ರಾಜಕಾರಣ ಮತ್ತು ಬಿಲಿಯರ್ಡ್ಸ್ ಆಟಕ್ಕೂ ಭಾಳ ವ್ಯತ್ಯಾಸ ವಿಲ್ಲ. ಒಂದು ಕೋಲಿನಿಂದ ಒಂದು ಚೆಂಡು ಹೊಡೆದು ಹೇಗೆ ಯಾವುದೋ ಚೆಂಡನ್ನು ಗೋಲು ಮಾಡುತ್ತಾರೋ ಅದೇ ರೀತಿ ಮೊದಲು ಸಾಮದಿಂದ ಶುರುವಾಗಿ ದಾಮ ದಂಡ ಭೇದ ದ ವರೆಗೆ ಉದ್ದೇಶ ಪ್ರಾಪ್ತಿಗೆ ಯಾವುದರಿಂದ ಲಾಭವೋ ಅದನ್ನು cut throat ಆಗಿ ಬಳಸಿ ಕೊಳ್ಳುವುದೇ ರಾಜಕಾರಣ.
- ಪ್ರಶಾಂತ್ ನಾತು, ಏಷಿಯಾನೆಟ್ ಸುವರ್ಣನ್ಯೂಸ್
ರಾಜಕಾರಣ ಮತ್ತು ಬಿಲಿಯರ್ಡ್ಸ್ ಆಟಕ್ಕೂ ಭಾಳ ವ್ಯತ್ಯಾಸ ವಿಲ್ಲ. ಒಂದು ಕೋಲಿನಿಂದ ಒಂದು ಚೆಂಡು ಹೊಡೆದು ಹೇಗೆ ಯಾವುದೋ ಚೆಂಡನ್ನು ಗೋಲು ಮಾಡುತ್ತಾರೋ ಅದೇ ರೀತಿ ಮೊದಲು ಸಾಮದಿಂದ ಶುರುವಾಗಿ ದಾಮ ದಂಡ ಭೇದ ದ ವರೆಗೆ ಉದ್ದೇಶ ಪ್ರಾಪ್ತಿಗೆ ಯಾವುದರಿಂದ ಲಾಭವೋ ಅದನ್ನು cut throat ಆಗಿ ಬಳಸಿ ಕೊಳ್ಳುವುದೇ ರಾಜಕಾರಣ. ಒಂದು ತಿಂಗಳ ಹಿಂದಿನವರೆಗೂ ಮುಖ್ಯಮಂತ್ರಿ ಸಿದ್ದು ವಿರುದ್ಧ ಮೈಂಡ್ ಗೇಮ್ ಆಡುತ್ತಿದ್ದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಏಕಾ ಏಕಿ ಸಿದ್ದು ರನ್ನು ಸಮರ್ಥಿಸಿ ಕೊಳ್ಳುವ ಪರಿ ಯಾಕೋ ರಾಜಕೀಯವನ್ನು ಹತ್ತಿರದಿಂದ ನೋಡುತ್ತಿರುವವರಿಗೆ ಜೀರ್ಣ ಆಗುತ್ತಿಲ್ಲ. ಡಿ ಕೆ ವರ್ತಮಾನದಲ್ಲಿ ಸಿದ್ದು ಹಿಂದೆ ನಿಂತಂತೆ ತೋರಿಸಿ ಭವಿಷ್ಯದಲ್ಲಿ ತನಗೆ ಸಿಗಬೇಕಾದ ಅವಕಾಶಗಳ ಸಾಧ್ಯತೆಯನ್ನು ಹೆಚ್ಚಿಸಿ ಕೊಳ್ಳುತ್ತಿದ್ದಾರೆ. ರಾಜಕಾರಣದ ಒಂದು ಸರಳ ನಿಯಮ ಎಂದರೆ ಖುರ್ಚಿಯಿಂದ ಯಾರನ್ನು ಕೆಳಗಿಳಿಸುವುದು ಒಂದು ಆಟ ಆದರೆ ಮತ್ತೊಬ್ಬರನ್ನು ತಂದು ಕೂರಿಸುವುದು ಇನ್ನೊಂದು ಪ್ರತ್ಯೇಕ ಆಟ. ಯಾರು ಮೊದಲ ಆಟದಲ್ಲಿ ಸೋತು ಖುರ್ಚಿಯಿಂದ ಕೆಳಗೆ ಇಳಿಯುತ್ತಾರೋ ಅವರಿಗೆ ಹೊಸಬರಿಗೆ ಖುರ್ಚಿಯಲ್ಲಿ ಕೂರಿಸುವಾಗ ಒಂದು ವೀಟೊ ಸಿಗುತ್ತದೆ. ಯಾರನ್ನು ಕೂರಿಸಬೇಕು ಅನ್ನುವ ವಿಷಯದಲ್ಲಿ ನಿರ್ಗಮನ ಮಾಡುವವರ ಮಾತು ನಡೆಯುತ್ತೋ ಬಿಡುತ್ತೋ ಆದರೆ ಇವರನ್ನು ಮಾತ್ರ ಕೂರಿಸಬಾರದು ಎಂದು ಹಠ ಹಿಡಿದರೆ ಆ ವೀಟೊ ಗೆ ಖಂಡಿತ ಮಾನ್ಯತೆ ಸಿಕ್ಕೇ ಸಿಗುತ್ತದೆ.ಡಿ ಕೆ ಶಿವಕುಮಾರ ಅವರ ಬದಲಾದ ವರಸೆಗೆ ಬಹುತೇಕ ಇದೇ ಕಾರಣವಿದೆ. ಒಂದು ವೇಳೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದರೆ ಇವತ್ತಿಲ್ಲ ಕೆಲ ತಿಂಗಳುಗಳ ನಂತರವಾದರೂ ಸರಿ ಸಿದ್ದು ಖುರ್ಚಿಯಿಂದ ಕೆಳಗಿಳಿಯುವ ಪ್ರಸಂಗ ಬರಬಹುದು ಎಂಬುದು ಡಿ ಕೆ ಶಿವಕುಮಾರ ಪರಮೇಶ್ವರ ಎಚ್ ಕೆ ಪಾಟೀಲ್ ರಂತಹ ವೃತ್ತಿಪರ ರಾಜಕೀಯ ಆಟಗಾರರಿಗೆ ಗೊತ್ತಿಲ್ಲದ ಸಂಗತಿ ಏನಲ್ಲ. ಹೀಗಾಗಿಯೇ ಸಿದ್ದು ರನ್ನು ಇಳಿಸೋದು ಹೇಗೆ ಎಂದು ತಂತ್ರ ಹೂಡುತ್ತಿದ್ದ ಡಿ ಕೆ ಶಿವಕುಮಾರ ಸಿದ್ದು ರನ್ನು ಉಳಿಸಲೇಬೇಕು ಎಂದು ಭಾಸವಾಗುವಂತೆ ಮಾತನಾಡುತ್ತಿದ್ದಾರೆ. ಆದರೆ ರಾಜಕಾರಣದಲ್ಲಿ ಬರಿ ಗಣ್ಣಿಗೆ ಕಾಣುವ ಹಾಗೇ ಜಗತ್ತು ಇರುವುದಿಲ್ಲ. ಅದು ಇರೋದೇ ಬೇರೆ ಕಾಣೋದೇ ಬೇರೆ ನೋಡಿ.
ಡಿಕೆಶಿ ಪಕ್ಕಾ ರಣ ತಂತ್ರ ಏನು?
