Mandya: ಪ್ರತಿ ಟನ್ ಮೊಲಾಸಸ್ ಉತ್ಪಾದನೆಗೆ 100 ರೂ ಹೆಚ್ಚಳ: ಸಿಎಂ ಬೊಮ್ಮಾಯಿ ಆದೇಶ

By Sathish Kumar KHFirst Published Dec 30, 2022, 5:54 PM IST
Highlights

ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸಿ ಕೇವಲ ಸಕ್ಕರೆ ಉತ್ಪಾದನೆ ಮಾಡುವ ಜೊತೆಗೆ ಮೊಲಾಸಸ್ ತಯಾರಿಸುವವರಿಗೆ ಪ್ರತಿ ಟನ್ ಗೆ 100 ರೂ. ಹೆಚ್ಚಸಿ ಆದೇಶ ಹೊರಡಿ ಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಮಂಡ್ಯ (ಡಿ.30):  ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸಿ ಕೇವಲ ಸಕ್ಕರೆ ಉತ್ಪಾದನೆ ಮಾಡುವ ಜೊತೆಗೆ ಮೊಲಾಸಸ್ ತಯಾರಿಸುವವರಿಗೆ ಪ್ರತಿ ಟನ್ ಗೆ 100 ರೂ. ಹೆಚ್ಚಸಿ ಆದೇಶ ಹೊರಡಿ ಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಮಂಡ್ಯದಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಕೇಂದ್ರದ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮೈಶುಗರ್ ಕಾರ್ಖಾನೆ ಹಲವು ವರ್ಷಗಳಿಂದ ಮುಚ್ಚಿದ್ದರೂ ಯಾವುದೇ ಸರ್ಕಾರ ಈ ಬಗ್ಗೆ ಚಿಂತನೆ ಮಾಡಿರಲಿಲ್ಲ. ಅಧಿಕಾರಿಗಳು ಈ ಕಾರ್ಖಾನೆಯನ್ನು ಮಾರಾಟ ಮಾಡಿ ಖಾಸಗಿಯವರಿಗೆ ವಹಿಸಲು ಒತ್ತಡ ತಂದಿದ್ದರು. ಈ ಭಾಗದ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ಕರೆದು ಕಾರ್ಖಾನೆಗೆ ಕಾಯಕಲ್ಪವನ್ನು ಸರ್ಕಾರಿ ವಲಯದಿಂದಲೇ ನೀಡುವುದಾಗಿ ಪಣ ತೊಟ್ಟು ಈ ವರ್ಷ ಕಬ್ಬು ಅರೆಸಲು ಪ್ರಾರಂಭಿಸಲಾಗಿದೆ ಈ ಭಾಗದ ರೈತರಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು. 

ಜೊತೆಗೆ ಮುಂದಿನ ವರ್ಷದಲ್ಲಿ ಎಥನಾಲ್ ಘಟಕ ಪ್ರಾರಂಭಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಇದನ್ನು ಲಾಭದಾಯಕವಾಗಿಸಲು, ರೈತರ ಸಕ್ಕರೆ ಕಾರ್ಖಾನೆಯಾಗಿ ಪರಿವರ್ತನೆ ಮಾಡಲಾಗುವುದು ಎಂದರು. ಕಬ್ಬು ಬೆಳೆಗಾರರು, ಕಬ್ಬಿಗೆ ಹೆಚ್ಚಿನ ಬೆಲೆ ನಿಗದಿಗೆ ಒತ್ತಾಯ ಮಾಡುತ್ತಿದ್ದರು. ಎಥನಾಲ್ ಉಳ್ಳವರು 50 ರೂ.ಗಳನ್ನು ಹೆಚ್ಚಿಸಲಾಗಿದೆ. ಇನ್ನು ಮೊಲಾಸಸ್‌ ಉತ್ಪಾದನೆಗೆ ೧೦೦ ರೂ. ಹೆಚ್ಚಳ ಮಾಡಿ ಆದೇಶಿಸಲಾಗಿದೆ.  ಮಾತು ಕೊಟ್ಟಂತೆ ನಡೆಯುವ ಸರ್ಕಾರ ನಮ್ಮದು ಎಂದರು. 

