ಧಾರವಾಡಕ್ಕೆ ಲಾಡ್‌ ಓಡಾಟ ಯಾಕೆ ಜಾಸ್ತಿಯಾಗಿದೆ?: ಮೇಯರ್‌ ಫೋನ್‌ ಇನ್‌ಗೆ ಕಮಿಷನರ್‌ ಬೀಗ!

By Kannadaprabha News  |  First Published Nov 6, 2023, 5:03 AM IST

ಒಳ್ಳೆಯ ಮೇಯರ್‌ ಇದ್ದರೂ ನಿಮ್ಮ ಹೆಸರು ಹಾಳು ಮಾಡಲು ಈ ಅಧಿಕಾರಿ, ಸಿಬ್ಬಂದಿಗಳೇ ಸಾಕು, ಬೇಕಾದರೆ ಅಧಿಕಾರಿಗಳಿಗೆ ಹೇಳಿ ನೋಡಿ, ನೀವು ಹೇಳುವ ಕೆಲಸವನ್ನೂ ಮಾಡುವುದಿಲ್ಲ ಎಂದು ಒಂದೇ ಸಮನೆ ಬಾರಿಸಿಬಿಟ್ಟ...


ಮಂಗ್ಳೂರು ಮೇಯರ್‌ ಸುಧೀರ್ ಶೆಟ್ರು ವಾರಕ್ಕೊಮ್ಮೆ ಅಧಿಕಾರಗಳನ್ನು ಗುಡ್ಡೆ ಹಾಕಿಕೊಂಡು ಒಂದು ಫೋನ್ ಇನ್‌ ಕಾರ್ಯಕ್ರಮ ನಡೆಸುತ್ತಾರೆ. ಅದರಲ್ಲಿ ನಾಗರೀಕರು ನೇರವಾಗಿ ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ಅದಕ್ಕೆ ಶೆಟ್ರು ಸ್ಪಾಟ್‌ನಲ್ಲೇ ಪರಿಹಾರ ಒದಗಿಸುತ್ತಾರೆ. ಈ ಸ್ಪಾಟ್ ಪರಿಹಾರದ ಗೈರತ್ತು ಎಲ್ಲರಿಗೂ ಗೊತ್ತಾಗಲಿ ಎಂದು ಈ ಫೋನ್ ಇನ್‌ ಮಾತುಕತೆಯನ್ನು ಲೌಡ್ ಸ್ಪೀಕರ್‌ಗೆ ಹಾಕಿಸಿ ಎಲ್ಲರಿಗೂ ಕೇಳುವಂತೆಯೂ ಶೆಟ್ರು ವ್ಯವಸ್ಥೆ ಮಾಡಿಸಿದ್ದಾರೆ.  ಮೊನ್ನೆ ಇಂತಹ ಎರಡನೇ ಫೋನ್‌ ಇನ್‌ ಆಯೋಜಿಸಿದ್ದರು. 

ಅದಕ್ಕೆ ಸುರತ್ಕಲ್‌ನಿಂದ ಒಬ್ಬ ಕಿಲಾಡಿ ಕಾಲ್ ಮಾಡಿದ್ದ. ಮೊದ ಮೊದಲು ಫೋನ್ ಇನ್ ಕಾರ್ಯಕ್ರಮವನ್ನು ಹೊಗಳಿದ ಈ ಕಿಲಾಡಿ ಕ್ರಮೇಣ ಶುರುಹಚ್ಚಿಕೊಂಡ... ಪಾಲಿಕೆಯಲ್ಲಿ ಭ್ರಷ್ಟಾಚಾರ ಮಡುಗಟ್ಟಿದೆ, ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ, ಅಧಿಕಾರಿಗಳ ಬಾಸ್‌ ಕಮಿಷನರ್‌ ಕೂಡ ಇದರಿಂದ ಹೊರತಾಗಿಲ್ಲ. ಒಳ್ಳೆಯ ಮೇಯರ್‌ ಇದ್ದರೂ ನಿಮ್ಮ ಹೆಸರು ಹಾಳು ಮಾಡಲು ಈ ಅಧಿಕಾರಿ, ಸಿಬ್ಬಂದಿಗಳೇ ಸಾಕು, ಬೇಕಾದರೆ ಅಧಿಕಾರಿಗಳಿಗೆ ಹೇಳಿ ನೋಡಿ, ನೀವು ಹೇಳುವ ಕೆಲಸವನ್ನೂ ಮಾಡುವುದಿಲ್ಲ ಎಂದು ಒಂದೇ ಸಮನೆ ಬಾರಿಸಿಬಿಟ್ಟ... ಎಲ್ಲರಿಗೂ ಮುಜುಗರವೋ ಮುಜುಗರ. ಆ ಕಿಲಾಡಿಯ ಮಾತು ಕೇಳಲಾಗುತ್ತಿಲ್ಲ. 

Tap to resize

Latest Videos

ಜಾತಿ ಗಣತಿ ವರದಿ ಬಿಡುಗಡೆ ಮಾಡ್ತೀರಾ ಇಲ್ವಾ?: ಕೆ.ಎಸ್‌.ಈಶ್ವರಪ್ಪ

ಹಾಗಂತ ಫೋನ್ ಕಟ್ ಮಾಡುವಂತಿಲ್ಲ. ಹೀಗಾಗಿ ಪೀಕಲಾಟವೋ ಪೀಕಲಾಟ... ಈ ಅನುಭವವಾಗಿದ್ದೇ ತಡ... ಕಮಿಷನರ್‌ ಸಾಹೇಬರು ನೇರವಾಗಿ ಕರೆ ಸ್ವೀಕರಿಸುವ ಕಂಟ್ರೋಲ್‌ ರೂಂಗೆ ತೆರಳಿದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಫೋನ್‌ ಇನ್‌ಗೆ ಕರೆ ಬಂದಾಗ ಅವರ ಹೆಸರು, ನಂಬರು ಮಾತ್ರವಲ್ಲ ಯಾವ ವಿಷಯದಲ್ಲಿ ಮಾತನಾಡುತ್ತಾರೆ ಎಂಬುದನ್ನು ಖಚಿತಪಡಿಸಿಕೊಂಡೇ ಫೋನನ್ನು ಮೇಯರ್‌ಗೆ ಕನೆಕ್ಟ್‌ ಮಾಡಬೇಕು ಎಂದು ಫರ್ಮಾನು ಹೊರಡಿಸಿದರು. ಹೀಗೆ ಶೆಟ್ರ ಫೋನ್‌ ಇನ್‌ಗೂ ಕಮಿಷನರ್‌ ಕಂಟ್ರೋಲ್‌ ಖಾತರಿಯಾಯ್ತು.

ಅಸಲಿ ಪ್ರತಿಭಟನೆ ಅಂದ್ರೆ ಇದೇ!: ಪ್ರತಿಭಟನೆ ಅಂದ್ರೆ ಹೀಂಗಿರಬೇಕು ಎನ್ನುವಂತಹ ಒಂದು ಪ್ರತಿಭಟನೆ ಮೊನ್ನೆ ಬೆಂಗಳೂರಿನಲ್ಲಿ ನಡೆಯಿತು. ಗಾಬರಿ ಬೇಡ! ಅಲ್ಲೇನೂ ರಕ್ತಪಾತವಾಗಲಿಲ್ಲ, ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟವಾಗಲಿಲ್ಲ. ಹಾಗಂತ ಅದೇನೂ ಮೌನ ಪ್ರತಿಭಟನೆಯೂ ಅಲ್ಲ. ಆದರೆ, ನಮಗೆ ಮುನಿಸಿದೆ ಸ್ವಾಮಿ, ನಾನು ಮುನಿಸಿಕೊಂಡಿದ್ದಾಗ ನಿಮ್ಮ ನೀರನ್ನು ಮುಟ್ಟಲ್ಲ ಎಂದು ಹೇಳುವಂತಹ ಧಾಡಸಿ ಪ್ರತಿಭಟನೆಯದು.

