ರಿಪೋರ್ಟರ್ಸ್‌ ಡೈರಿ: ಎಂ.ಬಿ.ಪಾಟೀಲ್‌ ಒಯ್ಯುವ ಸೀರೆ ಮನೆಯಲ್ಲಿ ಸೆಲೆಕ್ಟ್ ಆಗಲ್ಲ

By Kannadaprabha News  |  First Published Nov 11, 2024, 11:31 AM IST

ರೀ ಯತ್ನಾಳರೇ, ನನ್ನ ಪತ್ನಿ ಆಶಾ ಪಾಟೀಲಗೆ ನಾನು ಎರಡು ಬ್ಯಾಗ್ ಬಟ್ಟೆ ಹಾಗೂ ಮೂರು ಸೀರೆ ತಗೊಂಡೆ. ಖಾದಿ ಉತ್ಸವದಲ್ಲಿ ನೀವೇನೂ ತಗೊಂಡಿಲ್ವಾ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಕಿಚಾಯಿಸಿದರು.


ರೀ ಯತ್ನಾಳರೇ, ನನ್ನ ಪತ್ನಿ ಆಶಾ ಪಾಟೀಲಗೆ ನಾನು ಎರಡು ಬ್ಯಾಗ್ ಬಟ್ಟೆ ಹಾಗೂ ಮೂರು ಸೀರೆ ತಗೊಂಡೆ. ಖಾದಿ ಉತ್ಸವದಲ್ಲಿ ನೀವೇನೂ ತಗೊಂಡಿಲ್ವಾ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಕಿಚಾಯಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿದ್ದ ನೂರಾರು ಜನರು ಗೊಳ್ಳೆಂದು ನಕ್ಕರು. ಇದಕ್ಕೆ ತಿರುಗೇಟು ನೀಡಿದ ಯತ್ನಾಳ, ‘ಎಂ.ಬಿ.ಪಾಟೀಲರೇ ನೀವು ತಗೊಂಡು ಹೋಗಿದ್ದು ಮನೆಯಲ್ಲಿ ಸೆಲೆಕ್ಟ್ ಆಗಲ್ಲ’ ಎಂದು ಬಿಡಬೇಕೆ! ಆಗ ಜನರೆಲ್ಲ ನಗೆಗಡಲಲ್ಲಿ ತೇಲಿದರು.

ಇದೆಲ್ಲ ನಡೆದಿದ್ದು, ನ.1ರಂದು. ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಖಾದಿ ಉತ್ಸವದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ. ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡುತ್ತಿದ್ದ ವೇಳೆ ಸಚಿವ ಎಂ.ಬಿ.ಪಾಟೀಲ ಹಾಗೂ ಶಾಸಕ ಯತ್ನಾಳರ ಮಧ್ಯೆ ನಡೆದ ಹಾಸ್ಯ ಚಟಾಕಿಯಿದು. ಈ ಇಬ್ಬರು ನಾಯಕರ ಮಾತಿನಿಂದ ವೇದಿಕೆ ಮೇಲಿದ್ದವರು ಸುಮಾರು ನಿಮಿಷಗಳ ಕಾಲ ನಗೆಗಡಲಲ್ಲಿ ತೇಲಿದರು. ಮತ್ತೆ ತಿರುಗೇಟು ನೀಡಲು ಮುಂದಾದ ಸಚಿವ ಎಂ.ಬಿ.ಪಾಟೀಲರು ‘ಯತ್ನಾಳರೇ... ನಾನು ಬಾಪುಗೌಡ (ಖಾದಿ ಅಸೋಸಿಯೇಷನ್ ಅಧ್ಯಕ್ಷ) ಅವರು ಕೊಡಿಸಿದ್ದಾರೆ ಅಂತ ಆಶಾಗೆ (ಎಂ.ಬಿ.ಪಾಟೀಲ ಪತ್ನಿ) ಹೇಳ್ತೀನಿ’ ಎಂದರು. 

Latest Videos

ಕಣ್ಣೀರು ಹೇಳಿ ಕೇಳಿ ಬರುವುದಿಲ್ಲ, ಚನ್ನಪಟ್ಟಣವನ್ನು ಮಾದರಿ ಕ್ಷೇತ್ರ ಮಾಡುತ್ತೇನೆ: ನಿಖಿಲ್‌ ಕುಮಾರಸ್ವಾಮಿ

