Rudrappa Lamani: ದಕ್ಕದ ಮಂತ್ರಿಗಿರಿ, ಬೇಡವೆಂದರೂ ಸಿಕ್ಕಿತು ಉಪಸಭಾಪತಿ ಸ್ಥಾನ !

By Kannadaprabha News  |  First Published Jul 9, 2023, 8:54 AM IST

ಜಿಲ್ಲೆಯಲ್ಲಿ ಐವರು ಕಾಂಗ್ರೆಸ್‌ ಶಾಸಕರು ಗೆದ್ದು ಪಕ್ಷ ಅಧಿಕಾರಕ್ಕೆ ಬಂದರೂ ಯಾರಿಗೂ ಮಂತ್ರಿಭಾಗ್ಯ ಸಿಗಲಿಲ್ಲ ಎಂಬ ಕೊರಗಿನಲ್ಲಿದ್ದ ಕೈ ಮುಖಂಡರು, ಕಾರ್ಯಕರ್ತರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಮಾಜಿ ಸಚಿವ, ಶಾಸಕ ರುದ್ರಪ್ಪ ಲಮಾಣಿ ಅವರನ್ನು ವಿಧಾನಸಭೆ ಉಪಾಧ್ಯಕ್ಷ ಮಾಡಲಾಗಿದೆ.


ನಾರಾಯಣ ಹೆಗಡೆ

ಹಾವೇರಿ (ಜು. 9) :  ಜಿಲ್ಲೆಯಲ್ಲಿ ಐವರು ಕಾಂಗ್ರೆಸ್‌ ಶಾಸಕರು ಗೆದ್ದು ಪಕ್ಷ ಅಧಿಕಾರಕ್ಕೆ ಬಂದರೂ ಯಾರಿಗೂ ಮಂತ್ರಿಭಾಗ್ಯ ಸಿಗಲಿಲ್ಲ ಎಂಬ ಕೊರಗಿನಲ್ಲಿದ್ದ ಕೈ ಮುಖಂಡರು, ಕಾರ್ಯಕರ್ತರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಮಾಜಿ ಸಚಿವ, ಶಾಸಕ ರುದ್ರಪ್ಪ ಲಮಾಣಿ(Rudrappa lamani) ಅವರನ್ನು ವಿಧಾನಸಭೆ ಉಪಾಧ್ಯಕ್ಷ ಮಾಡಲಾಗಿದೆ.

Tap to resize

Latest Videos

undefined

ಮಂತ್ರಿಸ್ಥಾನಕ್ಕಾಗಿ ಕಸರತ್ತು ಮಾಡಿದರೂ ಸಿಗದ್ದು ಈಗ ಬೇಡ ಎಂದರೂ ಸಾಂವಿಧಾನಿಕ ಗೌರವದ ಹುದ್ದೆ ವಿಧಾನಸಭೆ ಉಪಸಭಾಪತಿ ಕುರ್ಚಿಯಲ್ಲಿ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ ಅವರನ್ನು ಕೂರಿಸಲಾಗಿದೆ.

ನೀರಿನ ಸಮಸ್ಯೆ ಇನ್ನೆಷ್ಟು ದಿನ ಜೀವಂತ ಇಡುತ್ತೀರಿ?: ಅಧಿಕಾರಿಗಳಿಗೆ ಶಾಸಕ ರುದ್ರಪ್ಪ ಲಮಾಣಿ ತರಾಟೆ

ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಶಕ್ತಿ ಕೇಂದ್ರವಾಗುವ ಹಾವೇರಿ, ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಅನಾಥವಾಗುತ್ತೆ ಎಂಬ ಮಾತುಗಳು ಕಾಂಗ್ರೆಸ್‌ ಮುಖಂಡರಿಂದಲೇ ಬರುತ್ತಿದ್ದವು. ಜಿಲ್ಲೆಯಲ್ಲಿ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವಿ ಹಿರಿಯ ಶಾಸಕರೂ ಇದ್ದಾರೆ. ಆದರೂ ಸಚಿವ ಸ್ಥಾನ ನೀಡದಿರುವುದು ಸ್ವಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಬೇಸರ ಮೂಡಿಸಿತ್ತು.

ಸಮಾಧಾನಪಡಿಸಲು ಪ್ರಯತ್ನ:

ಹಾವೇರಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ಶಾಸಕ ರುದ್ರಪ್ಪ ಲಮಾಣಿ ಅವರು ಲಂಬಾಣಿ ಸಮುದಾಯದ ಏಕೈಕ ಕಾಂಗ್ರೆಸ್‌Ü ಶಾಸಕರು. ಮೂರು ಬಾರಿ ಶಾಸಕರಾಗಿರುವ ಅವರು ಕಳೆದ ಸರ್ಕಾರದ ಅವಧಿಯಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ಈ ಸಾರಿಯೂ ಅನಾಯಾಸವಾಗಿ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರ ಇತ್ತು. ಆದರೆ, ಅವರಿಗೆ ಕೊನೆ ಕ್ಷಣದಲ್ಲಿ ಮಂತ್ರಿಸ್ಥಾನ ಕೈತಪ್ಪಿತು.

ಒಳ ಮೀಸಲಾತಿ ವಿರೋಧಿಸಿ ಬಹುತೇಕ ಲಂಬಾಣಿ ಸಮುದಾಯ ಈ ಸಾರಿ ಕಾಂಗ್ರೆಸ್‌ ಬೆನ್ನಿಗೆ ನಿಂತಿತ್ತು. ಆದರೆ, ಏಕೈಕ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಸಾಕಷ್ಟುಅಪಸ್ವರ ಕೇಳಿ ಬಂದಿತ್ತು. ಈಗ ರುದ್ರಪ್ಪ ಲಮಾಣಿ ಅವರಿಗೆ ವಿಧಾನಸಭೆಯ ಉಪಾಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನಪಡಿಸುವ ಯತ್ನ ಮಾಡಲಾಗಿದೆ.