ಕರ್ನಾಟಕದಲ್ಲಿ ನಿಜಲಿಂಗಪ್ಪ ದೇವರಾಜ್ ಅರಸರ ಕಾಲದಿಂದಲೂ ಎರಡು ವಿಭಿನ್ನ ವೋಟು ಬ್ಯಾಂಕ್ ಗಳಿವೆ. ಒಂದು ಲಿಂಗಾಯಿತರು ಮತ್ತು ಒಕ್ಕಲಿಗ ಸಮುದಾಯ ಗಳನ್ನು ಒಳಗೊಂಡ ಹಳೆಯ ಜನತಾ ಪರಿವಾರದ ಜಾತಿ ಸಮೀಕರಣ.ಅದರಲ್ಲಿ ಈಗ ಬಹುಪಾಲು ಲಿಂಗಾಯಿತರು ಯಡಿಯೂರಪ್ಪ ಕಾರಣದಿಂದ ಬಿಜೆಪಿ ಜೊತೆಗೆ ಇದ್ದರೆ ಸದ್ಯದ ಮಟ್ಟಿಗೆ ಒಕ್ಕಲಿಗರು ಒಮ್ಮೆ ದೇವೇಗೌಡರ ಕುಟುಂಬ ಇನ್ನೊಮ್ಮೆ ಡಿ ಕೆ ಶಿವಕುಮಾರ ನಡುವೆ ಹೊಯ್ದಟ ದಲ್ಲಿದೆ. ಆದರೆ ಕಾಂಗ್ರೆಸ್ ಪಾರ್ಟಿಯ ಪರಂಪರಾ ಗತ ವೋಟ್ ಬ್ಯಾಂಕ್ ಅಂದರೆ ಅದು ಅಹಿಂದ ಸಮುದಾಯ ಗಳದ್ದು.ಮುಸ್ಲಿಮರು ಬಿಜೆಪಿ ವಿರುದ್ಧ ಅನ್ನುವ ಕಾರಣದಿಂದ ಸಿದ್ದು ಮತ್ತು ಕಾಂಗ್ರೆಸ್ ಹಿಂದೆ ಗಟ್ಟಿಯಾಗಿ ನಿಂತಿದ್ದರೆ, ದಲಿತ ಬಲ ಗೈ ಸಮುದಾಯ ಖರ್ಗೆ ಪರಮೇಶ್ವರ ರಿಂದಾಗಿ ಕಾಂಗ್ರೆಸ್ ಜೊತೆಗಿದೆ. ಇನ್ನು ಕುರುಬ ಸಮುದಾಯ ಮತ್ತು ಇತರ ಹಿಂದುಳಿದವರು ಸಿದ್ದು ಕಟ್ಟಾ ಸಮರ್ಥಕರು. ಹೀಗಾಗಿ ಒಂದು ವೇಳೆ ಸಿದ್ದು ರನ್ನು ಅಲುಗಾಡಿಸಲು ಹೊರಟರೆ ಮೊಟ್ಟ ಮೊದಲಿಗೆ ಕುರುಬರು ಚಲ್ಲಾಪೀಲ್ಲಿ ಆಗುವ ಆತಂಕ ಕಾಂಗ್ರೆಸ್ ಪಾರ್ಟಿಗಿದೆ. ಹೀಗಾಗಿ ಮುಂದೆ ಆಗುವ ಯಾವ ಕಾಂಗ್ರೆಸ್ ಮುಖ್ಯಮಂತ್ರಿಯು ಕೂಡ ಅಹಿಂದ ಸಮುದಾಯ ಗಳ ಕೆಂಗಣ್ಣಿಗೆ ಗುರಿಯಾಗಿ ಅಧಿಕಾರ ನಡೆಸೋದು ಚುನಾವಣೆಗೆ ಹೋಗೋದು ಸಾಧ್ಯ ಆಗೋದಿಲ್ಲ. ಇವತ್ತಿಗೂ ನೋಡಿ ಡಿ ಕೆ ಶಿವಕುಮಾರ ಸೇರಿದಂತೆ ಕಾಂಗ್ರೆಸ್ ನಲ್ಲಿರುವ ಘಟಾ ನುಘಾಟಿ ಒಕ್ಕಲಿಗ ನಾಯಕರು ತಮ್ಮ ಕ್ಷೇತ್ರದಲ್ಲಿ 