ಕೇವಲ ಮೀಸಲಾತಿಯಿಂದಷ್ಟೇ ಅಭಿವೃದ್ಧಿ ಹೊಂದುತ್ತೇವೆ ಎಂದು ಸುಮ್ಮನೆ ಕೂರದೇ ಎಲ್ಲರೂ ವೈಯಕ್ತಿಕವಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಹಿರಿಯೂರು (ಆ.11): ಕೇವಲ ಮೀಸಲಾತಿಯಿಂದಷ್ಟೇ ಅಭಿವೃದ್ಧಿ ಹೊಂದುತ್ತೇವೆ ಎಂದು ಸುಮ್ಮನೆ ಕೂರದೇ ಎಲ್ಲರೂ ವೈಯಕ್ತಿಕವಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು. ನಗರದ ನೆಹರೂ ಮೈದಾನದ ಎ.ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ಶನಿವಾರ ತಾಲೂಕು ವಾಲ್ಮೀಕಿ ನಾಯಕ ಸಮಾಜ, ವಾಲ್ಮೀಕಿ ನೌಕರರ ಸಂಘ, ವಾಲ್ಮೀಕಿ ನಾಯಕ ವಕೀಲರ ಸಂಘ, ವಾಲ್ಮೀಕಿ ನಾಯಕ ನಿವೃತ್ತ ನೌಕರರ ಸಂಘದ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿದಂತೆ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಯಾರೂ ಯಾರನ್ನು ಉದ್ಧಾರ ಮಾಡುವುದಿಲ್ಲ. ಹೋರಾಟ, ಛಲ, ಹಠ ಇಟ್ಟುಕೊಂಡು ವಿದ್ಯಾರ್ಥಿಗಳು ಬದುಕನ್ನು ಎದುರಿಸಬೇಕು. ನೌಕರಿಗಳ ಕೊರತೆ ಕಾಡುತ್ತಿದ್ದು ಬಹಳಷ್ಟು ಜನರು ಉದ್ಯೋಗ ವಂಚಿತರಾಗಿದ್ದಾರೆ. ಹಾಗಾಗಿ ವೈಯಕ್ತಿಕವಾಗಿ ಒಂದೊಂದು ವೃತ್ತಿ ಆಯ್ದುಕೊಂಡು ಅಭಿವೃದ್ಧಿಯತ್ತ ಸಾಗಬೇಕು. ಕೇವಲ ಮೀಸಲಾತಿಯಿಂದಲೇ ಎಲ್ಲಾ ಸಮಸ್ಯೆಗಳು ಪರಿಹಾರವಾಗಲ್ಲ. ಬದುಕಿಗೆ ಬೇರೆ ಬೇರೆ ದಾರಿ ನಾವೇ ಹುಡುಕಿಕೊಳ್ಳಬೇಕು. 75 ವರ್ಷಗಳ ಹೋರಾಟದ ನಂತರ ಸಮಾಜ ಒಂದು ಹಂತ ತಲುಪಿದೆ. ಈಗಿನ ಮಕ್ಕಳು ಶೇ.80ಕ್ಕಿಂತ ಹೆಚ್ಚಿನ ಅಂಕ ತೆಗೆಯುತ್ತಿದ್ದಾರೆ.
ರಾಚಯ್ಯ ಅವರ ಮಾರ್ಗದರ್ಶನದಂತೆ ನಾನು ಶೋಷಿತರ ಪರ: ಸಿಎಂ ಸಿದ್ದರಾಮಯ್ಯ
ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಈಗಿನ ಮತ್ತು ಈ ಹಿಂದಿನ ಸ್ವಾಮೀಜಿಗಳಿಂದಾಗಿ ವಾಲ್ಮೀಕಿ ಸಮುದಾಯ ಮುನ್ನೆಲೆಗೆ ಬರುತ್ತಿದೆ. ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಲು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರಿಗೆ ಪ್ರೋತ್ಸಾಹ ಕೊಡಬೇಕಾದುದು ಆಯಾಯ ಸಮಾಜದ ಕರ್ತವ್ಯವಾಗಿದೆ. ಪಿಯುಸಿ ನಂತರ ವಿದ್ಯಾರ್ಥಿಗಳ ಭವಿಷ್ಯ ಪ್ರಮುಖ ಘಟ್ಟದಲ್ಲಿರುತ್ತದೆ. ಆ ಸಮಯದಲ್ಲಿ ವಿದ್ಯಾರ್ಥಿಗಳು ಆಲಸ್ಯ ತೋರದೇ ವಿದ್ಯಾಭ್ಯಾಸದ ಮಹತ್ವ ಅರಿತು ಮುನ್ನಡೆಯಬೇಕು.
