ಪ್ರಧಾನಿ ಮೋದಿ ಕೆಳಗಿಳಿವ ಸೂಚನೆಯನ್ನು ಆರ್‌ಎಸ್‌ಎಸ್‌ ನೀಡಿದೆ: ಸಿಎಂ ಸಿದ್ದರಾಮಯ್ಯ

Kannadaprabha News, Govindaraj S |   | Kannada Prabha
Published : Jul 18, 2025, 07:24 AM ISTUpdated : Jul 19, 2025, 06:44 AM IST
Siddaramaiah

ಸಾರಾಂಶ

75 ವರ್ಷ ತುಂಬುತ್ತಿರುವ ಮೋದಿ ಅವರ ಪದಚ್ಯುತಿ ಕುರಿತು ಆರ್‌ಆರ್‌ಎಸ್‌ ಸರಸಂಘ ಚಾಲಕ ಮೋಹನ್‌ ಭಾಗವತ್‌ ಸುಳಿವು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಜು.18): ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ದಮ್ಮು-ತಾಕತ್ತಿದ್ದರೆ ದಲಿತ ನಾಯಕ ಗೋವಿಂದ ಕಾರಜೋಳ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಘೋಷಿಸಿ. ಇದೆಲ್ಲಕ್ಕಿಂತ 75 ವರ್ಷ ತುಂಬುತ್ತಿರುವ ಮೋದಿ ಅವರ ಪದಚ್ಯುತಿ ಕುರಿತು ಆರ್‌ಆರ್‌ಎಸ್‌ ಸರಸಂಘ ಚಾಲಕ ಮೋಹನ್‌ ಭಾಗವತ್‌ ಸುಳಿವು ನೀಡಿದ್ದಾರೆ. ಹೀಗಾಗಿ ದಲಿತ ಪ್ರಧಾನಮಂತ್ರಿ ಮಾಡುವ ಸದಾವಕಾಶ ಬಿಜೆಪಿಗೆ ಬಂದಿದೆ.

ಅದಕ್ಕೆ ನೀವೇ ಪ್ರಯತ್ನ ಆರಂಭಿಸಿ, ದಲಿತ ನಾಯಕರ ಹೆಸರನ್ನು ಸೂಚಿಸಿ ನಿಮ್ಮ ದಲಿತ ಪ್ರೇಮ ಸಾಬೀತುಪಡಿಸಿ ಎಂದು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷಗೆ ಪ್ರತಿಸವಾಲು ಹಾಕಿದ್ದಾರೆ. ತಮ್ಮ ಸ್ಥಾನವನ್ನೇ ಭದ್ರವಾಗಿಟ್ಟುಕೊಳ್ಳಲಾಗದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್‌ನ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂದು ಸಲಹೆ ನೀಡುವ ಮೂಲಕ ತಮ್ಮ ಅಜ್ಞಾನ, ದುರಹಂಕಾರ ಪ್ರದರ್ಶಿಸುತ್ತಿದ್ದಾರೆ ಎಂದೂ ತಿರುಗೇಟು ನೀಡಿದ್ದಾರೆ.