40 ಪ್ರತೀಶತ ಮಾತ್ರ ಒಕ್ಕಲಿಗ ವೋಟು ಪಡೆದರೆ ಅಹಿಂದ ಸಮುದಾಯದ 60 ಪ್ರತೀಶತ ಮತಗಳು ಗೆಲ್ಲಲು ತೆಗೆದು ಕೊಳ್ಳಲೆ ಬೇಕು. ಇದಕ್ಕಾಗಿಯೇ ಡಿ ಕೆ ಶಿವಕುಮಾರ ಸಿದ್ದು ವಿಷಯದಲ್ಲಿ ತುಂಬಾ ಎಚ್ಚರಿಕೆ ಇಂದ ಹೆಜ್ಜೆ ಇಡುತ್ತಿದ್ದಾರೆ. ಲಿಂಗಾಯಿತರ ವಿರೋಧ ಕಟ್ಟಿಕೊಂಡು ಬಿಜೆಪಿಯಲ್ಲಿ ಹೇಗೆ ಮುಖ್ಯಮಂತ್ರಿ ಆಗಲು ಸಾಧ್ಯ ಇಲ್ಲವೋ ಅದೇ ರೀತಿ ಅಹಿಂದ ಸಮುದಾಯದ ವಿರೋಧ ಕಟ್ಟಿಕೊಂಡು ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆಗೋದು ಅಸಾಧ್ಯ. ಇದಕ್ಕೆ ಅನ್ನಿಸುತ್ತದೆ ಡಿ ಕೆ ಶಿವಕುಮಾರ ಗೆ ರಾತ್ರೋ ರಾತ್ರಿ ಸಿದ್ದು ಮೇಲೆ ಎಂದೂ ಇಲ್ಲದ ಪ್ರೀತಿ ಬಂದು ಬಿಟ್ಟಿದೆ.ಕಲಾವಿದರನ್ನು ನಟನೆಯಲ್ಲಿ ಮೀರಿಸಬಲ್ಲರು ನೋಡಿ ನಮ್ಮ ರಾಜಕಾರಣಿ ಗಳು.
ಮುಡಾ ಹಗರಣ: ರಾಜ್ಯಪಾಲರು ಅನುಮತಿ ಕೊಟ್ಟರೆ ಮುಂದೇನು?
ಅನಂತ ಕುಮಾರ ಮಾಡಿದ ತಪ್ಪು ಏನು?
ಇವತ್ತು ಹೇಗೆ ಸಿದ್ದು ನಂತರ ಡಿ ಕೆ ಶಿವಕುಮಾರರಿಗೆ ಖುರ್ಚಿ ಸಿಗುತ್ತದೆ ಎಂಬ ಸಾರ್ವತ್ರಿಕ ಅಭಿಪ್ರಾಯ ಇದೆಯೋ 2011 ರಲ್ಲಿ ಕೂಡ ಬಿಜೆಪಿಯಲ್ಲಿ ಯಡಿಯೂರಪ್ಪ ಇಳಿದರೆ ಅನಂತ ಕುಮಾರ ರಿಗೆ ಅವಕಾಶ ಎನ್ನುವ ವಾತಾವರಣ ಇತ್ತು. ಆದರೆ ತಾಳ್ಮೆ ಕಳೆದುಕೊಂಡ ಅನಂತ ಕುಮಾರ 2009 ರಲ್ಲಿ ಯಾವಾಗ ರೆಡ್ಡಿ ಬಂಡಾಯ ದಲ್ಲಿ ಕೈ ಜೋಡಿಸಿದರೋ ರಾಮಕೃಷ್ಣ ಹೆಗಡೆ ಆಗಬೇಕು ಎಂದು ಕನಸು ಕಾಣುತ್ತಿದ್ದ ಅನಂತ ಕುಮಾರ ಏಕಾ ಏಕೀ ಲಿಂಗಾಯಿತರ ವಿರೋಧಿ ಎಂದು ಬಿಂಬಿತ ವಾಗತೊಡಗಿದರು. 