ಆರ್‌ಆರ್ ನಗರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಆರೋಪ| ಮುನಿರತ್ನ ವಿರುದ್ಧ ಸರ್ಜಿ ಸಲ್ಲಿಸಿದ್ದ ಮುನಿರಾಜು ಗೌಡ| ಮುನಿರಾಜುಗೌಡ ಸರ್ಜಿ ವಜಾ| ಮುನಿರತ್ನಗೆ ಬಿಗ್ ರಿಲೀಫ್
ಬೆಂಗಳೂರು(ಅ.13) ಆರ್‌ಆರ್ ನಗರ ಚುನಾವಣಾ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ತುಳಸಿ ಮುನಿರಾಜು ಗೌಡ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಸುಪ್ರೀಂ ತೀರ್ಪು ಮುನಿರತ್ನಗೆ ನೆಮ್ಮದಿ ನೀಡಿದ್ದು, ಉಪಚುನಾವಣೆಯಲ್ಲಿ ಸ್ಪರ್ಧಿಸುವ ಹಾದಿ ಸುಗಮವಾಗಿದೆ.
018 ವಿಧಾನಸಭೆ ಚುನಾವಣೆಯಲ್ಲಿ ಆರ್.ಆರ್.ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುನಿರತ್ನ ಗೆದ್ದಿದ್ದರು. ಆದರೆ ಇದಾದ ಬಳಿಕ ಚುನಾವಣೆಯಲ್ಲಿ ನಕಲಿ ಮತದಾರರ ಪಟ್ಟಿ ಪತ್ತೆಯಾದ ಹಿನ್ನೆಲೆ, ಅಂದು ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜು ಗೌಡ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುನಿರತ್ನ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು, ಇದೀಗ ಆರ್.ಆರ್.ನಗರ ಕ್ಷೇತ್ರಕ್ಕೆ ಉಪ ಚುನಾವಣೆಗೆ ಅವರೇ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಅರ್ಜಿಯಲ್ಲೇನಿತ್ತು?
ಕಳೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿರುವ ತುಳಸಿ ಮುನಿರಾಜು ಗೌಡ ಸದ್ಯ ಘೋಷಣೆಯಾಗಿರುವ ಆರ್.ಆರ್.ನಗರ ಕ್ಷೇತ್ರದ ಉಪ ಚುನಾವಣೆಗೆ ತಡೆನೀಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಪ್ರತಿಯಾಗಿ ಚುನಾವಣೆಗೆ ತಡೆ ನೀಡದಂತೆ ಕೋರಿ ಮುನಿರತ್ನ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರ ನೇತೃತ್ವದ ತ್ರಿಸದಸ್ಯ ಪೀಠ ಚುನಾವಣೆಗೆ ತಡೆ ನೀಡಲು ನಿರಾಕರಿಸಿದ್ದು, ಈ ಅರ್ಜಿ ವಜಾಗೊಳಿಸಿದೆ.