ಕರ್ನಾಟಕದ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್‌ ಅಧ್ಯಕ್ಷ ಪಟ್ಟ?: ಕುತೂಹಲಕ್ಕೆ ಇಂದು ತೆರೆ

Published : Oct 19, 2022, 01:00 AM IST
ಕರ್ನಾಟಕದ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್‌ ಅಧ್ಯಕ್ಷ ಪಟ್ಟ?: ಕುತೂಹಲಕ್ಕೆ ಇಂದು ತೆರೆ

ಸಾರಾಂಶ

ಬೆಳಿಗ್ಗೆ 10ರಿಂದ ಎಐಸಿಸಿ ಕಚೇರಿಯಲ್ಲಿ ಮತ ಎಣಿಕೆ, ತರೂರ್‌ ವಿರುದ್ಧ ಖರ್ಗೆ ಗೆಲುವಿನ ಸಾಧ್ಯತೆ ಹೆಚ್ಚು?, ಪಕ್ಷಕ್ಕೆ 24 ವರ್ಷದ ನಂತರ ಗಾಂಧಿಯೇತರ ಅಧ್ಯಕ್ಷ 

ನವದೆಹಲಿ(ಅ.19):  ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಲಿದೆ. ಅದರೊಂದಿಗೆ 137 ವರ್ಷದ ಇತಿಹಾಸವಿರುವ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷಕ್ಕೆ 24 ವರ್ಷಗಳ ನಂತರ ಗಾಂಧಿಯೇತರ ಅಧ್ಯಕ್ಷರೊಬ್ಬರು ಲಭಿಸಲಿದ್ದಾರೆ. ಅವರು ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯೋ ಅಥವಾ ಕೇರಳದ ಶಶಿ ತರೂರ್‌ ಅವರೋ ಎಂಬುದು ಮತ ಎಣಿಕೆಯ ನಂತರ ತಿಳಿಯಲಿದೆ.

ದೇಶಾದ್ಯಂತ ಸ್ಥಾಪಿಸಲಾಗಿದ್ದ 68 ಮತಗಟ್ಟೆಗಳಿಂದ ಮತ ಪೆಟ್ಟಿಗೆಗಳನ್ನು ದೆಹಲಿಗೆ ತರುವ ಕಾರ್ಯ ಮಂಗಳವಾರ ಸಂಜೆಗೆ ಪೂರ್ಣಗೊಂಡಿದೆ. ಇಂದು(ಬುಧವಾರ) ಬೆಳಿಗ್ಗೆ 10 ಗಂಟೆಯಿಂದ ಎಐಸಿಸಿ ಮುಖ್ಯ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದೆ. ಗಾಂಧಿ ಕುಟುಂಬಕ್ಕೆ ಹತ್ತಿರುವಿರುವ ಹಾಗೂ ಪಕ್ಷದಲ್ಲಿ ಹೆಚ್ಚು ಬೆಂಬಲ ಹೊಂದಿರುವ ಖರ್ಗೆ ಅವರೇ ಜಯ ಗಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

AICC President Election: ಕಾಂಗ್ರೆಸ್‌ ಅಧ್ಯಕ್ಷರ ಎಲೆಕ್ಷನ್ನಲ್ಲಿ 500 ಮತ ಚಲಾವಣೆ: ಶೇ.99.40 ವೋಟಿಂಗ್‌

ಸೀಲ್‌ ಮಾಡಲಾಗಿರುವ ಮತಪೆಟ್ಟಿಗೆಗಳನ್ನು ಎಐಸಿಸಿ ಕಚೇರಿಯಲ್ಲಿ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ನಂತರ ಮತಪತ್ರಗಳನ್ನು ಬೆರೆಸಿ, ಎಣಿಕೆ ಮಾಡಲಾಗುತ್ತದೆ. ಚುನಾವಣೆಯು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆದಿದೆ ಎಂದು ಪಕ್ಷದ ಚುನಾವಣಾ ವಿಭಾಗದ ಮುಖ್ಯಸ್ಥ ಮಧುಸೂದನ ಮಿಸ್ತ್ರಿ ಹೇಳಿದ್ದಾರೆ.

ಸೋಮವಾರ ನಡೆದ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹತೆ ಹೊಂದಿದ್ದ 9915 ಕಾಂಗ್ರೆಸ್‌ ಸದಸ್ಯರ ಪೈಕಿ 9500ಕ್ಕೂ ಹೆಚ್ಚು ಮಂದಿ ಮತ ಚಲಾವಣೆ ಮಾಡಿದ್ದಾರೆ. ಪಕ್ಷದ ಇತಿಹಾಸದಲ್ಲಿ ಒಟ್ಟು 6 ಬಾರಿ ಮಾತ್ರ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆದಿದೆ. ಈ ಬಾರಿ ಆಯ್ಕೆಯಾದವರು ಪಕ್ಷದ ಅತ್ಯಂತ ಸುದೀರ್ಘ ಅವಧಿಯ ಅಧ್ಯಕ್ಷೆ (1998ರಿಂದ ಈವರೆಗೆ) ಸೋನಿಯಾ ಗಾಂಧಿಯವರ ಉತ್ತರಾಧಿಕಾರಿಯಾಗಲಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಅತ್ಯಂತ ಹಿರಿಯ ಹಾಗೂ ತಳಮಟ್ಟದಿಂದ ಬಂದ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದರೆ, ಇನ್ನೊಬ್ಬ ಅಭ್ಯರ್ಥಿ ಶಶಿ ತರೂರ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯುವಕರ ವಲಯದಲ್ಲಿ ಜನಪ್ರಿಯತೆ ಹೊಂದಿರುವ, ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವವಿರುವ ಹಾಗೂ 2009ರಲ್ಲಷ್ಟೇ ಪಕ್ಷಕ್ಕೆ ಸೇರ್ಪಡೆಯಾದ ನಾಯಕರಾಗಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!