2011 ರಲ್ಲಿ ಯಾವಾಗ ಯಡಿಯೂರಪ್ಪ ರನ್ನು ಖುರ್ಚಿ ಇಂದ ಕೆಳಗಿಳಿಸಿದಾಗ ಅನಂತ ಕುಮಾರ ರನ್ನು ಮುಖ್ಯಮಂತ್ರಿ ಯಾಗಿ ಅಡ್ವಾಣಿ ಮತ್ತು ನಿತಿನ್ ಗಡ್ಕರಿ ಮಾಡುತ್ತಾರೆ ಎಂದು ಬಿ ಎಸ್ ವೈ ಗೆ ಗೊತ್ತಾಯಿತೋ ಯಾವುದೇ ಕಾರಣಕ್ಕೂ ಅನಂತ್ ಮುಖ್ಯಮಂತ್ರಿ ಆಗಲು ನಾನು ಬಿಡುವುದಿಲ್ಲ ಪಾರ್ಟಿ ಒಡೆಯಲು ನಾನು ರೆಡಿ ನಾನು ಹೇಳಿದವರು ಮುಖ್ಯಮಂತ್ರಿ ಆಗಬೇಕು ಎಂದು ಹಠ ಹಿಡಿದು ಕುಳಿತು ಸದಾ ನಂದ ಗೌಡರನ್ನು ಮುಖ್ಯಮಂತ್ರಿ ಮಾಡಿದರು. 2016 ರಲ್ಲಿ ಒಮ್ಮೆ ಹರಟೆ ಹೊಡೆಯುತ್ತಿದ್ದಾಗ ನಾನು ಅನಂತ ಕುಮಾರರನ್ನು ಕೇಳಿದೆ ನಿಮಗಿಂತ ಜ್ಯುನಿಯರ ಆಗಿದ್ದ ಸದಾನಂದ ಗೌಡರು ಮತ್ತು ಶೆಟ್ಟರು ಸಿ ಎಂ ಆದರು ನೀವು ಯಡಿಯೂರಪ್ಪ ರನ್ನು ಅತಿಯಾಗಿ ವಿರೋಧಿಸಿದ್ದು ತಪ್ಪಾಯಿತಾ ಎಂದು ಕೇಳಿದಾಗ 5 ನಿಮಿಷ ಮೌನ ದಿಂದಿದ್ದ ಅನಂತ " ಹೌದು ನನ್ನದು ಸ್ವಲ್ಪ ಅಪ್ರಬುದ್ಧ ನಡೆ ಆಗಿತ್ತು ಕೆಳಗಿಳಿಯುವ ವ್ಯಕ್ತಿ ಮಾಸ್ ಲೀಡರ್ ಆಗಿದ್ದರೆ ಮುಂದಿನ ಸಿ ಎಂ ಆಗುವವರ ಹೆಸರಿಗೆ ಆತ ಒಪ್ಪದೇ ಇದ್ದರೆ ಏನೇ ಲಗಾಟಿ ಹೊಡೆದರು ಉಪಯೋಗ ಆಗೋಲ್ಲ " ಎಂದು ಹೇಳುತ್ತಿದ್ದರು. ರಾಜಕೀಯದಲ್ಲಿ ರಣ ತಂತ್ರಗಳು ಖುರ್ಚಿ ಹತ್ತಿರಕ್ಕೂ ಒಯ್ಯಬಹುದು ಒಮ್ಮೊಮ್ಮೆ ತಿರುಗು ಬಾಣ ವಾಗಿ ನಮಗೆ ಬಂದು ಚುಚ್ಚ ಬಹುದು
ಸದಾ 'ಜಾಣ' ಗೌಡರು