ಏನಾಗಿತ್ತು ಎಂದರೆ, ಕೈಗಾರಿಕಾ ಪ್ರದೇಶ ಮಾಡ್ತೀವಿ ಅಂತ ನೆಪ ನೀಡಿ ದೇವನಹಳ್ಳಿ ಬಳಿ 13 ಗ್ರಾಮಗಳ ಜಮೀನು ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಕೋಟಿಗಟ್ಟಲೇ ಬೆಲೆ ಬಾಳುವ ತಮ್ಮ ಜಮೀನಿನ ಮೇಲೆ ಸರ್ಕಾರ ಇಂತಹ ನೆಪವಿಟ್ಟುಕೊಂಡು ಕಣ್ಣುಹಾಕಿರೋದು ರೈತರನ್ನು ಕಂಗೆಡಿಸಿದೆ. ಜಮೀನು ಕೊಡಲು ಸಾಧ್ಯವೇ ಇಲ್ಲ ಅಂತ ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ಸ್ವಲ್ಪ ಬೆಣ್ಣೆ ಹಚ್ಚಿ ರೈತರನ್ನು ಸರಿಮಾಡಿಕೊಳ್ಳೋಣ ಅಂತ ಸಚಿವದ್ವಯರಾದ ಎಂ.ಬಿ.ಪಾಟೀಲ್ ಹಾಗೂ ಮುನಿಯಪ್ಪನವರು ರೈತರ ಸಭೆ ಕರೆದಿದ್ದರು.

ಒಗ್ಗಟ್ಟು ತೋರಿಸಲೋ ಎಂಬಂತೆ ನೂರಾರು ರೈತರು ಸಭೆ ನಡೆದ ಖನಿಜ ಭವನದ ಬಳಿ ಬಂದುಬಿಟ್ಟರು. ಎಲ್ಲರಿಗೂ ಸಭೆಯೊಳಗೆ ಅವಕಾಶ ಕೊಡಲು ಆಗಲ್ಲ ಅಂತ ರೈತರ ನಿಯೋಗದ ಜತೆ ಸಭಾಂಗಣದಲ್ಲಿ ಸಚಿವರು ಸಭೆಗೆ ಕೂತರು. ಬಾಕಿ ಉಳಿದ ರೈತರು ಶಕ್ತಿ ಕೇಂದ್ರದ ಬಳಿ ನಿಂತರು. ಸಭೆ ಸುದೀರ್ಘ‍‍‍‍‍ವಾಗಿ ನಡೆದಿತ್ತು. ಪಾಪ.. ರೈತರು ಹೊರಗೆ ನಿಂತಿದ್ದಾರಲ್ಲ ಅಂತ ಅದ್ಯಾರಿಗೆ ಕನಿಕರ ಬಂತೋ ಗೊತ್ತಿಲ್ಲ. ಹೊರಗೆ ನಿಂತಿದ್ದ ರೈತರಿಗೂ ಟೀ, ಬಿಸ್ಕತ್‌ ಹಾಗೂ ನೀರನ್ನು ನೀಡಲು ನೀಡಲು ಮುಂದಾದರು.

ಊಹುಂ. ರೈತರು ನೀರು ಮುಟ್ಟಲಿಲ್ಲ. ಟೀ-ಬಿಸ್ಕತ್‌ನತ್ತ ನೋಡಲೂ ಇಲ್ಲ. ಇದನ್ನು ಕಂಡ ಪೊಲೀಸರು ಟೀ-ನೀರು ಕುಡಿಯಿರಿ ಎಂದು ರೈತರಿಗೆ ಮನವಿ ಮಾಡಿದರು. ಸುಮ್ಮನಿರಿ ಸ್ವಾಮೀ, ಟೀ ಕೊಟ್ಟು ಆ ಮ್ಯಾಲೆ ಸಚಿವರು ಭೂ ಸ್ವಾಧೀನಕ್ಕೆ ರೈತರ ಒಪ್ಪಿಗೆ ಇದೆ ಎಂದು ಹೇಳಿಬಿಟ್ಟಾರು.. ಈ ಅಧಿಕಾರಿಗಳು, ರಾಜಕಾರಣಗಳನ್ನು ನಂಬಕಾಗಕ್ಕಿಲ್ಲ. ಮೊದಲು ಭೂಸ್ವಾಧೀನ ಕೈಬಿಡುತ್ತೇವೆ ಎನ್ನಲಿ, ಆಮೇಲೆ ಬೇಕಾದರೆ ಊಟ ಹಾಕಿಸಿದರೂ ಮಾಡಿಕೊಂಡೇ ಹೋಗುತ್ತೇವೆ ಎನ್ನುವುದೇ!