ಸ್ಪೀಕರ್‌, ಡೆಪ್ಯೂಟಿ ಭಾಗ್ಯ:

ಹಿರೇಕೆರೂರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿ.ಜಿ. ಬಣಕಾರ ಅವರು 1985-89ರ ಅವಧಿಯಲ್ಲಿ ವಿಧಾನಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದರು. ಕಳೆದ ಕಾಂಗ್ರೆಸ್‌ ಸರ್ಕಾರದ ಅವಧಿಯ ಆರಂಭದಲ್ಲಿ ಜಿಲ್ಲೆಗೆ ಮಂತ್ರಿಸ್ಥಾನ ಸೇರಿದಂತೆ ಯಾವುದೇ ಸ್ಥಾನಮಾನ ಕೊಟ್ಟಿರಲಿಲ್ಲ. ಬಳಿಕ 2016ರ ವೇಳೆಗೆ ರಾಣಿಬೆನ್ನೂರಿನ ಶಾಸಕ ಕೆ.ಬಿ. ಕೋಳಿವಾಡ ಅವರನ್ನು ವಿಧಾನಸಭೆ ಸ್ಪೀಕರ್‌ ಮಾಡಲಾಗಿತ್ತು. ಆಗ ರುದ್ರಪ್ಪ ಲಮಾಣಿ ಅವರಿಗೆ ಮಂತ್ರಿಸ್ಥಾನ ಒಲಿದು ಬಂದಿತ್ತು. ಕೆ.ಬಿ. ಕೋಳಿವಾಡ ಅವರು 2016ರ ಜುಲೈನಿಂದ 2018ರ ವರೆಗೆ ಸ್ಪೀಕರ್‌ ಆಗಿ ಕೆಲಸ ಮಾಡಿದ್ದರು. ಹಾನಗಲ್ಲ ಕ್ಷೇತ್ರದ ಶಾಸಕ ಮನೋಹರ ತಹಶೀಲ್ದಾರ್‌ ಅವರು ವಿಧಾನಸಭೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈಗ ರುದ್ರಪ್ಪ ಲಮಾಣಿಗೆ ಉಪಾಧ್ಯಕ್ಷ ಸ್ಥಾನ ಒಲಿದು ಬಂದಿದೆ.

 

Haveri assembly constituency: ಶಾಸಕ ಲಮಾಣಿ ಮೇಲಿದೆ ಅಭಿವೃದ್ಧಿ ಸವಾಲು!

ನಾನು ವಿಧಾನಸಭೆಯ ಉಪಾಧ್ಯಕ್ಷನಾಗುತ್ತೇನೆ ಎಂದುಕೊಂಡಿರಲಿಲ್ಲ, ಮಂತ್ರಿ ಆಗುವ ಆಸೆ ಇತ್ತು. ವಿಧಾನಸಭೆಯ 25ನೇ ಉಪಾಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಸಾಕಷ್ಟುಜವಾಬ್ದಾರಿಯಿದ್ದು, ಸರ್ಕಾರ ಎಡವಿದರೆ ಸರಿಪಡಿಸುವ ಕೆಲಸ ಮಾಡುತ್ತೇನೆ. ಮೊದಲ ಸಲ ಆಯ್ಕೆಯಾದ ಸದಸ್ಯರಿಗೆ ಹೆಚ್ಚಿನ ಅವಕಾಶ ಸಿಗಬೇಕಿದೆ. ಕೆಳಮಟ್ಟದಿಂದ ಬಂದ ನನ್ನನ್ನು ಈ ಗೌರವಯುತ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಸಚಿವನಾಗಲು ಆಗದಿದ್ದರೂ ಎಲ್ಲ ಸಚಿವರಿಗೆ ಆದೇಶ ಮಾಡುವ ಜವಾಬ್ದಾರಿ ಸ್ಥಾನ ಸಿಕ್ಕಿದೆ.

ರುದ್ರಪ್ಪ ಲಮಾಣಿ ವಿಧಾನಸಭೆ ಉಪಾಧ್ಯಕ್ಷ

2 ಸಾಂವಿಧಾನಿಕ ಹುದ್ದೆ

ಹಾವೇರಿ ಒಳಗೊಂಡಂತೆ ಅಖಂಡ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿರುವ ಸಲೀಂ ಅಹ್ಮದ್‌ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಅವರನ್ನು ವಿಧಾನಪರಿಷತ್‌ ಮುಖ್ಯ ಸಚೇತಕರನ್ನಾಗಿ ಆಯ್ಕೆ ಮಾಡಿ ಸಮಾಧಾನ ಪಡಿಸುವ ಪ್ರಯತ್ನವನ್ನು ಹೈಕಮಾಂಡ್‌ ಮಾಡಿದೆ. ಹೀಗಾಗಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗದಿದ್ದರೂ ಎರಡು ಸಾಂವಿಧಾನಿಕ ಹುದ್ದೆ ಸಿಕ್ಕಿರುವುದು ಕಾರ್ಯಕರ್ತರಲ್ಲಿ ಅಲ್ಪಮಟ್ಟಿಗೆ ಸಮಾಧಾನ ತಂದಿದೆ.

click me!