ಮೊದಲೇ ಮಂಗಳೂರಿಗರು ಜಾಣರು ಅದರಲ್ಲೂ ಸದಾನಂದ ಗೌಡರು ಅಂದರೆ ಕೇಳಬೇಕೇ 1999 ರಿಂದ 2011 ರ ವರೆಗಿನ ಕರ್ನಾಟಕದ ಅತ್ಯಂತ ಜಾಣ ರಾಜಕಾರಣಿ.ನನಗಿನ್ನೂ ಚೆನ್ನಾಗಿ ನೆನಪಿದೆ ಆಗ ಸದಾನಂದ ಗೌಡರು ದಿಲ್ಲಿಯ ಸೌತ್ ಅವೆನ್ಯು ನ ಸಂಸದರ ಚಿಕ್ಕ ಫ್ಲಾಟ್ ನಲ್ಲಿದ್ದರು. ಯಾವಾಗ ಯಡಿಯೂರಪ್ಪ ನವರಿಗೆ ರಾಜಕೀಯವಾಗಿ ಸಮಸ್ಯೆ ಶುರು ಆಗುತ್ತೋ ಹೊರಗೆ ಬಂದು ಮೀಡಿಯಾ ಗಳ ಎದುರು ಒಳಗಡೆ ಹೋಗಿ ಅರುಣ್ ಜೈಟ್ಲಿ ಸುಷ್ಮಾ ಸ್ವರಾಜ್ ರಾಜನಾಥ್ ಸಿಂಗ್ ಎದುರು ಗಟ್ಟಿಯಾಗಿ ಯಡಿಯೂರಪ್ಪ ರನ್ನು ಹೊಗಳಿ ಸಮರ್ಥಿಸಿ ಕೊಳ್ಳುತ್ತಿದ್ದರು. ಆ ಕಡೆ ಯಡಿಯೂರಪ್ಪ ನವರು ಈ ಕಡೆ ಬಿ ಎಲ್ ಸಂತೋಷ್ ಇಬ್ಬರಿಗೂ ಹತ್ತಿರ ಇದ್ದರು. ಆದರೆ ಯಾವತ್ತಾದರೂ ಒಬ್ಬರೇ ಮಾಧ್ಯಮ ಗಳ ಎದುರು ಒಫ್ ದಿ ರೆಕಾರ್ಡ್ ಸಿಕ್ಕರೆ ಏನ್ರೀ ಯಡಿಯೂರಪ್ಪ ನವರಿಂದ ನಮ್ಮ ರಾಜ್ಯದ ಮಾನ ಹೋಗುತ್ತಿದೆ ಚೆಕ್ ಅಲ್ಲಿ ಯಾರಾದರೂ ದುಡ್ಡು ತೆಗೆದು ಕೊಳ್ಳುತ್ತಾರಾ ಅರುಣ್ ಜೈಟ್ಲಿ what is this ಸದಾನಂದ ಎಂದು ಪ್ರಶ್ನೆ ಕೇಳಿದರು ಗೊತ್ತಾ? ಎಂದು ರಾಗವಾಗಿ ಮಾತನಾಡುತ್ತಿದ್ದರು.ಕೊನೆಗೆ ಕೆ ಎಂ ಎಫ್ ಅಧ್ಯಕ್ಷ ಆಗಬೇಕು ಎಂದು ಯೋಚಿಸುತ್ತಿದ್ದ ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿ ಆದರು. ರಾಜಕೀಯದಲ್ಲಿ ಇತಿಹಾಸದಲ್ಲಿ ಏನು ಕಷ್ಟ ಪಟ್ಟೆ ಎಂಬುದು ಉಪಯೋಗಕ್ಕೆ ಬರುವುದಿಲ್ಲ ನೀವು ವರ್ತಮಾನ ದಲ್ಲಿ ತಪ್ಪು ಹೆಜ್ಜೆ ಇಟ್ಟರೆ ಪ್ರಪಾತ ಸಿಗುತ್ತದೆ ಜಾಣ ಹೆಜ್ಜೆ ಇಟ್ಟರೆ ಖುರ್ಚಿ ಪ್ರಾಪ್ತಿ ಆಗುತ್ತದೆ. ಇದೊಂಥರ ಹಾವು ಏಣಿ ಆಟವೇ ನೋಡಿ.
India Gate: ಮೋದಿ ಮತ್ತು ಆರೆಸ್ಸೆಸ್ ನಡುವೆ ಏನಾಗ್ತಿದೆ?
