಕೆಲಸ ಮಾಡುತ್ತಿದ್ದಾರೆ. ಅವರ ರಾರ‍ಯಲಿಗೆ ಎಲ್ಲರೂ ಸಹಕಾರ ನೀಡಬೇಕು. ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೆ ಅವರ ಗುರಿ ಎಂದರು. ಇದೇ ವೇಳೆ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಹೈಕಮಾಂಡ್‌ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಹೇಳಿದೆ. ಅದೇ ಅಂತಿಮ ಎಂದರು.

click me!