
ಬೆಂಗಳೂರು (ನ.11): ನೋಂದಣಿ ಮಾಡಿಕೊಂಡರೆ ಆದಾಯದ ಮೂಲ ಹೇಳಬೇಕಾಗುತ್ತದೆ. ಅನೇಕ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ನೋಂದಣಿ ಆಗುತ್ತಿಲ್ಲ. ಕಾನೂನು, ಸಂವಿಧಾನಕ್ಕೆ ತಾವು ಮೀರಿದವರು ಎಂದು ಅವರು ಬಯಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಆರ್‌ಎಸ್‌ಎಸ್ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ 1925ರಲ್ಲಿ ಸ್ಥಾಪನೆಯಾದ ಸಂಘವಾಗಿರುವುದರಿಂದ ನೋಂದಣಿ ಆಗಿಲ್ಲ ಎಂದು ಹೇಳಿದ್ದಾರೆ. 1947ರ ನಂತರ ಇವರು ಯಾಕೆ ನೋಂದಣಿ ಮಾಡಿಕೊಂಡಿಲ್ಲ? ಎಷ್ಟೊಂದು ಕುಟುಂಬ ಟ್ರಸ್ಟ್‌ಗಳು 150 ವರ್ಷದಿಂದ ನಡೆದುಕೊಂಡು ಬರುತ್ತಿವೆ. ಅವರೆಲ್ಲರೂ ಬ್ರಿಟಿಷರ ಹತ್ತಿರ ನೋಂದಣಿ ಮಾಡಿಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದರು.
ಅರಿವು ಕೇಂದ್ರಗಳು ಯುವಕರ ಭವಿಷ್ಯ ರೂಪಿಸುವ ಜ್ಞಾನ ಕೇಂದ್ರಗಳಾಗಬೇಕು, ಹಾಗಾದಾಗ ನಮ್ಮ ಪರಿಶ್ರಮ ಸಾರ್ಥಕವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು. ದೊಡ್ಡಜಾಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಅರಿವು ಕೇಂದ್ರ, ಸ್ತ್ರೀ ಶಕ್ತಿ ಭವನ, ನಮ್ಮ ಮೆಡಿಕಲ್, ನಮ್ಮ ಕ್ಲಿನಿಕ್ ಮತ್ತು ಬಸ್ ತಂಗುದಾಣ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಸರ್ಕಾರದಲ್ಲಿ ಗ್ರಂಥಾಲಯ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಕೇಂದ್ರಗಳನ್ನು ನಮ್ಮ ಸರ್ಕಾರ ಅರಿವು ಕೇಂದ್ರ ಎಂಬ ಹೊಸ ಹೆಸರಿನೊಂದಿಗೆ ಹೊಸ ಪರಿಕಲ್ಪನೆ ಮತ್ತು ಆಧುನಿಕ ಶೈಲಿಯಲ್ಲಿ ರೂಪಿಸುತ್ತಿದ್ದು, ಯುವ ಸಮುದಾಯದ ಜ್ಞಾನ ವೃದ್ಧಿಗೆ ಅಗತ್ಯವಿರುವ ಎಲ್ಲಾ ಸೌಕರ್ಯ ಮತ್ತು ಸವಲತ್ತುಗಳನ್ನು ಈ ಕೇಂದ್ರಗಳಲ್ಲಿ ಕಲ್ಪಿಸಲಾಗುತ್ತಿದೆ ಎಂದರು. ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಜ್ಞಾನಕ್ಕೆ ಎಲ್ಲಾ ರೀತಿಯ ಉತ್ತಮ ಅವಕಾಶಗಳ ಬಾಗಿಲು ತೆರೆಯುವ ಶಕ್ತಿಯಿದೆ.
ಲೋಕಾರ್ಪಣೆಗೊಳಿಸಿರುವ ಅರಿವು ಕೇಂದ್ರವನ್ನು ಯುವಜನತೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ರಾ.ಪಂ. ಅಧ್ಯಕ್ಷ ಆರ್. ಬೈರೇಗೌಡ, ಉಪಾಧ್ಯಕ್ಷೆ ಗೌರಮ್ಮ ಕೃಷ್ಣಪ್ಪ, ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಕುಮಾರ್ ಎನ್.ಕೆ.ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾದ ಅರುಂಧತಿ ಚಂದ್ರಶೇಖರ್, ನಗರ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಎನ್.ನೋಮೇಶ್ ಕುಮಾರ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.