ಕೇಂದ್ರ ಬಿಜೆಪಿ ನಾಯಕರಿಗೆ ಸಚಿವ ಶ್ರೀರಾಮುಲು ಪತ್ರ ರವಾನೆ| ಬಿಜೆಪಿ ನಾಯಕರಿಗೆ ಸ್ಪಷ್ಟವಾದ ವಿವರಣೆಯುಳ್ಳ ಪತ್ರ| ನಿಗದಿತ ಅವಧಿಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿರುವ ಕುರಿತು ಕೇಂದ್ರ ನಾಯಕರಿಗೆ ಮನವರಿಕೆ| ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಎಲ್ಲಾ ನಾಯಕರಿಗೆ ವರದಿ ರೂಪದ ಪತ್ರ ರವಾನೆಗೆ ಶ್ರೀರಾಮುಲು ಪ್ಲಾನ್|
ಬೆಂಗಳೂರು(ಅ.13): ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನ ವೈದ್ಯಕೀಯ ಶಿಕ್ಷಣ ಸಚಿವ ಆರ್. ಸುಧಾಕರ್ ಅವರಿಗೆ ನೀಡಿದ್ದರಿಂದ ಅಸಮಾಧಾನಗೊಂಡಿರುವ ಮತ್ತೋರ್ವ ಸಚಿವ ಬಿ.ಶ್ರೀರಾಮುಲು ಕೇಂದ್ರ ನಾಯಕರಿಗೆ ಪತ್ರವೊಂದನ್ನು ಬರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಖಾತೆ ಬದಲಾವಣೆಯಿಂದ ಕಂಗಾಲಾಗಿರುವ ಸಚಿವ ಶ್ರೀರಾಮುಲು ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಎಲ್ಲಾ ನಾಯಕರಿಗೆ ವರದಿ ರೂಪದ ಪತ್ರ ರವಾನೆಗೆ ಪ್ಲ್ಯಾನ್ ಮಾಡಿದ್ದಾರೆ. ಈ ಪತ್ರದಲ್ಲಿ ತಾವು ನಿರ್ವಹಿಸುತ್ತಿದ್ದ ಆರೋಗ್ಯ ಇಲಾಖೆಯಲ್ಲಿನ ಸಾಧನೆಗಳ ಬಗ್ಗೆ ವಿವರವಾಗಿ ಬರೆದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಿದ್ದಾರೆ.
ಪತ್ರದ ಮೂಲಕ ಆರೋಗ್ಯ ಖಾತೆ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪಕ್ಕೆ ಶ್ರೀರಾಮುಲು ತಿರುಗೇಟು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದೊಂದು ವರ್ಷದಿಂದ ಮಾಡಿರುವ ಕೆಲಸಗಳ ಪಟ್ಟಿಯನ್ನ ಕಳೆದ ರಾತ್ರಿಯಿಂದ ಇಲಾಖಾ ಅಧಿಕಾರಿಗಳಿಂದ ಮಾಹಿತಿಯನ್ನ ಸಚಿವ ಶ್ರೀರಾಮುಲು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಖಾತೆ ಬದಲಾವಣೆ: ಮಹತ್ವದ ನಿರ್ಧಾರ ಕೈಗೊಂಡ ಶ್ರೀರಾಮುಲು, ಬಿಜೆಪಿಯಲ್ಲಿ ಸಂಚಲನ
ಮಹಾಮಾರಿ ಕೋರೋನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಿರುವ ಬಗ್ಗೆ ಹಾಗೂ ಇಲಾಖೆಯಲ್ಲಿ ಆಗಿರುವ ಹಸ್ತಕ್ಷೇಪದ ಕುರಿತು ಸಹ ಪತ್ರದಲ್ಲಿ ಸಚಿವ ಶ್ರೀರಾಮುಲು ಉಲ್ಲೇಖ ಮಾಡಲಿದ್ದಾರೆ. ಕೇಂದ್ರ ನಾಯಕರನ್ನು ಭೇಟಿ ಮಾಡಲು ಸಾಧ್ಯವಾಗದ ಕಾರಣ ಸಚಿವರು ಪತ್ರ ಬರೆಯಲು