Mandya: ಮೈಶುಗರ್‌ನಲ್ಲಿ ಶೀಘ್ರ ಎಥೆನಾಲ್ ಘಟಕ ಆರಂಭ: ಸಿಎಂ ಬೊಮ್ಮಾಯಿ ಭರವಸೆ

ಡಬಲ್ ಇಂಜಿನ್ ಸರ್ಕಾರ: ಕರ್ನಾಟಕದ ಅಭಿವೃದ್ಧಿ ನಮ್ಮ ಸಂಕಲ್ಪ. ಮಂಡ್ಯ ಇಸ್ ಇಂಡಿಯಾ ಆಗಲು ಭಾಗದ ರೈತರಿಗೆ ಶಕ್ತಿ ತುಂಬಬೇಕು. ಕೈಗಾರಿಕೆಗಳೂ ಬರಬೇಕು. ಡಬಲ್ ಇಂಜಿನ್ ಸರ್ಕಾರದ ಮಹಿಮೆ ಏನೆಂದರೆ ಬೆಂಗಳೂರು- ಮೈಸೂರು ಸೂಪರ್ ಫಾಸ್ಟ್  ಹೈವೇ ಆಗಿರುವುದು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆದ ಮೇಲೆ. ಅವರೇ ಮುಂದಿನ ತಿಂಗಳು ಇದರ ಉದ್ಘಾಟನೆ ಅವರೇ  ನೆರವೇರಿಸಲಿದ್ದಾರೆ. ಕೇವಲ ಒಂದೂವರೆ ಗಂಟೆಗಳಲ್ಲಿ ಬೆಂಗಳೂರು- ಮೈಸೂರು  ಪ್ರಯಾಣಿಸಬಹುದು. ವಂದೇ ಭಾರತ್ ರೈಲು ಕೂಡ ಉದ್ಘಾಟನೆಯಾಗಿದೆ. ಇದು ಡಬಲ್ ಇಂಜಿನ್ ಸರ್ಕಾರ. ವಂದೇ ಭಾರತ್ ರೈಲು, ಹೈವೇ ರಸ್ತೆ ನೀಡಿರುವುದು ಕಾಂಗ್ರೆಸ್ ಅಲ್ಲ ಡಬಲ್ ಇಂಜಿನ್ ಸರ್ಕಾರ ಎಂದು ತಿಳಿಯುತ್ತದೆ ಎಂದರು.

ಕಾಂಗ್ರೆಸ್ ಅನಿಷ್ಟ ಸರ್ಕಾರ: ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿ ಮಾಡಲು ಮತ ಹಾಕಿ ಎಂದು ಯಾಚಿಸುತ್ತಾರೆ. ಜನರು ಅವರ 5 ವರ್ಷಗಳ ಆಡಳಿತ  ನೋಡಿದ್ದಾರೆ.   ಕಾಂಗ್ರೆಸ್ ಅನಿಷ್ಟ ಸರ್ಕಾರ. ಭ್ರಷ್ಟಾಚಾರದಿಂದ ಕೂಡಿದ  ಸರ್ಕಾರ. ಯಾವುದೇ ಇಲಾಖೆ ತೆಗೆದುಕೊಂಡರೂ ಭ್ರಷ್ಟಾಚಾರ ಮಾಡಿದ್ದಾರೆ. ಅನ್ನಭಾಗ್ಯದಲ್ಲಿ  ಕನ್ನಭಾಗ್ಯಮಾಡಿದ್ದಾರೆ. 30 ರೂ. ನರೇಂದ್ರ ಮೋದಿಯವರು ಕೊಟ್ಟಿದ್ದಾರೆ. 3 ರೂ.ಗಳ ಚೀಲದ ಮೇಲೆ ಸಿದ್ದರಾಮಯ್ಯ ಫೋಟೋ ಹಾಕಿದ್ದಾರೆ. ನಿಜವಾದ ಅನ್ನದಾತ ನರೇಂದ್ರ ಮೋದಿಯವರು. ಕರೊನಾ ಬಂದಾಗ ಗರೀಬ್ ಕಲ್ಯಾಣ ಯೋಜನೆ ಜಾರಿ ಮಾಡಿ ಮುಂದಿನ ವರ್ಷಕ್ಕೂ ಯೋಜನೆ ವಿಸ್ತರಣೆ  ಆಗಿದೆ. ಪ್ರತಿ ಬಡವನಿಗೆ  5 ಕೆಜಿ ಅಕ್ಕಿ ನೀಡುವ ನಿರ್ಣಯವನ್ನು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಮಾಡಿದ್ದಾರೆ ಎಂದರು. 