ಎಐಸಿಸಿ ಒಬಿಸಿ ಸಲಹಾ ಸಮಿತಿ ಸಭೆ ಕುರಿತು ವ್ಯಂಗ್ಯವಾಡಿರುವ ಮತ್ತು ಕಾಳಜಿಯಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ವಿಜಯೇಂದ್ರ ನೀಡಿರುವ ಹೇಳಿಕೆ ಸಂಬಂಧ ಪ್ರಕಟಣೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನೇ ಭದ್ರವಾಗಿ ಇಟ್ಟುಕೊಳ್ಳಲಾಗುತ್ತಿಲ್ಲ. ಅಂತಹವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ವಿಜಯೇಂದ್ರಗೆ ಓದುವ ಅಭ್ಯಾಸವಿದ್ದರೆ ದೇಶದ ಒಬಿಸಿ ಸಮುದಾಯದವರನ್ನು ಬಿಜೆಪಿ ಯಾವ ಕಾಲದಲ್ಲಿ ಹೇಗೆಲ್ಲ ನಡೆಸಿಕೊಂಡಿದೆ ಎಂಬ ಇತಿಹಾಸ ಓದಿ ತಿಳಿದುಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಬಂಡಾರು ಲಕ್ಷ್ಮಣ ಎಂಬ ಅಮಾಯಕ ದಲಿತ ನಾಯಕರನ್ನು ಭ್ರಷ್ಟಾಚಾರದ ಆರೋಪ ಹೊರಿಸಿ ಜೈಲಿಗೆ ತಳ್ಳಿದ್ದಲ್ಲದೆ, ಅದೇ ಕೊರಗಿನಲ್ಲಿ ಅವರು ಸಾಯುವಂತೆ ಮಾಡಿದವರ್‍ಯಾರು? ಮಾತೆತ್ತಿದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರನ್ನು ಹೇಳುವ ಬಿಜೆಪಿ ಅವರನ್ನೇ ಪ್ರಧಾನಮಂತ್ರಿಯನ್ನಾಗಿ ಏಕೆ ಮಾಡಲಿಲ್ಲ? ಎಪಿಜೆ ಅಬ್ದುಲ್‌ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದೇ ಸಾಧನೆ ಎಂದು ಹೇಳುವವರು, ಪ್ರಸಕ್ತ ಲೋಕಸಭೆಯಲ್ಲಿ ಬಿಜೆಪಿಗೆ ಸೇರಿದ ಒಬ್ಬ ಮುಸ್ಲಿಂ ಸಂಸದನೂ ಏಕಿಲ್ಲ? ಚುನಾವಣೆಯಲ್ಲಿ ಒಬ್ಬ ಮುಸ್ಲಿಂ ನಾಯಕರಿಗೂ ಟಿಕೆಟ್‌ ಏಕೆ ಟಿಕೆಟ್‌ ನೀಡಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದ ಹಿಂದುಳಿದ ಸಮುದಾಯದ ನಾಯಕ ಎಸ್‌. ಬಂಗಾರಪ್ಪ ಅವರನ್ನು ವಿಜಯೇಂದ್ರ ಅವರ ತಂದೆ ಬಿ.ಎಸ್‌.ಯಡಿಯೂರಪ್ಪ ಅವರೇ ಮುಗಿಸಿದರು. ಅವರ ಮಗ ಕುಮಾರ್‌ ಬಂಗಾರಪ್ಪ ಅವರನ್ನು ರಾಜಕೀಯವಾಗಿ ನೀವು ಮುಗಿಸಲು ಹೊರಟಿದ್ದೀರಿ. ವಿಜಯೇಂದ್ರ ಅವರಿಗೆ ದಲಿತ ಮತ್ತು ಹಿಂದುಳಿದ ಜಾತಿಗಳ ಮೇಲೆ ಕಾಳಜಿಯಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ದಲಿತ ನಾಯಕ ಗೋವಿಂದ ಕಾರಜೋಳ ಅವರಿಗೆ ನೀಡಲಿ. ಜತೆಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಎಂದು ಸವಾಲು ಹಾಕಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವ ನೀವು, ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆ ಅವರು ದೇಶ ಮೆಚ್ಚುವ ಮುತ್ಸದ್ಧಿ ನಾಯಕ. ಶ್ರಮ, ಜನಪರ ಕಾಳಜಿ ಮೂಲಕ ನಾಯಕರಾಗಿ ಬೆಳೆದಿದ್ದಾರೆ. ಅದನ್ನು ಹೊರತು ದಲಿತ ಕಾರ್ಡ್‌ ಪ್ರದರ್ಶಿಸಿ ರಾಜಕೀಯ ಮಾಡಿಲ್ಲ. ಅವರ ಬಳವಣಿಗೆಗೆ ಯಾರ ಶಿಫಾರಸುಗಳ ಅಗತ್ಯವಿಲ್ಲ. ಅಲ್ಲದೆ, ನಮ್ಮ ಪಕ್ಷದಲ್ಲಿ ಪ್ರಧಾನಿ ಯಾರಾಗಬೇಕು ಎಂಬುದನ್ನು ಪಕ್ಷವೇ ನಿರ್ಧರಿಸುತ್ತದೆ. ಅದರ ಬಗ್ಗೆ ಬಿಜೆಪಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