ಮುಂದಾದ್ದಾರೆ. ಆರೋಗ್ಯ ಇಲಾಖೆಯನ್ನು ಬಿಟ್ಟುಕೊಟ್ಟಿರುವ ಶ್ರೀರಾಮುಲು ಅವರಿಂದ ಒತ್ತಡ ತಂತ್ರದ ಪಾಲಿಟಿಕ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿಗೂ ಮುನ್ನವೇ ಕೇಂದ್ರ ನಾಯಕರಿಗೆ ಮಾಹಿತಿ ಕಳುಹಿಸಲು ಸಚಿವ ಶ್ರೀರಾಮುಲು ಮುಂದಾಗಿದ್ದಾರೆ. ನಿನ್ನೆ(ಸೋಮವಾರ) ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಭೇಟಿ ಬಳಿಕ ಕೇಂದ್ರದಲ್ಲಿರುವ ತಮ್ಮ ಆಪ್ತ ನಾಯಕರಿಗೆ ಸಚಿವ ಶ್ರೀರಾಮುಲು ಫೋನ್ ಮಾಡಿ ತಮಗಾದ ತೊಂದರೆಗಳ ಕುರಿತು ಕೇಂದ್ರ ನಾಯಕರೊಬ್ಬರಿಗೆ ಮಾಹಿತಿ ನೀಡಿದ್ದರು. ಕೇಂದ್ರ ನಾಯಕರ ಸಲಹೆಯಂತೆ ಸಚಿವ ಶ್ರೀರಾಮುಲು ಪತ್ರ ಬರೆಯಲು ಮುಂದಾದ್ರಾ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.
ಶ್ರೀರಾಮುಲುಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ಕೊಟ್ಟಿದ್ಯಾಕೆ? ಕಾರಣ ಕೊಟ್ಟ ಸಚಿವ
ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಯೋಜನೆ
ಖಾತೆ ಬದಲಾವಣೆ ವಿಚಾರದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಶ್ರೀರಾಮುಲು ಅವರಿಂದ ಹೊಸ ಬೇಡಿಕೆ ಇಡೋ ಪ್ಲಾನ್ ಮಾಡಿದ್ದಾರೆ. ಆಪ್ತರ ಸಲಹೆ ಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದೆ ಹೊಸ ಬೇಡಿಕೆ ಪ್ರಸ್ತಾಪ ಇಡುವ ಯೋಚನೆ ಕೂಡ ಮಾಡಿದ್ದಾರೆ. ಶ್ರೀರಾಮುಲು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಯೋಜನೆ ಯಲ್ಲಿದ್ದಾರೆ ಎನ್ನಲಾಗುತ್ತಿದೆ.
ಸಿಎಂ ಭೇಟಿ ವೇಳೆ ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆ ಓಕೆ ಆದ್ರೇ ಬಳ್ಳಾರಿ ಉಸ್ತುವಾರಿ ಕೊಡುವಂತೆ ಬೇಡಿಕೆ ಇಡಲಿದ್ದಾರೆ. ಈ ಮೂಲಕ ಒಂದು ಕಡೆ ಪಟ್ಟು ಬಿಗಿ ಮಾಡುವುದರ ಜೊತೆ ಬಳ್ಳಾರಿ ಉಸ್ತುವಾರಿ ಗಿಟ್ಟಿಸಿಕೊಳ್ಳುವ ಯೋಜನೆ ಶ್ರೀರಾಮುಲು ಅವರದ್ದಾಗಿದೆ. ಇದರ ಜೊತೆಗೆ ವಿಜಯನಗರ ಜಿಲ್ಲೆ ಮಾಡುವ ಹುರುಪಿನಲ್ಲಿರೋ ಆನಂದ ಸಿಂಗ್ ಅವರಿಗೆ ಟಾಂಗ್ ಕೊಡಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಆದರೆ, 2006 ರಿಂದ ಇಲ್ಲಿಯವರೆಗೆ ಮೂರು ಬಾರಿ ಮಂತ್ರಿಯಾದ್ರೂ ಬಳ್ಳಾರಿ ಉಸ್ತುವಾರಿ ಮಾತ್ರ ಶ್ರೀರಾಮುಲುಗೆ ದಕ್ಕಿಲ್ಲ.