Mandya: ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಹಾಲಿನ ಡೈರಿ ಸ್ಥಾಪನೆ: ಅಮಿತ್‌ ಶಾ ಘೋಷಣೆ

ಎಲ್ಲಾ ವರ್ಗಗಳಿಗೂ ನ್ಯಾಯ ನೀಡಲು ಪ್ರಯತ್ನ: ನಮ್ಮ ಸರ್ಕಾರ ರೈತ ವಿದ್ಯಾ ನಿಧಿ ಯೋಜನೆಯಡಿ 10 ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ  ಯೋಜನೆಯಿಂದ ಲಾಭ ದೊರೆತಿದೆ. ಕುಶಲಕರ್ಮಿಗಳಿಗೆ 50 ಸಾವಿರ ರೂ.ಗಳ ಸಹಾಯಧನ ನೀಡುವ ಕಾಯಕ ಯೋಜನೆ, ಸ್ತ್ರೀ ಸಾಮರ್ಥ್ಯ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ರೂಪಿಸಿದೆ.  ಎಸ್.ಸಿ.ಎಸ್.ಟಿ ಮೀಸಲಾತಿ ಹೆಚ್ಚಿಸಿದೆ. ಹಿಂದುಳಿದ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸುತ್ತಿದೆ. ಎಲ್ಲಾ ವರ್ಗಗಳಿಗೂ ನ್ಯಾಯ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಈ ಬಾರಿ ಕಾಂಗ್ರೆಸ್  ಹಾಗೂ ಜೆಡಿಎಸ್ ನ ಕಪ್ಳು ಬಿಳುಪು ಸಿನಿಮಾ ನೋಡಿಯಾಗಿದೆ. ಯಡಿಯೂರಪ್ಪನವರು ತಮ್ಮ ಜನ್ಮಭೂಮಿಯ ಸಮಗ್ರ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.  ಬಿಜೆಪಿ ಈ ಭಾಗವನ್ನು ಸುವರ್ಣ ಕರ್ನಾಟಕವನ್ನಾಗಿಸುವ ಸಂಕಲ್ಪ ಮಾಡಿದೆ. ಈ ಭಾಗದ ಕಾವೇರಿಯ ಮಕ್ಕಳ ಬಾಳನ್ನು ಬಂಗಾರ ಮಾಡಲು ಸಂಕಲ್ಪವನ್ನು ಮಾಡಿದ್ದೇವೆ. ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಸುಳ್ಳು ಭರವಸೆ ಕೇಳಿ ಜನ ಬೇಸತ್ತಿದ್ದಾರೆ: ದಕ್ಷಿಣ ಕರ್ನಾಟಕದಲ್ಲಿ ಜನರ ನಾಡಿ ಮಿಡಿತ ನಮಗೆ ತಿಳಿದಿದೆ. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದಿಂದ  ಜನ ಬೇಸತ್ತಿದ್ದಾರೆ. ಮತಗಳನ್ನು ಪಡೆದು ಮಂತ್ರಿ , ಮುಖ್ಯಮಂತ್ರಿಗಳಾಗಿ ಈ ಭಾಗಕ್ಕೆ ನ್ಯಾಯ ಕೊಡಲು ವಿಫಲರಾಗಿದ್ದಾರೆ.  ಈ ಭಾಗದ ನೀರಾವರಿ ಬಗ್ಗೆ ದಿಟ್ಟ ಕ್ರಮಗಳನ್ನು ತೆಗೆದುಕೊಂಡಿಲ್ಲ. ಸಕ್ಕರೆ ಕಾರ್ಖಾನೆ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ ರೈತಾಪಿ ವರ್ಗ, ಯುವಕರು ಮತ್ತು ಮಹಿಳೆಯರು ಭಾಜಪ ಕಡೆ ನೋಡುತ್ತಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಅತ್ಯಧಿಕ ಸ್ಥಾನ ಪಡೆಯುವುದು ಬಿಜೆಪಿ ಎಂದರು. 