ಜತೆಗೆ, ‘ಚಲೋ ಇವೆ, ಯಾಕೆಂದರೆ ಇವುಗಳನ್ನು ಕೈಯಿಂದ ತಯಾರಿಸಿದ್ದಾರೆ’ ಎಂದರು. ಇನ್ನೇನು ಈ ವಿಷಯ ಎಳೆದಾಡುವುದೋ ಎಂಬಂತೆ ನಾಳೆ ನಾನು ಖರೀದಿ ಮಾಡ್ತೇನೆ ಎಂದು ಯತ್ನಾಳ ಹೇಳಿದರು. ಆಗ ಮಹಿಳೆಯೋರ್ವರು ‘ಆ ಮೇಲೆ ಶೈಲಜಾ (ಶಾಸಕ ಬಸನಗೌಡ ಪಾಟೀಲ ಅವರ ಪತ್ನಿ) ಮೇಡಂ ಬರ್ತಾರೆ’ ಎಂದರು. ಇದಕ್ಕೆ ತಕ್ಷಣವೇ ಮಾರುತ್ತರ ನೀಡಿದ ಯತ್ನಾಳ್‌ ‘ಓಹೋ ಹಾಗೋ.... ಹಾಗಾದರೆ ನಮ್ಮ ಮೇಡಂ ಅವರು ಬೆಂಗಳೂರಿನಲ್ಲಿದ್ದಾರೆ’ ಎಂದರು. ಹೀಗೆ ಲಹರಿ ಕೆಲ ಕಾಲ ಮುಂದುವರೆಯಿತು. ಆದರೆ, ಖಾದಿ ಉತ್ಸವದಲ್ಲಿ ಖರೀದಿ ಮಾತ್ರ ಥಂಡಾ ಹೊಡೆದಿತ್ತು.

ಉಪಚುನಾವಣೆ ತಾಲೀಮು ಶುರು
ಕಾರವಾರ ಶಾಸಕ ಸತೀಶ್‌ ಸೈಲ್ ಕಬ್ಬಿಣದ ಅದಿರು ಸಾಗಾಟ ಪ್ರಕರಣದಲ್ಲಿ ಅಪರಾಧಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿ 7 ವರ್ಷ ಜೈಲು ಶಿಕ್ಷೆ ವಿಧಿಸುತ್ತಿದ್ದಂತೆ ಕಾರವಾರ ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣೆಯ ವಾಸನೆ ಹಿಡಿದು ಅಭ್ಯರ್ಥಿಗಳು ಧುತ್ತೆಂದು ಹುಟ್ಟಿಕೊಂಡಿದ್ದಾರೆ. ಸತೀಶ್‌ ಸೈಲ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅವರ ಶಾಸಕತ್ವವನ್ನೂ ಅನರ್ಹಗೊಳಿಸಲಾಗಿಲ್ಲ. ಅಷ್ಟರಲ್ಲೆ ಕೆಲವರು ತಮಗೆ ಟಿಕೆಟ್ ಎಂದು ಕ್ಷೇತ್ರದಲ್ಲಿ ಓಡಾಟ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿ ಒಮ್ಮೆ ಗೆದ್ದು, ನಂತರ 2023ರ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ ರೂಪಾಲಿ ಎಸ್. ನಾಯ್ಕ ಬಿಜೆಪಿಯ ಪ್ರಬಲ ಆಕಾಂಕ್ಷಿ. 

ಶ್ಯೂರಿಟಿ ಇಲ್ಲದೆ ಸಾಲ ಕೊಡಿಸುವುದಾಗಿ ವಂಚನೆ: ಮೂವರ ಮೇಲೆ ಎಫ್‌ಐಆರ್‌

ಈ ನಡುವೆ ಸೈಲ್‌ಗೆ ಶಿಕ್ಷೆಯಾಗುತ್ತಿದ್ದಂತೆ ಮಾಜಿ ಸಚಿವ, ಜೆಡಿಎಸ್‌ನ ಆನಂದ ಅಸ್ನೋಟಿಕರ್ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಇದೀಗ ಆನಂದ ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ಶುರುವಿಟ್ಟುಕೊಂಡಿದ್ದಾರೆ. ಕೆಲವರು ತೆರೆಯ ಮರೆಯಲ್ಲಿ ಟಿಕೆಟ್‌ಗಾಗಿ ಕಸರತ್ತು ಆರಂಭಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಲ್ಲೂ ಇಂತಹ ಮುಖಂಡರು ಕಾಣಸಿಗುತ್ತಾರೆ. ಸತೀಶ ಸೈಲ್ ಶಾಸಕ ಸ್ಥಾನ ಇರಲಿದೆಯೇ, ಕಳೆದುಕೊಳ್ಳಲಿದ್ದಾರೆಯೆ ಎನ್ನುವುದು ಹೈಕೋರ್ಟ್‌ ಆದೇಶವನ್ನು ಅವಲಂಬಿಸಿದೆ. ಆದರೆ ಅದೇನೇ ಆಗಲಿ. ಇಲ್ಲಿ ಚುನಾವಣಾ ತಾಲೀಮು ಆರಂಭಿಸಿರುವುದಂತೂ ಸತ್ಯ.

-ಶಶಿಕಾಂತ ಮೆಂಡೆಗಾರ
-ವಸಂತಕುಮಾರ್ ಕತಗಾಲ

click me!