ಲಾಡ್ ಬಂದ್ರು ಓಡು ಓಡು: ಧಾರವಾಡಕ್ಕೆ ಲಾಡ್ ಅರ್ಥಾತ್ ಸಂತೋಷ್ ಲಾಡ್ ಸಾಹೇಬ್ರು ಬಂದ್ರು ಅಂದ್ರೆ ಸಾಕು ಅಧಿಕಾರಿಗಳು ಓಡು ಓಡು ಎನ್ನುತ್ತಾರೆ... ಯಾಕೆ ಅಂದ್ರೆ ನಮ್‌ ಲಾಡ್‌ ಸಾಹೇಬ್ರು ಬಹಳ ಟಾಕುಟೀಕು. ಬೆಳಗ್ಗೆದ್ದು ರನ್ನಿಂಗ್‌ ಮಾಡೋದೇನು... ಉಪವಾಸ ಮಾಡೋದೇನು... ಫಿಜಿಕಲಿ ಅಂಡ್ ಮೆಂಟಲಿ ಟಫ್ ಮಿನಿಸ್ಟ್ರು...

ಇಂತಹ ಮಿನಿಸ್ಟ್ರು ಅದ್ಯಾಕೋ ಇತ್ತೀಚೆಗೆ ಧಾರವಾಡಕ್ಕೆ ಸಿಕ್ಕಾಪಟ್ಟೆ ಬರಲಾರಂಭಿಸಿದ್ದಾರೆ. ರಾಜ್ಯೋತ್ಸವದ ವೇಳೆ ಬರೋಬ್ಬರಿ ನಾಲ್ಕು ದಿನ ಧಾರವಾಡ-ಹುಬ್ಬಳ್ಳಿ-ಕಲಘಟಗಿ ಪ್ರವಾಸ ಇಟಕೊಂಡಿದ್ರು. ನಾಲ್ಕೂ ದಿನ ಆಫೀಸರುಗಳು ಪಟ್ಟ ಪಾಡು ನೋಡಲಾಗದು. ಡೀಸಿ, ಸಿಇಓಗಳಂತೂ ಅವರ ಬೆನ್ನಲ್ಲೇ ಇದ್ರು. ಫುಲ್ ಸ್ಪೀಡ್ನಲ್ಲಿರೋ ಲಾಡ್ ಸಾಹೇಬರ ಸ್ಪೀಡಿಗೆ ಅಧಿಕಾರಿಗಳು ಕಂಗಾಲು. ಮೊದಲೇ ಉಪವಾಸ ಮಾಡೋ ಮಿನಿಸ್ಟ್ರಿಗೆ ಊಟ ತಿಂಡಿ ಚಿಂತೆಯಿಲ್ಲ. ಹೀಗಾಗಿ ಅಧಿಕಾರಿಗಳಿಗೂ ಉಪವಾಸ.

ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ನೀಡಬೇಕು: ಕೆ.ಎಸ್.ಈಶ್ವರಪ್ಪ

ಇದೆಲ್ಲ ನೋಡಿ ಬ್ಯಾಸರಾದ ಅಧಿಕಾರಿಯೊಬ್ಬ ಲಾಡ್ ಸಾಹೇಬ್ರ ಪಿಎ ಬಳಿ ಬಂದು... ಸರ... ಲಾಡ್‌ ಸಾಹೇಬ್ರು ವಾರಕ್ಕೆ ಎರಡ್ಮೂರು ದಿನಾ ಧಾರವಾಡದಲ್ಲೇ ವಸ್ತಿ ಮಾಡಕತ್ತಾರು. ಹೇಂಗಾದರೂ ಮಾಡಿ ತಿಂಗಳಿಗೆ ಎರಡ್ಮೂರು ದಿನ ಮಾತ್ರ ಧಾರವಾಡ ಪ್ರವಾಸ ಹಾಕೊಳ್ಳುವಂಗ ನೀವ ಏನಾದರೂ ಮಾಡ್ರಲಾ ಎಂದು ಕೇಳಿಕೊಂಡರಂತೆ... ಅದಕ್ಕೆ ಆ ಪಿ.ಎ. ಏನು ಹೇಳಿದರೋ ಗೊತ್ತಿಲ್ಲ. ಆದರೆ, ಲಾಡ್ ಸಾಹೇಬರ ಧಾರವಾಡ ವಾಸ ಇನ್ನುಮುಂದೆ ಮತ್ತೂ ಹೆಚ್ಚಾಗಲಿದೆ ಅಂತ ಸುದ್ದಿ ಇದೆ. 

ಆತ್ಮಭೂಷಣ್
ಲಿಂಗರಾಜು ಕೋರಾ
ಬಸವರಾಜ ಹಿರೇಮಠ

click me!