ವಿದ್ಯೆ ಜೊತೆಗೆ ಸಂಸ್ಕಾರ ಕಲಿತರೆ ಮಾತ್ರ ವಿದ್ಯೆಗೆ ಗೌರವ ಸಿಗುತ್ತದೆ. ನಾನು ಮೊದಲ ಬಾರಿ ಶಾಸಕನಾದ ದಿನದಿಂದಲೂ ವಾಲ್ಮೀಕಿ ಭವನಗಳು, ಬೋರ್ ವೆಲ್ ಗಳನ್ನು ನೀಡುತ್ತಾ ಬಂದಿದ್ದೇನೆ. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬೆಳವಣಿಗೆಗೆ ಸದಾ ಸಹಕಾರ ನೀಡಿದ ತೃಪ್ತಿ ನನಗಿದೆ. ಪಂಚ ಗ್ಯಾರಂಟಿಗಳಿಂದಾಗಿ ಒಂದಿಷ್ಟು ಆರ್ಥಿಕ ಹಿನ್ನಡೆಯಾಗಿದ್ದರು ಸಹ ಬರುವ ದಿನಗಳಲ್ಲಿ ಎಲ್ಲವನ್ನು ಸರಿದೂಗಿಸಲಾಗುವುದು. ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳೂ ಚಾಲನೆಗೊಂಡಿದ್ದು ಸಮಗ್ರ ಅಭಿವೃದ್ಧಿ ಸಂಕಲ್ಪ ಹೊಂದಿದ್ದೇವೆ ಎಂದರು. ಚಳ್ಳಕೆರೆ ಶಾಸಕ ರಘುಮೂರ್ತಿ ಮಾತನಾಡಿ, ಮಾನವ ಬಂಧುತ್ವ ವೇದಿಕೆಯು ಎಲ್ಲಾ ತುಳಿತಕ್ಕೊಳಗಾದವಾರ ಬೆನ್ನಿಗೆ ನಿಂತಿದೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
ಜನಾಂಗದ ಅಭಿವೃದ್ಧಿಗೆ ನಮ್ಮೆಲ್ಲ ನಾಯಕರು ಕಟಿಬದ್ಧರಾಗಿದ್ದಾರೆ. ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವುದಷ್ಟೇ ಅಲ್ಲ. ಉತ್ತಮ ಸಂಸ್ಕೃತಿ ಮತ್ತು ಮೌಲ್ಯ ಬೆಳೆಸಿಕೊಳ್ಳಬೇಕು ಎಂದರು. ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಯೋಗೀಶ್ ಬಾಬು, ಹರ್ತಿಕೋಟೆ ವೀರೇಂದ್ರಸಿಂಹ, ಪ್ರಾಚಾರ್ಯ ಡಿ ಚಂದ್ರಶೇಖರ್, ಜೆ ಕರಿಯಪ್ಪ ಮಾಳಿಗೆ, ಎಚ್ ಎಸ್ ಮಂಜುನಾಥ್, ಡಾ ಹೇಮಣ್ಣ ನಾಯಕ, ಈಶ್ವರಪ್ಪ, ನಾಗರಾಜ್ ಸೊಂಡೆಕೆರೆ, ಬಸವರಾಜ್, ಅನಿಲ್ ಕುಮಾರ್, ಕವಿತಾ ಲೋಕೇಶ್, ಹೇಮದಳ ಶ್ರೀಧರ್, ಮಂಜುನಾಥ್ ಮಾಳಿಗೆ, ವಿ ಗಿರೀಶ್, ಎಂಡಿ ಕೋಟೆ ಕುಮಾರ್, ಶಿವಮೂರ್ತಿ ಮುಂತಾದವರು ಉಪಸ್ಥಿತರಿದ್ದರು.