ಕುಮಾರಸ್ವಾಮಿಯಿಂದ ಮಂಡ್ಯಕ್ಕೆ ನಂಬಿಕೆ ದ್ರೋಹ: ಜನಸಂಕಲ್ಪ‌ ಸಮಾವೇಶದಲ್ಲಿ ಸಚಿವ ಅಶ್ವಥ್ ನಾರಾಯಣ್ ಮಾತನಾಡಿ, ರಾಜಕೀಯವಾಗಿ ದಿಕ್ಸೂಚಿ ಕೊಡುವ ಗಂಡುಮೆಟ್ಟಿದ ನಾಡು ಮಂಡ್ಯ. ಪ್ರಗತಿಯಲ್ಲಿ ಹೆಸರುವಾಸಿಯಾದ ಜಿಲ್ಲೆ ಮಂಡ್ಯ. ಬಿಜೆಪಿ ನಾಯಕರನ್ನ ಮಂಡ್ಯ ಜಿಲ್ಲೆ ನೀಡಿದೆ. ರಾಜ್ಯಕ್ಕೆ ಯಡಿಯೂರಪ್ಪ ಅಂತ ಮುಖ್ಯಮಂತ್ರಿ ನೀಡಿದ್ದು ಮಂಡ್ಯ. ಕೆಲವರನ್ನ ನಂಬಿ ನೀವು ಅಧಿಕಾರ ಕೊಟ್ರಿ. ಆದರೆ ಅವರು ನಂಬಿಕೆ ದ್ರೋಹ ಮಾಡಿದ್ದಾರೆ. ಜೆಡಿಎಸ್ ನಂಬಿಕೆ ದ್ರೋಹದ ಕೆಲಸ ಮಾಡಿದೆ. ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನ ಗೆಲ್ಲಿಸಿದ್ರಿ. ಅವರ ಕಾಲದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುವಂತಾಯ್ತು. ನಮಗೆ ಅಧಿಕಾರ ಕೊಡಿ, ಮುಖ್ಯಮಂತ್ರಿ ಮಾಡಿ ಅಂತ ಅಧಿಕಾರ ಬಂದವರು ಮಂಡ್ಯ, ಮೈಸೂರು ಭಾಗಕ್ಕೆ ಅನ್ಯಾಯ ಮಾಡಿದರು.

ಜೆಡಿಎಸ್‌ ಮಂಡ್ಯವನ್ನು ಹಿಂದುಳಿದ ಜಿಲ್ಲೆಯಾಗಿ ಮಾಡಿದೆ: ಕೈಗಾರಿಕೆಗಳ‌ನ್ನ ಪ್ರಾರಂಭ ಮಾಡಲಿಲ್ಲ, ಯುವಕರಿಗೆ ಉದ್ಯೋಗ ಕೊಡಲಿಲ್ಲ. ಯಾವುದೇ ಕೆಲಸ ಮಾಡದೇ ಕೇವಲ ರಾಜಕೀಯ ಮಾಡಿಕೊಂಡು ಬಂದವರು ಜೆಡಿಎಸ್. ಇವರಿಗೆ ಮುಂದಿನ ಚುನಾವಣೆ ತಕ್ಕ ಪಾಠ ಕಲಿಸುವ ಕೆಲಸ ಮಾಡಿ. ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಿದಂತೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಿ. ಕೇವಲ ಕಣ್ಣೀರು ಹಾಕಿ, ಕೇವಲ ನಾಟಕ ಮಾಡಿಕೊಂಡು ರಾಜಕೀಯ ಮಾಡಿದ್ದಾರೆ. ಆದರೆ ನಮ್ಮದು ಕಾರ್ಯಕರ್ತರ ಪಕ್ಷ. ಮಂಡ್ಯ, ಹಳೇ ಮೈಸೂರು ಭಾಗವನ್ಮ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಮಂಡ್ಯ ಜಿಲ್ಲೆಯನ್ನ ಹಿಂದುಳಿದ ಜಿಲ್ಲೆಯನ್ನಾಗಿ ಮಾಡಿದ್ದು ಜೆಡಿಎಸ್ ಎಂದು ಕುಮಾರಸ್ವಾಮಿ ವಿರುದ್ಧ ಸಚಿವ ಅಶ್ವಥ್ ನಾರಾಯಣ್ ಕಿಡಿ ಕಾರಿದರು.

click me!