
ಬೆಂಗಳೂರು (ಜು.18): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಮಾದರಿಯನ್ನು ಇಡೀ ದೇಶ ಪಾಲಿಸುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಡವರ ಬದುಕಿಗಾಗಿ ನಾವು ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ಜಮೀನು, ನಿವೇಶನ, ಪಿಂಚಣಿ, ಮಕ್ಕಳಿಗೆ ಬಿಸಿಯೂಟ ಸೇರಿ ಅನೇಕ ಕಾರ್ಯಕ್ರಮ ಕೊಟ್ಟಿದೆ. ಅದೇ ರೀತಿ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಆದರೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಸೇರಿ ಬಿಜೆಪಿಯ ಎಲ್ಲ ನಾಯಕರು ಟೀಕೆ ಮಾಡಿದ್ದರು ಎಂದರು.
ಕರ್ನಾಟಕದಲ್ಲಿ ಯೋಜನೆ ಜಾರಿಯಾದ ನಂತರ ಬಿಜೆಪಿಯವರೇ ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಹರ್‍ಯಾಣ ರಾಜ್ಯಗಳಲ್ಲಿ ಘೋಷಣೆ ಮಾಡಿದ್ದರು. ಈಗ ಬಿಹಾರದಲ್ಲಿ ಘೋಷಣೆ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಸದಾ ದೇಶಕ್ಕೆ ಮಾದರಿ ಎಂದರು. ಟನಲ್ ರೋಡ್ ಬಗ್ಗೆ ಬಿಜೆಪಿ ಟೀಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರು ಯಾರು ಟೀಕೆ ಮಾಡುತಿದ್ದಾರೆ ಎಂಬುದು ಗೊತ್ತಿದೆ. ಬೇರೆ ರಾಜ್ಯದ ಟನಲ್ ಬೇರೆ. ಇದು ಸಿಟಿ ಒಳಗೆ ಆಗುತ್ತಿರುವ ಟನಲ್. ಅವರಿಗೆ ನಾನು ಈಗ ಉತ್ತರ ಕೊಡಲ್ಲ. ಆಮೇಲೆ ಉತ್ತರ ಕೊಡುತ್ತೇನೆ ಎಂದರು.
ಹುಳಿಗಳಲ್ಲಿ ಲಿಂಬೆ ಹುಳ್ಳಿ ಶ್ರೇಷ್ಠ: ಎಲ್ಲ ಹುಳಿಗಳಲ್ಲೇ ಶ್ರೇಷ್ಠವಾದದ್ದು ಲಿಂಬೆ ಹುಳಿ. ನಿಂಬೆಗಿಂತ ಹುಳಿಯಿಲ್ಲ, ದುಂಬಿಗಿಂತ ಕರೆಯಿಲ್ಲ, ಶಂಬುಗಿಂತ ದೊಡ್ಡ ದೇವರಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಾಣ್ಣುಡಿ ಹೇಳಿದರು. ನಾನು ಯಾವ ಕ್ಷೇತ್ರಕ್ಕೂ ಇಷ್ಟು ಹಣ ಕೊಟ್ಟಿಲ್ಲ, ಇಂಡಿಗೆ ಮಾತ್ರ ₹ 4 ಸಾವಿರ ಕೋಟಿ ಕೊಟ್ಟಿದ್ದೇನೆ. ಅದರಿಂದ 93 ಸಾವಿರ ಎಕರೆ ಜಮೀನು ನೀರಾವರಿಯಾಗಲು ಅನುಕೂಲ ಕಲ್ಪಿಸಲಾಗಿದೆ. ಹೊರ್ತಿಯ ರೇವಣಸಿದ್ಧೇಶ್ವರ ಏತ ನೀರಾವರಿ, ತಿಡಗುಂದಿ ಶಾಖಾ ಕಾಲುವೆ, 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ₹ 4167 ಕೋಟಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಸಾರಿಗೆ ಇಲಾಖೆಯ ಶಕ್ತಿ ಯೋಜನೆಯಲ್ಲಿ ₹12,669 ಕೋಟಿ ಹಣ ಬಿಡುಗಡೆಯಾಗಿದೆ. ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದವರಿಗೆ ಗುತ್ತಿಗೆ ಕೊಡುವುದು, ಕೆ ಎಸ್‌ಆರ್‌ಟಿಸಿಯಲ್ಲಿ ಉದ್ಯೋಗ ನೀಡುವುದು ಸೇರಿ ಅನೇಕ ಕೆಲಸ ಮಾಡಿದ್ದೇವೆ. ಕಲಬುರಗಿ, ಪಿರಿಯಾಪಟ್ಟಣದಲ್ಲಿ ಸಾವಿರಾರು ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಆರೋಗ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆಯಲ್ಲಿ ಅಭಿವೃದ್ಧಿಯ ಕಾಂತಿ ಮಾಡಿದ್ದೇವೆ. ನಮ್ಮ ಅಭಿವೃದ್ಧಿಯ ಮುಂದೆ ಬಿಜೆಪಿ ಟೀಕೆಗಳೆಲ್ಲ ಸತ್ತುಹೋಗಿವೆ ಎಂದು ಹೇಳಿದರು. ಬಿಜೆಪಿ ಆಡಳಿತದ ರಾಜ್ಯಗಳು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾದರಿಯನ್ನು ಅಳವಡಿಸಿಕೊಳ್ಳುತ್ತಿವೆ.
ಗ್ಯಾರಂಟಿ ಯೋಜನೆಗಳು ಬಡವರಿಗಾಗಿ ತಿಂಗಳಿಗೆ ₹ 5 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ನಾವು ಮಾಡಿದ ಸಾಧನೆಗಳು ಶಾಶ್ವತವಾಗಿ ಉಳಿಯುವಂತೆ ಮಾಡುತ್ತಿವೆ. ಉಳುವವನಿಗೆ ಭೂಮಿ, ಪಂಚವಾರ್ಷಿಕ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಕೊಟ್ಟಿದೆ. ಇಂದಿರಾಗಾಂಧಿ ಕಾಲದಲ್ಲೇ ವಿಧವಾ ಮಾಶಾಸನ, ಓಲ್ಡ್ ಏಜ್ ಪೆನ್ಶನ್ ಕೊಟ್ಟಿದ್ದಾರೆ. ಇಂತಹ ಅನೇಕ ಯೋಜನೆಗಳನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ ಮುಂದಿನ ದಿನದಲ್ಲಿ ವಿಜಯಪುರದಲ್ಲೂ ಮಾಡಲಾಗುವುದು. ಜನರು ವಿಶ್ವಾಸ ಇಡಬೇಕು. 2028ರಲ್ಲಿ ಬಾಕಿ ಉಳಿದಿರುವ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬರುವಂತೆ ಮಾಡಬೇಕು, ಈ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.