ಕಾಂಗ್ರೆಸ್ ಗೆ 'ಕುರುಬರು' ನಿರ್ಣಾಯಕ
ರಾಜ್ಯದಲ್ಲಿ ಬಿಜೆಪಿ ಹೇಗೆ ಲಿಂಗಾಯಿತರು ಮುನಿಸಿಕೊಂಡರೆ ಚುನಾವಣೆಯಲ್ಲಿ ಗೆಲ್ಲಲು ಕಷ್ಟ ಪಡುತ್ತದೋ ಅದೇ ರೀತಿ ಕಾಂಗ್ರೆಸ್ ಕೂಡ ಒಂದು ವೇಳೆ ಕುರುಬರು ಆ ಕಡೆ ಈ ಕಡೆ ಚಲ್ಲಾ ಪಿಲ್ಲಿ ಆದರೆ ಒಂದೊಂದು ಸೀಟು ಗೆಲ್ಲಲು ಕೂಡ ಕಷ್ಟ ಪಡಬೇಕಾಗುತ್ತದೆ. ರಾಜ್ಯದಲ್ಲಿ ಕರಾವಳಿ ಮತ್ತು ಬೆಂಗಳೂರು ಹೊರತು ಪಡಿಸಿದರೆ ಸುಮಾರು 170 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸುಮಾರು 15 ಸಾವಿರದಿಂದ 40 ಸಾವಿರದವರೆಗೆ ಕುರುಬರು ಇದ್ದಾರೆ. ಸಿದ್ದು ಕಾರಣದಿಂದ ವಿಧಾನಸಭೆಯಲ್ಲಿ 80 ಪ್ರತಿಶತ ಕುರುಬರು ಲೋಕಸಭೆಯಲ್ಲಿ 60 ಪ್ರತೀಶತ ಕುರುಬರು ಕಾಂಗ್ರೆಸ್ ಗೆ ವೋಟು ಹಾಕುತ್ತಾರೆ. ಹೀಗಿರುವಾಗ ಏನಾದರೂ ಹೆಚ್ಚು ಕಡಿಮೆ ಆದರೆ ಸಿದ್ದು ಮತ್ತು ಕುರುಬರ ಗಟ್ಟಿ ಬೆಂಬಲ ಇಲ್ಲದೇ ಹೋದರೆ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವೋಟನ್ನು ಸೀಟು ಆಗಿ ಪರಿವರ್ತಿಸುವ ಸಾಮರ್ಥ್ಯ ಕಳೆದು ಕೊಳ್ಳುತ್ತದೆ. ಹೀಗಾಗಿಯೇ ಏನೋ ಕಾಂಗ್ರೆಸ್ ಹೈ ಕಮಾಂಡ ಡಿ ಕೆ ಶಿವಕುಮಾರ ಜಿ ಪರಮೇಶ್ವರ ತುಂಬಾ ಜಾಗರೂಕತೆ ಇಂದ ಹೆಜ್ಜೆ ಇಡುತ್ತಿದ್ದರೆ ಸಿದ್ದು ಅಹಿಂದ ಅಹಿಂದ ಎಂದು ಹೇಳುತ್ತಾ ಒಂದು ಕಡೆಗೆ ವಿಪಕ್ಷಗಳಿನ್ನು ಟೀಕಿಸುತ್ತಾ ಕಾಂಗ್ರೆಸ್ ನ ಒಳಗಿನವರಿಗೆ ಸಂದೇಶ ಕೊಡುತ್ತಿದ್ದಾರೆ. ಹಿಂದೆ 1983 ದೇವರಾಜ್ ಅರಸರನ್ನು ತೆಗೆದ ಕಾರಣದಿಂದಲೇ ಮೊದಲ ಕಾಂಗ್ರೆಸ್ ಏತರ ಸರ್ಕಾರ ಬಂತು ಮತ್ತು 1994 ರಲ್ಲಿ ಬಂಗಾರಪ್ಪ ನವರನ್ನು ಕೆಳಗಿಳಿಸಿ ಕಾಂಗ್ರೆಸ್ 170 ರ ಆಸು ಪಾಸಿನಿಂದ 30 ಕ್ಕೆ ಜಾರಿತು ಅನ್ನುವುದನ್ನು ಸಿದ್ದು ಸ್ವ ಪಾರ್ಟಿಗೆ ನೆನಪು ಮಾಡಿ ಕೊಡುತ್ತಿದ್ದಾರೆ